ʻಹುಲಿಯ ಉಗುರುʼ ಗಲಾಟೆ ಯುದ್ಧದ ಸ್ವರೂಪ ಪಡೆಯುತ್ತಿದ್ದಂತೆ ಅರಣ್ಯ ಇಲಾಖೆಯವರು ಎಚ್ಚೆತ್ತಿದ್ಧಾರೆ. ಯಾಕಾದ್ರೂ ಈ ವಿಷಯವನ್ನ ಎತ್ತಿಕೊಂಡೆವೋ ಎಂದು ಪರದಾಡುವಂತಾಗಿದೆ. ಅದಕ್ಕೆ ಕಾರಣ ಹಳ್ಳಿಕಾರ್ ಸಂತೋಷ್ ಅರೆಸ್ಟ್ ಬೆನ್ನಲ್ಲೇ ಪಕ್ಷಭೇದವಿಲ್ಲದೆ ಎಲ್ಲ ರಾಜಕಾರಣಿಗಳ, ಅವರ ಮಕ್ಕಳು, ಸ್ಟಾರ್ ನಟ, ನಟಿಯರ ಕೊರಳಲ್ಲಿ ಪತ್ತೆಯಾದ ಹುಲಿ ಉಗುರಿನ ಲಾಕೆಟ್ಟುಗಳು. ಸದ್ಯಕ್ಕೆ ಅರೆಸ್ಟ್ ಆಗಿದ್ದ ಸಂತೋಷ್ ಜಾಮೀನಿನ ಮೇಲೆ ಹೊರಬಂದಿದ್ದರೂ, ಬಡವರಾಗಿರುವ ಚಿಕ್ಕಮಗಳೂರಿನ ಇಬ್ಬರೂ ಅರ್ಚಕರು ಜೈಲಿನಲ್ಲೇ ಇದ್ಧಾರೆ. ಕೋಟಿ ಕೋಟಿ ಇರುವ ಶ್ರೀಮಂತರು ತಮ್ಮ ಬಳಿ ಇರುವುದು ಡೂಪ್ಲಿಕೇಟ್ ಹುಲಿ ಉಂಗುರ ಎಂದು ಹೇಳಿದ್ದನ್ನು ಅಧಿಕಾರಿಗಳು ಒಪ್ಪಿದ್ಧಾರೆ ಮತ್ತು ಅರೆಸ್ಟ್ ಮಾಡಿಲ್ಲ. ಈ ನಡುವೆ ನವಿಲು ಗರಿ ವಿಷಯವೂ ಭರ್ಜರಿಯಾಗಿ ಸುದ್ದಿಯಾಗಿತ್ತು. ಆದರೆ ಈಗ ಕ್ಲಾರಿಫಿಕೇಷನ್ ಸಿಕ್ಕಿದೆ.
ನವಿಲುಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಹಾಗೂ ಮಾರಾಟ ಮಾಡುವುದು ಅಪರಾಧ ಅಲ್ಲ. ಆದರೆ ಅವುಗಳನ್ನು ರಫ್ತು ಮಾಡುವಂತಿಲ್ಲ. ನವಿಲುಗಳನ್ನು ಕೊಲ್ಲುವಂತಿಲ್ಲ. ನವಿಲುಗಳಿಂದ ನೈಸರ್ಗಿಕವಾಗಿ ಬಿದ್ದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನು ಬಾಹಿರವಲ್ಲ. ಅದೇ ನವಿಲುಗಳಿಗೆ ಹಿಂಸೆ ನೀಡಿ ಗರಿಗಳನ್ನು ಕೀಳುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದ್ಧಾರೆ ಸಚಿವ ಈಶ್ವರ ಖಂಡ್ರೆ.
ವಿವಾದವಾಗಿದ್ದು ಏಕೆ?
ಹುಲಿ ಉಗುರು ಸುದ್ದಿ ಹೊರಬಿದ್ದ ಬೆನ್ನಲ್ಲೇ ಅರಣ್ಯ ಇಲಾಖೆಯ ಕಾನೂನಿನ ಪ್ರತಿ ಹಿಡಿದು ನವಿಲು ಗರಿ ಇಟ್ಟುಕೊಳ್ಳೋದೂ ಅಪರಾಧ ಎಂದು ಸುದ್ದಿಯಾಯಿತು. ಪ್ರಧಾನಿ ನರೇಂದ್ರ ಮೋದಿ, ಡಿಕೆ ಸುರೇಶ್ ನವಿಲು ಹಾರ ಹಾಕಿಕೊಂಡಿದ್ದ ಫೋಟೋಗಳು ವೈರಲ್ ಆದವು. ಅರ್ಚಕರ ಬಂಧನವಾಗುತ್ತಿದ್ದಂತೆಯೇ ಬಿಜೆಪಿಯ ಕೆಲವು ಶಾಸಕರು ಆಕ್ರೋಶಗೊಂಡರು. ಹಾಗಾದರೆ ದರ್ಗಾಗಳಿಗೆ ರೇಡ್ ಮಾಡಿ, ನವಿಲುಗರಿ ಹೊಗೆ ಹಾಕುವ ಮೌಲ್ವಿಗಳನ್ನು, ಬಾಬಾಗಳನ್ನೂ ಅರೆಸ್ಟ್ ಮಾಡಿ ಎಂದು ಆಕ್ರೋಶ ಹೊರಹಾಕಿದರು. ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ ಖಂಡ್ರೆ ಈ ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದನ್ನೂ ವಿವಾದ ಮಾಡುತ್ತಾರೆ. ಕಾಯ್ದೆ ಪ್ರಕಾರ ನವಿಲುಗರಿಗಳ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ನವಿಲುಗರಿ ಮತ್ತು ಅದರಿಂದ ತಯಾರಿಸಿ ಯಾವುದೇ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ನವಿಲುಗಳಿಂದ ನೈಸರ್ಗಿಕವಾಗಿ ಬಿದ್ದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನು ಬಾಹಿರವಲ್ಲ. ಅದೇ ನವಿಲುಗಳಿಗೆ ಹಿಂಸೆ ನೀಡಿ ಗರಿಗಳನ್ನು ಕೀಳುವುದು ಶಿಕ್ಷಾರ್ಹ ಅಪರಾದ ಎಂದು ಸ್ಪಷ್ಟಪಡಿಸಿದ್ದಾರೆ ಈಶ್ವರ ಖಂಡ್ರೆ.
ಇನ್ನು ಈ ರೀತಿಯ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಂಡಿದ್ದರೆ, ತಕ್ಷಣವೇ ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕು ಎಂದಿರುವ ಈಶ್ವರ ಖಂಡ್ರೆ, ಅದಕ್ಕೆ ಎರಡು ತಿಂಗಳ ಕಾಲಾವಕಾಶ ಕೊಡುವುದಾಗಿ ತಿಳಿಸಿದ್ದಾರೆ. ಆದರೆ ಇಲ್ಲಿಯೂ ಕೆಲವು ಗೊಂದಲಗಳಿವೆ. ಕೆಲವು ಮನೆಗಳಲ್ಲಿ ತಲೆತಲಾಂತರಗಳಿಂದಲೂ ಆನೆಯ ದಂತಗಳು, ಜಿಂಕೆ ಕೊಂಬುಗಳು, ಕೋಣದ ಕೊಂಬುಗಳು..ಇತ್ಯಾದಿ ಇತ್ಯಾದಿಗಳಿವೆ. ಕಾನೂನು ಬರುವ ಮುಂಚೆ, ಬೇಟೆ ನಿರ್ಭೀತವಾಗಿ ನಡೆಯುತ್ತಿದ್ದ ಕಾಲದಲ್ಲಿ ಸಂಗ್ರಹವಾದ ಪ್ರಾಣಿಗಳ ಅಂಗಾಂಗಳವು. ಅವುಗಳನ್ನು ಕೆಲವರು ಲೈಸೆನ್ಸ್ ಪಡೆದುಕೊಂಡು ಇಟ್ಟುಕೊಂಡಿದ್ಧಾರೆ. ಅವರದ್ದೇನು ಗತಿ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.



