ಕಾವೇರಿ ವಿಷಯದಲ್ಲಿ (Kaveri) ಮತ್ತೊಮ್ಮೆ ಸಿದ್ದರಾಮಯ್ಯ (CM Siddaramaiah) ಅವರಿಗೆ ಬರೆ ಬಿದ್ದಿದೆ. ಅವರ ಜೊತೆ ಕರ್ನಾಟಕಕ್ಕೂ ಬರೆ ಬಿದ್ದಿದೆ. ಕಾವೇರಿ ನದಿಯಿಂದ ತಮಿಳುನಾಡಿಗೆ (Tamilnadu) ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಆದೇಶ ರಾಜ್ಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏಕೆಂದರೆ ರಾಜ್ಯದಲ್ಲಿ ಮಳೆ ಇಲ್ಲ. ಬರಗಾಲದ ಪರಿಸ್ಥಿತಿ ಎದುರಾಗಿದೆ. ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿಗೆ ನಿರ್ಮಿಸಿರುವ ಕೃಷ್ಣರಾಜ ಸಾಗರ (KRS dam) ಜಲಾಶಯದಲ್ಲಿ ನೀರಿನ ಮಟ್ಟ 21 ಸಾವಿರ ಟಿಎಂಸಿಗೆ ಕುಸಿತವಾಗಿದೆ. ಆದರೆ, ಪುನಃ ಕಾವೇರಿ ನೀರು ನಿಯಂತ್ರಣಾ ಸಮಿತಿಯ (CWRC) ಸಭೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 5,000 ಕ್ಯೂಸೆಕ್ಸ್ ನೀರನ್ನು ಹರಿಸುವಂತೆ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ಗೆ (Supreme court) ಈಗಾಗಲೇ ಅಫಿಡವಿಟ್ ಸಲ್ಲಿಸಿರುವ ಕರ್ನಾಟಕ, ಸೆಪ್ಟೆಂಬರ್ 12ರ ನಂತರ ನೀರು ಬಿಡಲು ಕಷ್ಟ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ನಲ್ಲಿ ಅಫಿಡೆವಿಟ್ (Affidavit) ಸಲ್ಲಿಸಿದ್ರೂ ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆಯಿದೆ. ಸೆ.21 ನೇ ತಾರೀಖಿನಂದು ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ಅರ್ಜಿ ವಿಚಾರಣೆ ಬರಲಿದೆ. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯೋ ಸಾಧ್ಯತೆಯಿದೆ. ಈಗ ಸಿಡಬ್ಲ್ಯೂಆರ್ಸಿ (CWRC) ಸಭೆಯಲ್ಲಿ ಕರ್ನಾಟಕಕ್ಕೆ ಹಿನ್ನಡೆಯುಂಟಾದ ಬೆನ್ನಲ್ಲೇ ಸಭೆಯತ್ತ ಕರ್ನಾಟಕದ ಚಿತ್ತವನ್ನು ನೆಟ್ಟಿದೆ.
ಈ ವಿಚಾರ ಕುರಿತಂತೆ ತುರ್ತು ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ, (CM Siddaramaiah) ಸರ್ವಪಕ್ಷ ಸಭೆ (All party meeting) ಕರೆದಿದ್ದಾರೆ. ಕಾವೇರಿ ವಿಷಯದಲಿಲ ರಾಜ್ಯ ಸರ್ಕಾರ ಎಡವಿದೆ ಎಂಬುದು ಎಲ್ಲ ಪ್ರತಿಪಕ್ಷಗಳ ಆರೋಪ. ಆದರೆ ಡಿಸಿಎಂ ಹಾಗೂ ನೀರಾವರಿ ಸಚಿವ ಡಿಕೆ ಶಿವಕುಮಾರ್, (DCM DK shivakumar) ರೈತರ ಪ್ರತಿಭಟನೆಯನ್ನೂ ಲೇವಡಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ, ಸಚಿವರು ಯಾರೆಲ್ಲ ಇದ್ದಾರೋ.. ಅವರ್ಯಾರೂ ಪ್ರತಿಭಟನೆಗೆ ಕವಡೆ ಕಾಸಿನ ಕಿಮ್ಮತ್ತೂ ಕೊಟ್ಟಿರಲಿಲ್ಲ. ರಾಜ್ಯ ಸರ್ಕಾರ ತಪ್ಪು ಮಾಡಿದೆ, ಸಮಯ ಬಂದಾಗ ಹೇಳುತ್ತೇನೆ ಎಂದಿದ್ದರು ಮಾಜಿ ಪ್ರಧಾನಿ ದೇವೇಗೌಡ.
ನೀರು ಹಂಚಿಕೆ, ಕಾನೂನು ಹೋರಾಟದ ವಿಷಯಗಳಲ್ಲಿ ದೇವೇಗೌಡರಿಗೆ (HD Devegowda) ಸರಿ ಸಾಟಿ ಇಲ್ಲ. ರಾಜ್ಯದ ಹಿತ ರಕ್ಷಣೆ ವಿಷಯದಲ್ಲಿ ರಾಜಕೀಯವನ್ನೂ ಮೀರಿ ಬಂದಿರುವ ದೇವೇಗೌಡ (HD Devegowda) , ಕಳೆದ ಬಾರಿ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿದ್ದರು. ರಾಜಕೀಯ ದ್ವೇಷಕ್ಕಿಂತ ರಾಜ್ಯ ಮುಖ್ಯ ಎಂಬ ಸಂದೇಶ ಕೊಟ್ಟಿದ್ದರು. ಇದೀಗ ಮತ್ತೆ ಪ್ರಾಬ್ಲಂ ಸೃಷ್ಟಿಯಾಗಿದೆ. ಈ ಬಾರಿ ಕಳೆದ ಬಾರಿಯ ಕಷ್ಟಕ್ಕಿಂತಲೂ ಭೀಕರವಾಗಿದೆ. ಜೊತೆಗೆ ರಾಜಕೀಯ ದ್ವೇಷವೂ ಅಷ್ಟೇ ಹೆಚ್ಚಿದೆ.
ಒಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಅನುಭವದಲ್ಲಿಯೇ ಎಲ್ಲವನ್ನೂ ನಿಭಾಯಿಸ್ತಾರಾ? ಎಲ್ಲ ರಾಜಕೀಯ ಪಕ್ಷಗಳನ್ನೂ ಒಟ್ಟಿಗೇ ತೆಗೆದುಕೊಂಡು ಹೋಗ್ತಾರಾ ಎಂಬ ಕುತೂಹಲವಂತೂ ಇದೆ. ಆದರೆ ಈ ಹಂತದಲ್ಲಿ ಆಡಳಿತಾರೂಢ ಕಾಂಗ್ರೆಸ್, ಈ ಮೊದಲು ಬಿಜೆಪಿ ಅಥವಾ ಜೆಡಿಎಸ್ ಸಲಹೆ ತೆಗೆದುಕೊಂಡಿಲ್ಲ ಎನ್ನುವುದೇ ಒಮ್ಮತದ ಧ್ವನಿ ಹೊರಬೀಳುವುದು ಕಷ್ಟ ಎಂಬ ಸುಳಿವು ಕೊಟ್ಟಿದೆ. ಆದರೆ, ಇದು ರಾಜ್ಯದ ವಿಷಯ. ರಾಜಕೀಯ ವಿಷಯ ಅಲ್ಲ.



