ದೇವರು, ಧರ್ಮವನ್ನು ನಂಬದವರು.. ದೇವರು, ಧರ್ಮವನ್ನೇ ಬದುಕಾಗಿಸಿಕೊಂಡಿರುವ ವ್ಯಕ್ತಿಯ ಪಾತ್ರ ಮಾಡಿದರೆ.. ಹೇಗಿರುತ್ತೆ..? ಇದು ಈಗ ಮೋದಿ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಈ ಪ್ರಶ್ನೆ ಈಗ್ಯಾಕೆ ಎಂದರೆ.. ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಮೋದಿಯ ಬಯೋಪಿಕ್ʻನಲ್ಲಿ ಮೋದಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.
ನರೇಂದ್ರ ಮೋದಿ. ಪ್ರೀತಿಸಬಹುದು ಅಥವಾ ದ್ವೇಷಿಸಬಹುದು. ಆದರೆ.. ಇತ್ತೀಚಿನ ದಶಕಗಳಲ್ಲಿ ಮೋದಿ ಏರಿದ ಎತ್ತರಕ್ಕೆ ಏರಿದ ಇನ್ನೊಬ್ಬ ನಾಯಕನಿಲ್ಲ. ಚಹಾ ಮಾರುತ್ತಿದ್ದ ಹುಡುಗನೊಬ್ಬ 13 ವರ್ಷ ಸಿಎಂ ಆಗಿ, 10 ವರ್ಷ ಪಿಎಂ ಆಗಿ.. ಇನ್ನೂ 5 ವರ್ಷದ ಮರು ಆಯ್ಕೆಗೆ ಹೋರಾಡುತ್ತಿರುವ ಮೋದಿಯ ಜೀವನ ರೋಚಕ ಗಾಥೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಹೀಗಾಗಿಯೇ ಮೋದಿಯ ಲೈಫ್ ಸ್ಟೋರಿ ಮತ್ತೊಮ್ಮೆ ಸಿನಿಮಾ ಆಗುತ್ತಿದೆ.
2019ರ ಎಲೆಕ್ಷನ್ ಸಮಯದಲ್ಲಿ ‘ಪಿಎಂ ನರೇಂದ್ರ ಮೋದಿ’ ಎಂಬ ಸಿನಿಮಾ ರಿಲೀಸ್ ಆಗಿತ್ತು. ತರಾತುರಿಯಲ್ಲಿ ಮಾಡಿದ್ದ ಆತುರದ ಅಡುಗೆಯಂತಿದ್ದ ಆ ಸಿನಿಮಾ, ಬಾಕ್ಸಾಫೀಸ್ ಯಶಸ್ಸು ಕಂಡಿತಾದರೂ.. ನೋಡುಗರ ನಿರೀಕ್ಷೆ ಮುಟ್ಟಿರಲಿಲ್ಲ. ಇದೀಗ ಮತ್ತೊಮ್ಮೆ ಮೋದಿಯ ಬಯೋಪಿಕ್ ಸಿದ್ಧವಾಗುತ್ತಿದ್ದು, ಈ ಬಾರಿ ಮೋದಿ ಪಾತ್ರವನ್ನು ತಮಿಳು ನಟ ಸತ್ಯರಾಜ್ ಅವರು ನಿಭಾಯಿಸಲಿದ್ದಾರೆ ಎಂದು ಹೇಳಲಾಗಿದೆ.
69 ವರ್ಷದ ಸತ್ಯರಾಜ್ ತಮಿಳು ಚಿತ್ರರಂಗದಲ್ಲಿ ಹೀರೋ ಆಗಿದ್ದವರು. ಸ್ಟಾರ್ ನಟರಾಗಿದ್ದ ಸತ್ಯರಾಜ್ ಅವರನ್ನು ಇಡೀ ಭಾರತ ಚಿತ್ರರಂಗಕ್ಕೆ ಪರಿಚಯಿಸಿದ್ದು ಬಾಹುಬಲಿಯ ಕಟ್ಟಪ್ಪನ ಪಾತ್ರ. ಕನ್ನಡ, ಹಿಂದಿ, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ನಟಿಸಿರುವ ಸತ್ಯರಾಜ್, ಮೋದಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಯಲ್ಲಿದೆ.
ಓಮಂಗ್ ಕುಮಾರ್ ನಿರ್ದೇಶನದಲ್ಲಿ ವಿವೇಕ್ ಓಬೆರಾಯ್ ನಟಿಸಿದ್ದ ‘ಪಿಎಂ ನರೇಂದ್ರ ಮೋದಿ’ ಸಿನಿಮಾದಲ್ಲಿ ನರೇಂದ್ರ ಮೋದಿ ಅವರ ಬಾಲ್ಯದಿಂದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗಿನ ಕಥೆ ಇತ್ತು. ಆದರೆ ಈಗ ಕೇಳಿ ಬರುತ್ತಿರುವ ಈ ಬಯೋಪಿಕ್‌ನಲ್ಲಿ ಯಾವೆಲ್ಲಾ ವಿಚಾರಗಳು ಇರಲಿವೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಚಿತ್ರತಂಡ ಸತ್ಯರಾಜ್ ಜೊತೆ ಸಂಪರ್ಕದಲ್ಲಿದೆಯಂತೆ.
ಆದರೆ.. ವಿಷಯವೇನು ಗೊತ್ತಾ..? ಸತ್ಯರಾಜ್ ಒಬ್ಬ ಏಥಿಯೆಸ್ಟ್. ಅಂದರೆ ದೇವರು, ಧರ್ಮ ಯಾವುದನ್ನೂ ನಂಬದ ವ್ಯಕ್ತಿ. ಇಂತಹ ವ್ಯಕ್ತಿ ಮೋದಿಯ ಪಾತ್ರ ಮಾಡಬೇಕಾ..? ಚರ್ಚೆ ಶುರುವಾಗಿದೆ. ಆದರೆ.. ಸತ್ಯರಾಜ್ ಪರ ಇರುವವರು ಹೇಳುವುದೇ ಬೇರೆ. ನಟನೆಯೇ ಬೇರೆ. ವೈಯಕ್ತಿಕ ನಂಬಿಕೆಗಳೇ ಬೇರೆ. ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವವರು ರಿಯಲ್ ಲೈಫಿನಲ್ಲಿ ಹೀರೋಗಳಾಗಿರ್ತಾರೆ. ಯಾರೂ ಕೂಡಾ ಸಿನಿಮಾದಲ್ಲಿ ತೋರಿಸಿದ್ದಂತೆಯೇ ಬದುಕುವುದಿಲ್ಲ ಎನ್ನುತ್ತಿದ್ಧಾರೆ. ಆದರೆ.. ಮೋದಿ ಅಪ್ಪಟ ದೈವಭಕ್ತ. ಅದನ್ನು ತೋರಿಕೆಯ ನಟನೆಯಲ್ಲಿ ತೋರಿಸಲು ಸಾಧ್ಯವಿಲ್ಲ ಎನ್ನುವುದು, ಭಕ್ತಿರಸವನ್ನು ಅನುಭವಿಸಬೇಕು, ಅದು ಸತ್ಯರಾಜ್ ಅವರಿಂದ ಸಾಧ್ಯವಿಲ್ಲ ಎಂಬ ವಾದ ಮೋದಿ ಅಭಿಮಾನಿಗಳದ್ದು.
ಇಷ್ಟಕ್ಕೂ ಸತ್ಯರಾಜ್ ಅವರೇ ಹೇಳುವಂತೆ.. ʻʻನನ್ನನ್ನು ಯಾರೂ ಮೋದಿ ಪಾತ್ರದಲ್ಲಿ ನಟಿಸಲು ಕಾಂಟ್ಯಾಕ್ಟ್ ಮಾಡಿಲ್ಲ. ನಾನು ಮೋದಿಯಾಗಿ ನಟಿಸುತ್ತೇನೆ ಎನ್ನುವುದು ಬೇರೆಯವರಿಗೆ ಸುದ್ದಿಯೋ.. ನನಗೂ ಹಾಗೆಯೇ ಸುದ್ದಿ. ಆಫರ್ ಬಂದರೆ.. ಖಂಡಿತಾ ಯೋಚನೆ ಮಾಡ್ತೇನೆ. ನಾಸ್ತಿಕರು.. ಆಸ್ತಿಕರ ಪಾತ್ರ ಮಾಡಬಾರದೆಂದೇನೂ ಇಲ್ಲವಲ್ಲ. ನಮ್ಮಲ್ಲೇ ರಾಧಾ ಅವರು ಅಪ್ಟಟ ನಾಸ್ತಿಕರಾಗಿದ್ದರು. ಆದರೆ.. ಅವರು ಹಲವು ಪೌರಾಣಿಕ ಚಿತ್ರಗಳಲ್ಲಿ, ದೈವಭಕ್ತನಾಗಿ ನಟಿಸಿದ್ದಾರೆ. ನಟನೆಯೇ ಬೇರೆ.. ನಂಬಿಕೆಗಳೇ ಬೇರೆʼʼ ಎಂದು ಉತ್ತರ ಕೊಟ್ಟಿದ್ದಾರೆ ಸತ್ಯರಾಜ್.



