ಕಾಟೇರ ಯಶಸ್ವಿ 2ನೇ ವಾರಕ್ಕೆ ಕಾಲಿಟ್ಟಿದ್ದಾನೆ. ಒಂದೇ ಒಂದು ಥಿಯೇಟರ್ ಕೂಡಾ ಕಮ್ಮಿಯಾಗಿಲ್ಲ. ಏಕೆಂದರೆ ಕಾಟೇರದ ಬಹುತೇಕ ಶೋಗಳು ಹೌಸ್ʻಫುಲ್ ಆಗುತ್ತಿವೆ. ಕಾಟೇರ ಗೆಲುವಿನ ಓಟ ಭಯಂಕರ.. ದರ್ಶನ್ ಅರಿ ಭಯಂಕರ.. ಅಂದಹಾಗೆ ಅರಿ ಎಂದರೆ ಹಳೆಗನ್ನಡದಲ್ಲಿ ಶತ್ರು ಎಂದರ್ಥ. ಒಟ್ಟಿನಲ್ಲಿ ದರ್ಶನ್ ತಮ್ಮ ಕ್ರಾಂತಿ ಚಿತ್ರದ ಸೋಲನ್ನ ಬಡ್ಡಿ ಸಮೇತ ವಸೂಲು ಮಾಡಿದ್ಧಾರೆ.
ಹಾಗೆ ನೋಡಿದರೆ ಮೊದಲನೇ ವಾರಕ್ಕೆ ಹೋಲಿಸಿದರೆ 2ನೇ ವಾರಕ್ಕೆ ಥಿಯೇಟರ್ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಕಾಟೇರ 2ನೇ ವಾರಕ್ಕೆ ಕಾಲಿಟ್ಟಿದೆ. ವಿಶೇಷವೆಂದರೆ ಈ ವಾರ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗಿಲ್ಲ. ಇದೂ ಕೂಡಾ ಕಾಟೇರ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನಬಹುದು.
ದರ್ಶನ್ ಅಭಿನಯದ ಕಾಟೇರ ಚಿತ್ರ ಬಾಕ್ಸಾಫೀಸ್ʻನಲ್ಲಿ ಸಂಚಲನ ಮೂಡಿಸಿದ್ದು, 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಜಡೇಶ್ ಹಂಪಿ ಕಥೆಗೆ ತರುಣ್ ಸುಧೀರ್ ನಿರ್ದೇಶನ ಮತ್ತು ಮಾಸ್ತಿಯ ಸಂಭಾಷಣೆ ಕಾಟೇರ ನೋಡಿದ ಪ್ರತಿಯೊಬ್ಬರೂ ಮೆಚ್ಚುವಂತೆ ಮಾಡಿದೆ. ಮಾಲಾಶ್ರೀ ಮಗಳು ಆರಾಧನಾ, ದರ್ಶನ್ ಎದುರು ಹೀರೋಯಿನ್.
ವಿಶೇಷವೆಂದರೆ ರಾಕ್ʻಲೈನ್ ನಿರ್ಮಾಣದ ಈ ಚಿತ್ರದ ಮೊದಲ ಹೀರೋ ಕಥೆ. ಆನಂತರ ನಿರ್ದೇಶಕ ಮತ್ತು ಸಂಭಾಷಣೆಕಾರರು ಬರುತ್ತಾರೆ. ಇಷ್ಟೂ ಜನರ ಒಟ್ಟಾರೆ ಶ್ರಮ ಮತ್ತು ಪ್ರತಿಭೆಯನ್ನು ತೆರೆಯ ಮೇಲೆ ಪ್ರತಿಬಿಂಬಿಸಿರುವ ದರ್ಶನ್, ಇಡೀ ತಂಡವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ನಿರ್ಮಾಪಕರಾಗಿ ರಾಕ್ʻಲೈನ್ ವೆಂಕಟೇಶ್ ಅವರ ವೃತ್ತಿ ಜೀವನದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರವೂ ಕೂಡಾ ಕಾಟೇರ. ಬೇರೆ ಭಾಷೆಗಳಲ್ಲಿ ರಾಕ್ʻಲೈನ್ ಇದಕ್ಕೂ ದೊಡ್ಡ ಯಶಸ್ಸು ಕಂಡಿದ್ಧಾರೆ.



