ನಟ ದರ್ಶನ್ ಸ್ಟಾರ್ʻಡಂ ಹಂಗು ಬಿಟ್ಟು ಹೊರಬಂದಿದ್ದಾರಾ..ಏಕೆಂದರೆ ಚಿತ್ರದಲ್ಲಿ ಬರೋ ಡೈಲಾಗ್ಸ್ ಹೀರೋ ದರ್ಶನ್ ಅವರಿಗಿಂತ ಹೆಚ್ಚಾಗಿ ಅವರ ಪಾತ್ರಕ್ಕೆ ಸಂಬಂಧಪಟ್ಟಿವೆ. ಈ ಹಿಂದೆ ಮಾಡಿದ್ದಂತೆ ಇಲ್ಲಿ ತಮ್ಮ ಪಾತ್ರದ ಮೂಲಕ ಇನ್ಯಾರಿಗೋ ಮೆಸೇಜ್ ಕೊಡುವ ಆಟಕ್ಕೆ ಹೋಗಿಲ್ಲ. ಕೇವಲ ಕ್ಯಾರೆಕ್ಟರ್ ಅಗಿದ್ದಾರೆ ನಟ ದರ್ಶನ್. ಅವುಗಳೆಲ್ಲದರ ಇಂಪ್ಯಾಕ್ಟ್ ಕಾಟೇರ ಟೀಸರಿನಲ್ಲಿ ಕಾಣುತ್ತಿದೆ. ಫೈನಲ್ ರಿಸಲ್ಟ್ ಎಂದರೆ ಕಾಟೇರ ಟ್ರೇಲರ್ ಬೊಂಬಾಟ್.. ಡೈಲಾಗ್ಸ್ ಸೂಪರ್ ಹಿಟ್..
ಒಂದು ಬಂದೂಕ್ ಅಲ್ಲ ನೂರ್ ಪಿರಂಗಿನೆ ಅಡ್ಡ ಬಂದ್ರು ನನ್ ತಡ್ದು ನಿಲ್ಸಕ್ಕಾಗಲ್ಲ
ಎಲ್ಲಾ ಹಾವುಗಳು ತಲೆ ಎತ್ತುತಾವೆ ಧಣಿ, ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತೋದು
ಅವ್ನು ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹೊತ್ಕೊಂಡು ಹೋಗುವವನಲ್ಲ. ಗರ್ಭಗುಡಿಗೆ ನುಗ್ಗಿ ದ್ಯಾವ್ರನ್ನೆ ಹೊತ್ಕೊಂಡು ಹೋಗುವವನು, ಊರ್ ಹೆಂಗುಸ್ರು ಹಟ್ಟಿ ಮುಂದೆ ನೀರಾಕಕ್ಕೆ ಹೆದ್ರುತಾರೆ, ಯಾಕ್ ಗೊತ್ತಾ…? ಅವ್ನು ಬೀದಿನೆಲ್ಲ ರಕ್ತದಲ್ಲಿ ಸಾರ್ಸಿಟ್ಟು ಹೋಗಿದ್ದ
ಇವ್ರೆಲ್ಲ ಹಾವುಗಳಿದ್ದಂಗೆ. ವಿಷ ಇಲ್ಲ ಅಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು..
ಕಾಟೇರದಲ್ಲಿ ಒಂದೊಂದು ಡೈಲಾಗ್ ಕೂಡಾ ಮಿಂಚು ಹರಿಸುತ್ತಿದೆ. ವಿಶೇಷವೆಂದರೆ ಈ ಯಾವ ಡೈಲಾಗುಗಳೂ ದರ್ಶನ್ʻಗೆ ಬಿಲ್ಡಪ್ ಕೊಡೋದಿಲ್ಲ. ಬದಲಿಗೆ ದರ್ಶನ್ ನಟಿಸಿರುವ ಪಾತ್ರದ ಗತ್ತು ಹೆಚ್ಚಿಸುವಂತಿವೆ. ಟ್ರೇಲರಿನಲ್ಲಿ ಆರಾಧನಾಗೆ ಇರೋದು ಒಂದೇ ಡೈಲಾಗ್. ಆ ಡೈಲಾಗ್ ಕೂಡಾ ಮಚ್ಚಿಟ್ಟು ಹೊಡೆದಂತಿದೆ. ವಿಲನ್ ಆಗಿ ಜಗಪತಿ ಬಾಬು ಅಬ್ಬರದ ಸುಳಿವೂ ಇದೆ.
ಹುಬ್ಬಳ್ಳಿಯಲ್ಲಿ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕರಾದ ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ ಸಾಥ್ ಕೂಡಾ ಇದ್ದರು. ಇವರು ಸಿನಿಮಾರಂಗದಿಂದ ಹೊರತಾದ ಗೆಸ್ಟುಗಳಾದರೆ, ಚಿತ್ರರಂಗದಿಂದ ಅಭಿಷೇಕ್, ಧನ್ವೀರ್ ಸೇರಿದಂತೆ ಹಲವರು ಹಾಜರಿದ್ದರು.
ಇಂದಿರಾ ಗಾಂಧಿ ಕಾಲದಲ್ಲಿ ನಡೆದ ನಿಜ ಘಟನೆಯನ್ನೇ ಸಿನಿಮಾ ಮಾಡಿದ್ದೀವಿ, ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾದ ನಡೆದ ಘಟನೆ ಇದು. 1974 ರ ಕಾಲದ ಕೆಲವು ಕಹಿ ಘಟನೆಗಳನ್ನು ಹೇಳಲು ಹೊರಟಿದ್ದೀವಿ. ಆವಾಗ ಬಾವಿಯಲ್ಲಿ ತುಂಬಾ ಜನರ ಮೂಳೆಗಳು ಸಿಕ್ಕಿತ್ತಂತೆ, ಆದರೆ ಆ ಮೂಳೆಗಳು ಯಾರದ್ದೆಂದು ಇಲ್ಲಿವರೆಗೆ ತಿಳಿದಿಲ್ಲ, ನಮ್ಮ ಸಿನಿಮಾದಲ್ಲಿಯೂ ಅದೇ ವಿಷಯ ಇದೆ ಎಂದ ದರ್ಶನ್ ಬೇರೆಯದೇ ಸಬ್ಜೆಕ್ಟ್ ಇದೆ ಅನ್ನೋದನ್ನು ಹೇಳಿಕೊಂಡರು.
ನಿರ್ದೇಶಕ ತರುಣ್ ಸುಧೀರ್ ಕಾಟೇರದಲ್ಲಿ ಬೇರೆಯದೇ ರೀತಿಯ ಕಥೆ ಹೇಳೋಕೆ ಹೊರಟಿದ್ದಾರೆ ಅನ್ನೋದ್ರು ಟ್ರೇಲರ್ ನೋಡುತ್ತಿದ್ಧಾಗಲೇ ಗೊತ್ತಾಗುತ್ತಿದೆ. ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಟ್ರೇಲರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದು, ೧ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
29ರಂದು ಈ ಸಿನಿಮಾ ತೆರೆಗೆ ಬರುತ್ತಿದ್ದು ವಿನೋದ್ ಆಳ್ವ, ವೈಜನಾಥ್ ಬಿರಾದಾರ್, ಮಾ ರೋಹಿತ್, ಕುಮಾರ್ ಗೋವಿಂದ್, ಶ್ರುತಿ, ಜಗಪತಿ ಬಾಬು, ರವಿಚೇತನ್, ಪದ್ಮಾವಾಸಂತಿ ಮುಂತಾದವರು ನಟಿಸಿದ್ದಾರೆ.
ಒಟ್ಟಿನಲ್ಲಿ ಸಿನಿಮಾ ಟ್ರೇಲರ್ ನೋಡಿದವರಿಗೆ ತಮಿಳಿನ ಕೆಲವು ಚಿತ್ರಗಳ ನೆರಳು ಕಾಣುತ್ತದೆಯಾದರೂ, ಆ ಮೇಕಿಂಗ್ ಸ್ಟೈಲ್ ತೆಗೆದುಕೊಂಡು ಬೇರೆಯದೇ ಸಿನಿಮಾ ಮಾಡಿರುವ ಸುಳಿವು ಕಾಣುತ್ತಿದೆ. ಈ ಹಿಂದೆ ರಾಬರ್ಟ್ ಸಿನಿಮಾದಲ್ಲಿ ಹಲವು ಸಿನಿಮಾಗಳ ಮಿಕ್ಸ್ ಮಸಾಲಾ ಮಾಡಿ ಏನಿವಾಗ.. ಎಂದಿದ್ದ ತರುಣ್ ಸುಧೀರ್, ಈ ಬಾರಿ ಆ ತಪ್ಪು ಆಗದಂತೆ ಎಚ್ಚರ ವಹಿಸಿದ್ದಾರೆ. ಅಭಿಮಾನಿಗಳು ಕಾಯ್ತಿದ್ದಾರೆ.



