ಈ ಹಿಂದೆ ಮಲಯಾಳಂ ಚಿತ್ರರಂಗದಲ್ಲಿ ಶಕೀಲಾ ಚಿತ್ರಗಳು ಹಿಟ್ ಆಗುತ್ತಿದ್ದ ಕಾಲ. ಶಕೀಲ ಅವರ ಬಿ ಗ್ರೇಡ್ ಸಿನಿಮಾಗಳ ಎದುರು ಮಮ್ಮೂಟಿ, ಮೋಹನ್ ಲಾಲ್ ಅಂತಹವರ ಚಿತ್ರಗಳೇ ಮಕಾಡೆ ಮಲಗುತ್ತಿದ್ದ ಸಮಯ. ಎ ಸರ್ಟಿಫಿಕೇಟ್ ಚಿತ್ರಗಳ ಆರ್ಭಟ ಎಷ್ಟರಮಟ್ಟಿಗಿತ್ತೆಂದರೆ ವಾರಕ್ಕೆರಡು ಸಿನಿಮಾಗಳು ಬಂದು ʻಹೆಚ್ಚು ಸೀನ್ಸ್ʼ ಚಿತ್ರಗಳು ಹಿಟ್ ಆಗುತ್ತಿದ್ದವು. ಆ ಕಾಲದಲ್ಲಿ ಮಲಯಾಳಂ ಚಿತ್ರರಂಗದವರೆಲ್ಲ ಸೇರಿ ಒಂದು ನಿರ್ಧಾರ ಮಾಡಿದರು. ಅದು ಬರಹಗಾರರಿಗೆ ಕಥೆಗಾರರಿಗೆ ಹೆಚ್ಚು ಹೆಚ್ಚು ಸಂಭಾವನೆ ಕೊಡುವ, ಒಳ್ಳೊಳ್ಳೆಯ ಕಥೆಗಳನ್ನು ಆಯ್ಕೆ ಮಾಡುವ ನಿರ್ಧಾರ ಕೈಗೊಂಡರು. ಅದನ್ನು ಇವತ್ತಿಗೂ ಪಾಲಿಸಿಕೊಂಡು ಬರಲಾಗುತ್ತಿದೆ.
ಈಗಲೂ ಕೂಡಾ ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ನಟ, ನಟಿಯರು, ನಿರ್ದೇಶಕರಿಗೆ ಸರಿಸಮಾನದ ಸಂಭಾವನೆಯನ್ನು ಅಲ್ಲಿನ ಕಥೆಗಾರರು ಪಡೆಯುತ್ತಿದ್ದಾರೆ. ಆದರೆ ಕನ್ನಡದಲ್ಲಿ.. ಸ್ಟಾರ್ ನಟರ ಚಿತ್ರಗಳು ಸೂಪರ್ ಹಿಟ್ ಆದರೂ ನಿರ್ದೇಶಕರಿಗೆ ದೊಡ್ಡ ಮಟ್ಟದ ಹೆಸರು ಸಿಗುವುದು ಅಪರೂಪ. ಇತ್ತೀಚೆಗೆ ಕಥೆಗಾರರು ಯಾರೆಂದು ಕೂಡಾ ಗೊತ್ತಾಗುವುದಿಲ್ಲ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನೆಲ್ಲ ಬರೆದು ನಿರ್ದೇಶನ ಮಾಡಿರುತ್ತಾರೆ. ಇನ್ನು ಕೆಲವು ನಿರ್ದೇಶಕರು ಸಂಗೀತ, ಕ್ಯಾಮೆರಾ, ಎಡಿಟಿಂಗ್ ಕೂಡಾ ತಾವೇ ಮಾಡಿಕೊಳ್ತಾರೆ. ಎಷ್ಟೋ ಬಾರಿ ಇಷ್ಟೆಲ್ಲ ಮಾಡಿದ ಮೇಲೆ ಸಿನಿಮಾ ನೋಡುವ ಪ್ರೇಕ್ಷಕರು ಅವರೇ ಆಗಿರುತ್ತಾರೆ.
ಆದರೆ ಕಾಟೇರ ಹಾಗಲ್ಲ. ಚಿತ್ರದ ಕಥೆ ಒಬ್ಬರದ್ದಾದರೆ, ಚಿತ್ರಕಥೆ ಮತ್ತೊಬ್ಬರದ್ದು. ಸಂಭಾಷಣೆ ಇನ್ನೊಬ್ಬರದ್ದು. ಒಟ್ಟಿನಲ್ಲಿ ಕಾಟೇರ ಟೀಂ ವರ್ಕ್ ಸಿನಿಮಾ. ಹೀಗಾಗಿಯೇ ಕಾಟೇರದ ಬರಹಗಾರರಿಗೆ ಭರಪೂರ ಹೆಸರು ಸಿಗುತ್ತಿದೆ. ಏಕೆಂದರೆ ಚಿತ್ರದ ಹೀರೋ ದರ್ಶನ್ ಅವರಾದರೂ, ತೆರೆಯ ಹಿಂದಿನ ಹೀರೋಗಳಿಗೂ ಹೆಸರು ಬಂದಿದೆ. ಕಾಟೇರ ಸಕ್ಸಸ್ʻಗೆ ತೆರೆಯ ಹಿಂದೆ ಕೆಲಸ ಮಾಡಿದವರೆಲ್ಲ ಇಂದು ಮುನ್ನೆಲೆಗೆ ಬರುತ್ತಿದ್ದಾರೆ. ಅವರಿಗೂ ಡಿಮ್ಯಾಂಡ್ ಸೃಷ್ಟಿಯಾಗುತ್ತಿದೆ.
ಕಥೆಗಾರ ಜಡೇಶ್ ಕುಮಾರ್ ಹಂಪಿ : ಜಡೇಶ್ ಅವರು ಚಿತ್ರರಂಗಕ್ಕೆ ಬಂದಿದ್ದು ಈಗಲ್ಲ. ಹಲವು ವರ್ಷಗಳ ಶ್ರಮ ಬೆವರು ಬೆರೆತಿದೆ. ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ಜಡೇಶ್, ಇಂಡಸ್ಟ್ರಿಗೆ ಹೊಸಬರಲ್ಲ. 2017ರಲ್ಲಿ ರಾಜಹಂಸ ಅನ್ನೋ ಸಿನಿಮಾ ಬಂದಿತ್ತು. ಸಿನಿಮಾ ಬಾಕ್ಸಾಫೀಸಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲವಾದರೂ ಚಿತ್ರ ಗಮನ ಸೆಳೆದಿದ್ದಂತೂ ಹೌದು. ಅದಾದ ಮೇಲೆ ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರ ಜಂಟಲ್ʻಮನ್. ಸ್ಲೀಪಿಂಗ್ ಡಿಸಾರ್ಡರ್ʻನಂತಹ ಅಪರೂಪದ ಕಾಯಿಲೆಯಿಂದ ಬಳಲುವ ನಾಯಕ, ಅಣ್ಣನ ಮಗಳನ್ನು ಉಳಿಸಿಕೊಳ್ಳಲು ಹೋರಾಡುವ ಕಥೆ. ಜಂಟಲ್ʻಮನ್ ಕೂಡಾ ಅಷ್ಟೆ, ದೊಡ್ಡ ಮಟ್ಟದ ಬಾಕ್ಸಾಫೀಸ್ ಸಿಗಲಿಲ್ಲ. ಅದಾದ ಮೇಲೆ ಬಂದದ್ದು ಗುರು ಶಿಷ್ಯರು. ಶರಣ್ ಹೀರೋ ಆಗಿದ್ದ ಸಿನಿಮಾದಲ್ಲಿ ಖೋಖೋ ಮತ್ತು ಹಳ್ಳಿಯ ಮೇಷ್ಟರ ಕಥೆಯನ್ನು ಚೆನ್ನಾಗಿಯೇ ಹೇಳಿದ್ದರು. ಕಾಂತಾರ ಬಿಡುಗಡೆಯಾಗಿದ್ದ ಸಮಯದಲ್ಲಿಯೇ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಮತ್ತು ವಿಮರ್ಶಕರನ್ನೂ ಗೆದ್ದಿತ್ತು. ಅದಾದ ಮೇಲೆ ಜಡೇಶ್ ಅವರಿಗೆ ಹಲವು ಅವಕಾಶಗಳು ಬಂದವಾದರೂ, ಕಾಟೇರದ ಕಥೆಗೆ ಸಿಕ್ಕ ಸಕ್ಸಸ್ ದೊಡ್ಡ ಗೌರವ ಕೊಟ್ಟಿದೆ.
ಸಂಭಾಷಣೆಕಾರ ಮಾಸ್ತಿ : ಕಾಟೇರ ಚಿತ್ರದ ಒಂದೊಂದು ಸಂಭಾಷಣೆಯೂ ಸಿಡಿಗುಂಡಿನಂತಿದೆ. ಮಾಸ್ತಿ ಹಾಗೆ ನೋಡಿದರೆ ಸ್ಟಾರ್ ಸಂಭಾಷಣೆಕಾರರೇ. ಮಾಸ್ತಿ ಉಪ್ಪಾರಳ್ಳಿ ಅನ್ನೋದು ಪೂರ್ತಿ ಹೆಸರು. ಬಾಲ್ʻಪೆನ್ ಚಿತ್ರದ ಮೂಲಕ ಗುರುತಿಸಿಕೊಂಡ ಮಾಸ್ತಿ, ಕಡ್ಡಿಪುಡಿ ಚಿತ್ರದಿಂದಲೇ ಸ್ಟಾರ್ ಬರಹಗಾರರಾಗಿಬಿಟ್ಟರು. ಕಾಲೇಜ್ ಕುಮಾರ, ಟಗರು, ಅಯೋಗ್ಯ, ಪಂಚತಂತ್ರ, ಜಂಟಲ್‌ಮನ್, ಸಲಗ, ಘೋಸ್ಟ್.. ಮತ್ತೀಗ ಕಾಟೇರ.. ಹೀಗೆ ಮಾಸ್ತಿ ಸಂಭಾಷಣೆಗಳಲ್ಲಿ ವೆರೈಟಿ ಇದೆ.
ನಿರ್ದೇಶಕ ತರುಣ್ ಸುಧೀರ್ : ಚಿತ್ರದ ಮತ್ತೊಬ್ಬ ತೆರೆಯ ಹಿಂದಿನ ಹೀರೋ ತರುಣ್ ಕಿಶೋರ್ ಸುಧೀರ್. ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅವರ ಮಗ. ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಲೇ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡವರು. ನಟರಾಗಿ ಗುರುತಿಸುವಂತೆ ಆಗಿದ್ದು ನವಗ್ರಹ ಚಿತ್ರದ ಕುಂಬಿ ಪಾತ್ರದಿಂದ. ಬರಹಗಾರರಾಗಿ ಗುರುತಿಸಿಕೊಂಡಿದ್ದು ಶರಣ್ ಅಭಿನಯದ ರ್ಯಾಂಬೋ, ವಿಕ್ಟರಿ, ಅಧ್ಯಕ್ಷ ಚಿತ್ರಗಳಿಂದ. ಗಜಕೇಸರಿ, ರನ್ನ, ಟೈಗರ್, ರ್ಯಾಂಬೋ 2, ವಿಕ್ಟರಿ 2 ಗಳಿಂದ ಗೆದ್ದ ತರುಣ್, ಚೌಕ ಚಿತ್ರದ ಮೂಲಕ ಡೈರೆಕ್ಟರ್ ಆದವರು. ರಾಬರ್ಟ್ ಚಿತ್ರದಂತಹ ಭರ್ಜರಿ ಹಿಟ್ ಕೊಟ್ಟಿದ್ದ ತರುಣ್ ಈಗ ಕಾಟೇರ ಚಿತ್ರದ ಮೂಲಕ ಇನ್ನೂ ಒಂದು ಹಂತಕ್ಕೆ ಮೇಲಕ್ಕೇರಿದ್ಧಾರೆ.
ಅಂದಹಾಗೆ ಈ ಹಿಂದೆ ಚಿತ್ರರಂಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಇದೇ ರೀತಿ ಕಥೆಗಾರ, ಸಂಭಾಷಣೆ, ಚಿತ್ರಕಥೆ ಎಲ್ಲವನ್ನೂ ಬೇರೆ ಬೇರೆಯವರು ಮಾಡುತ್ತಿದ್ದರು. ಅಪರೂಪಕ್ಕೆ ಯಾವಾಗಲೋ ನಿರ್ದೇಶಕರೇ ಕಥೆ ಮಾಡುತ್ತಿದ್ದರು. ಇವತ್ತಿಗೂ ಮಲಯಾಳಂ ಚಿತ್ರರಂಗದಲ್ಲಿ ಇಂತಹ ಸ್ಥಿತಿಯೇ ಇದೆ. ಹೀಗಾಗಿಯೇ ಮಲಯಾಳಂ ಚಿತ್ರಗಳು ಹೀರೋ, ಹೀರೋಯಿನ್, ಡೈರೆಕ್ಟರ್ ಹೆಸರು ಕೂಡಾ ನೋಡದೆ.. ವಿಶ್ವಾಸದಿಂದ ಸಿನಿಮಾ ನೋಡುವ ಪ್ರೇಕ್ಷಕರ ವರ್ಗವೇ ಇದೆ. ಒಟಿಟಿಯಲ್ಲಿ ಮಲಯಾಳಂ ದೊಡ್ಡ ಮಟ್ಟಕ್ಕೇರುವುದಕ್ಕೆ ಕಾರಣ ಇದೇ. ಹೀಗಾಗಿಯೇ ಕಾಟೇರದ ಕಥೆ ಗೆದ್ದಿದ್ದು ಕಥೆಗಾರರಿಗೆ ಹೆಮ್ಮೆ ತಂದಿದೆ. ಚಿತ್ರರಂಗವೂ ಬದಲಾಗಲಿ.



