ಮಂಡ್ಯ ಎಂದರೆ ದರ್ಶನ್ ಅಭಿಮಾನಿಗಳ ಹೆಚ್ಚಿರುವ ಜಿಲ್ಲೆ. ಎಲ್ಲ ಕಡೆಯಲ್ಲೂ ಅಭಿಮಾನಿಗಳು ಇದ್ದಾರಾದರೂ ಮಂಡ್ಯದಲ್ಲಿ ಪ್ರಮಾಣ ಸ್ವಲ್ಪ ಹೆಚ್ಚು. ಮಂಡ್ಯದಲ್ಲಿ ಸಂಸದೆಯಾಗಿರುವ ಸುಮಲತಾರನ್ನು ಗೆಲ್ಲಿಸಿದ ಶ್ರೇಯದಲ್ಲಿ ದರ್ಶನ್ ಅವರ ಪಾಲು ದೊಡ್ಡದು. ಅಷ್ಟೇ ಏಕೆ, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರವೂ ಪ್ರಚಾರ ಮಾಡಿದ್ದ ದರ್ಶನ್ ಅವರಿಗೆ ಹುಚ್ಚು ಅಭಿಮಾನಿಗಳಿದ್ಧಾರೆ. ಆದರೆ ಕಾಟೇರದ ರೈತ ಗೀತೆಯನ್ನು ಮಂಡ್ಯದಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣ ಕೇವಲ ಅಭಿಮಾನಿಗಳಲ್ಲ.
ಹುಬ್ಬಳ್ಳಿಯಲ್ಲಿ ಕಾಟೇರ ಟ್ರೇಲರ್ ಹಬ್ಬ ಮಾಡಿದ್ದ ಕಾಟೇರ ಟೀಂ, ಈಗ ಮಂಡ್ಯಕ್ಕೆ ಮತ್ತೊಂದು ಹಬ್ಬ ಮಾಡೋಕೆ ಬರ್ತಿದೆ. ಇದು ಕಾಟೇರನ ರೈತರ ಹಬ್ಬ. ಮಂಡ್ಯ ಜಿಲ್ಲೆಯ ಬಾಯ್ಸ್ ಕಾಲೇಜ್ ಗ್ರೌಂಡ್‌ನಲ್ಲಿ ಡಿಸೆಂಬರ್ 23ರ ಸಂಜೆ 5 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಈ ಹಿಂದೆ ‘ಕ್ರಾಂತಿ’ ಚಿತ್ರದ ಹಾಡುಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅಭಿಮಾನಿಗಳ ಎದುರು ರಿಲೀಸ್ ಮಾಡಲಾಗಿತ್ತು. ಇದೀಗ ‘ಕಾಟೇರ’ ಚಿತ್ರದ ರೈತರ ಹಾಡು ಬಿಡುಗಡೆಗೆ ಮಂಡ್ಯಕ್ಕೆ ಹೊರಟಿದ್ದಾನೆ ಕಾಟೇರ. ಈ ಹಾಡು ಕಾಟೇರ ಚಿತ್ರದ ಆತ್ಮ ಎಂದು ಅಭಿಮಾನದಿಂದ ಹೇಳಿಕೊಳ್ತಿದೆ ಕಾಟೇರ ತಂಡ.
ಈಗಾಗಲೇ ಚಿತ್ರದ ಎರಡು ಡ್ಯುಯೆಟ್ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಇದೀಗ ರೈತರ ಗೀತೆ ರಿಲೀಸ್ ಆಗುವುದಕ್ಕೆ ಮಂಡ್ಯಕ್ಕೆ ಬರುತ್ತಿದೆ. ಮಂಡ್ಯವನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವೂ ಇದೆ.
ಮಂಡ್ಯ ರೈತ ಚಳವಳಿಯ ತವರು. ಮಂಡ್ಯದಲ್ಲಿ ನಡೆದಷ್ಟು ರೈತ ಹೋರಾಟಗಳು ರಾಜ್ಯದ ಬೇರಾವ ಜಿಲ್ಲೆಯಲ್ಲೂ ನಡೆದಿಲ್ಲ. ಪ್ರೊ. ನಂಜುಂಡಸ್ವಾಮಿ, ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಕರುಬೂರು ಶಾಂತಕುಮಾರ್ ಅಷ್ಟೇ ಏಕೆ, ಈಗ ಮೇಲುಕೋಟೆ ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ (ನಟ ದರ್ಶನ್ ಇವರ ಪರ ಪ್ರಚಾರ ಮಾಡಿದ್ದರು) ಸೇರಿದಂತೆ ಬಹುತೇಕರು ಮಂಡ್ಯ ಮೂಲದವರು. ಹೀಗಾಗಿ ಮಂಡ್ಯದಲ್ಲೇ ಕಾಟೇರದ ರೈತರ ಗೀತೆ ಬಿಡುಗಡೆಯಾಗುತ್ತಿದೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ದರ್ಶನ್ ಎದುರು ಅನುರಾಧಾ ನಾಯಕಿಯಾಗಿದ್ದು, ಕುಮಾರ್ ಗೋವಿಂದ್, ಶೃತಿ, ಜಗಪತಿ ಬಾಬು, ಬಿರಾದಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ರೈತ ಚಳವಳಿಗಳು ಮೊಳೆತು, ಬೆಳೆದು ಹೆಮ್ಮರವಾಗಿರುವ ಮಂಡ್ಯದಲ್ಲೀಯೇ ರೈತ ಗೀತೆ ರಿಲೀಸ್ ಮಾಡುವುದು ದರ್ಶನ್ ಯೋಜನೆ.



