ಕಾಟೇರ ಚಿತ್ರದ ನಂತರ ಜಡೇಶ್ ಕೆ ಹಂಪಿ ಅವರಿಗೆ ಸ್ಟಾರ್ ವ್ಯಾಲ್ಯೂ ಬಂದಿದೆ. ಅಫ್ʻಕೋರ್ಸ್ ಕಾಟೇರ ಚಿತ್ರದ ಮೊದಲ ಹೀರೋ ಕಥೆ. ಕಾಟೇರದ ಕಥೆಗಾರ ಜಡೇಶ್. ಜಡೇಶ್ ಇದೀಗ ದುನಿಯಾ ವಿಜಯ್ ಅವರ 29ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ಧಾರೆ. ಭೀಮ ಚಿತ್ರದ ಪ್ರಮೋಷನ್ ಮುಗಿಯುತ್ತಿದ್ದಂತೆಯೇ ವಿಜಯ್ ಅವರು ಈ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ.
ಜಡೇಶ್ ಕೆ. ಹಂಪಿ ಅವರಿಗೆ ನಿರ್ದೇಶಕರಾಗಿ ಇದು 4ನೇ ಸಿನಿಮಾ. ಜಡೇಶ್ ಅವರು ಈ ಹಿಂದೆ ಹೊಸಬರ ಜೊತೆ ರಾಜಹಂಸ ಅನ್ನೋ ಸಿನಿಮಾ ಮಾಡಿದ್ದರು. ಸಿನಿಮಾ ಹಿಟ್ ಆಗದೇ ಹೋದರೂ ಚೆನ್ನಾಗಿದೆ ಎನಿಸಿಕೊಂಡಿತ್ತು. ಅದಾದ ಮೇಲೆ ಪ್ರಜ್ವಲ್ ದೇವರಾಜ್ ಅವರ ಜೊತೆ ಗುರು ದೇಶಪಾಂಡೆ ಅವರಿಗಾಗಿ ಜಂಟಲ್‌ಮನ್ ಸಿನಿಮಾ ಮಾಡಿದ್ರು. ಕಥೆ ವ್ಹಾವ್ ಎನಿಸಿಕೊಂಡಿತ್ತು. ಆನಂತರ ಜಡೇಶ್ ಮಾಡಿದ ಸಿನಿಮಾ ಗುರು ಶಿಷ್ಯರು. ಶರಣ್ ಅಭಿನಯದ ಗುರು ಶಿಷ್ಯರು ಖೋಖೋ ಹಿನ್ನೆಲೆಯಲ್ಲಿ ಮೂಡಿದ್ದ ಸಿನಿಮಾ. ಕಾಂತಾರದ ಜೊತೆಯಲ್ಲೇ ಬಂದ ಸಿನಿಮಾ ಹಿಟ್ ಪಟ್ಟ ಗಿಟ್ಟಿಸಿತ್ತು. ಆದರೆ ಈ ಮೂರೂ ಚಿತ್ರಗಳಿಗಿಂತ ದೊಡ್ಡ ಹೆಸರು ಕೊಟ್ಟಿದ್ದು ಕಾಟೇರ. ಕಾಟೇರ ಚಿತ್ರದ ಕಥೆ.
ಈಗಲೂ ಅಷ್ಟೆ, ಜಡೇಶ್ ಕಥೆ ಹೊಸದಾಗಿರುವಂತೆ ಕಾಣುತ್ತಿದೆ. ಹುಲಿ ಮತ್ತು ನಾಯಿ ಯುದ್ಧಕ್ಕೆ ನಿಂತಿರೋ ಪೋಸ್ಟರ್ ಹೊರಬಿದ್ದಿದ್ದು, ಇದು ಅಳಿದವರ ಕಥೆ ಅಲ್ಲ, ಅಳಿದು ಉಳಿದವರ ಕಥೆ ಎಂಬ ಅಡಿಬರಹ ಇದೆ. ಜಗದೀಶ್ ಗೌಡ ನಿರ್ಮಾಣದ ಸಿನಿಮಾ ಇದು. ವಿಜಯ್ ಅವರಿಗೆ 29ನೇ ಸಿನಿಮಾ.



