ದರ್ಶನ್ ಸೆಲಬ್ರಿಟಿಗಳ ಆರ್ಭಟ ಜೋರಾಗಿದೆ. ಅದು ಅಭಿಮಾನದ ಆರ್ಭಟ. ಕಾಟೇರ ಚಿತ್ರವನ್ನು ಹೊಸ ದಾಖಲೆ ಬರೆಯೋಕೆ ಸಿದ್ಧ ಮಾಡುತ್ತಿದ್ಧಾರೆ. ದರ್ಶನ್ ಅಭಿನಯದ ಕಾಟೇರ ಡಿಸೆಂಬರ್ ೨೯ಕ್ಕೆ ರಿಲೀಸ್ ಆಗುತ್ತಿದ್ದು, ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆಗಲೇ ಅಬ್ಬರದಿಂದ ಶುರುವಾಗಿದೆ.
ಚಿತ್ರಕ್ಕೆ ೧೦೦೦ ರೂ. ಟಿಕೆಟ್ ಪ್ರೀಮಿಯರ್ ಶೋ ಕೂಡಾ ಇದೆ. ಆ ಪ್ರೀಮಿಯರ್ ಶೋ ಕೂಡಾ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್. ಸಾವಿರ ರೂಪಾಯಿ ಟಿಕೆಟ್ʻನ್ನೂ ಖರೀದಿಸಿದ್ದಾರೆ. ಅದು ಸಮಾಜ ಸೇವೆಗೆ ಹೋಗಲಿದೆ ಎಂಬ ಮಾತು ಬೇರೆ.
ಇನ್ನು ಈಗಾಗಲೇ ಬೆಂಗಳೂರಿನಲ್ಲಿ 6 ಶೋಗಳು ಸೋಲ್ಡೌಟ್ ಆಗೋಗಿದೆ. 25ಕ್ಕೂ ಅಧಿಕ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ‘ಕಾಟೇರ’ ಬುಕ್ಕಿಂಗ್ ಆರಂಭವಾದ ಅರ್ಧಗಂಟೆಯಲ್ಲಿ ಮೊದಲ ದಿನದ 6,850 ಟಿಕೆಟ್ ಸೋಲ್ಡೌಟ್ ಆಗಿರುವುದು ದಾಖಲೆ. ಅಂದಹಾಗೆ ಇದು ದರ್ಶನ್ ಅವರಿಗೆ ಲಕ್ಕಿ ಥಿಯೇಟರ್. ಮೆಜೆಸ್ಟಿಕ್ ೧೦೦ ದಿನ ಪ್ರದರ್ಶನ ಕಂಡಿರುವ ಈ ಚಿತ್ರಮಂದಿರದಲ್ಲಿ ದರ್ಶನ್ ಅವರ ಸಾರಥಿ, ಯಜಮಾನ ಸೇರಿದಂತೆ ಬಹಳಷ್ಟು ಚಿತ್ರಗಳು ಹಿಟ್ ಆಗಿವೆ.
ಅನುಪಮಾ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆ ಹಾಗೂ 10. 30ರ ಶೋ ಸೋಲ್ಡೌಟ್ ಆಗಿದೆ. ಸುಂಕದಕಟ್ಟೆ ಮೋಹನ್ ಚಿತ್ರಮಂದಿರದ ಬೆಳಗ್ಗೆ 5.30ರ ಶೋ, ದೊಡ್ಡಬಳ್ಳಾಪುರದ ವೈಭವ್ ಚಿತ್ರಮಂದಿರದ ಬೆಳಗ್ಗೆ 5 ಗಂಟೆ ಶೋ ಟಿಕೆಟ್ ಸಂಪೂರ್ಣವಾಗಿ ಬುಕ್ ಆಗಿದೆ. ಕೆ. ಜಿ ರಸ್ತೆಯ ಅನುಪಮಾ ಚಿತ್ರಮಂದಿರದ ಮುಂದೆ ಈಗಾಗಲೇ 90 ಅಡಿ ಕಟೌಟ್ ಹಾಕಲಾಗಿದೆ. ಇನ್ನು ಜೆ. ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಡಿ.28 ರಂದು ಕಾಟೇರಮ್ಮ ದೇವಿ ಪ್ರತಿಷ್ಟಾಪನೆ , ತಮಟೆ ವಾದ್ಯ , ಅನ್ನದಾನ , ಸಿಡಿಮದ್ದು , ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.
ಅಭಿಮಾನಿಗಳಂತೂ ಮೊದಲ ದಿನವೇ ‘ಕಾಟೇರ’ನ ಆರ್ಭಟ ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದೇ ಕಾರಣಕ್ಕೆ ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈಗಾಗಲೇ ಬೆಳಗಿನ ಜಾವ 5 ಗಂಟೆ ಹಾಗೂ 10 ಗಂಟೆಯ ಶೋಗಳು ಕೆಲವೆಡೆ ಸೋಲ್ಡೌಟ್ ಆಗಿದೆ. ಮತ್ತೆ ಕೆಲ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಇನ್ನು ಮಧ್ಯರಾತ್ರಿ ಹಾಗೂ ಅರ್ಲಿ ಮಾರ್ನಿಂಗ್ ಶೋಗಳ ಟಿಕೆಟ್ ದರ 1000 ರೂ. ಮುಟ್ಟಿದೆ.
ಕಾಟೇರ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದ್ದು, ಮಾಲಾಶ್ರೀ ಮಗಳು ಆರಾಧನಾ ನಾಯಕಿಯಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಚಿತ್ರದಲ್ಲಿ ಜಗಪತಿ ಬಾಬು, ಶೃತಿ, ಕುಮಾರ್ ಗೋವಿಂದ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಂದಿನಂತೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಇದಿಷ್ಟು ಮೊದಲ ದಿನದ ಮೊದಲ ಶೋಗಳ ಲೆಕ್ಕವಷ್ಟೆ. ಎಲ್ಲ ಕಡೆ ಕಾಟೇರದ ಆರ್ಭಟ ಜೋರಿದ್ದು, ಈ ಬಾರಿ ದರ್ಶನ್ ಪಕ್ಕಾ ಹಿಟ್ ಕೊಡುವ ನಿರೀಕ್ಷೆ ಹುಟ್ಟಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಇರುವ ಕಾರಣ ತೀರಾ ಕ್ರಾಂತಿಯಷ್ಟು ಕಳಪೆಯಾಗಿ ಇರುವುದಿಲ್ಲ ಎನ್ನುವ ನಂಬಿಕೆಯಂತೂ ಪ್ರೇಕ್ಷಕರಲ್ಲಿ ಅದರಲ್ಲೂ ವಿಶೇಷವಾಗಿ ದರ್ಶನ್ ಅಭಿಮಾನಿಗಳಲ್ಲಿದೆ.



