ಇರುವ ಮೂವರಲ್ಲಿ ಗೆಲ್ಲೋರು ಯಾರು..? ಸಲಾರ್, ಡಂಕಿ ಮತ್ತು ಕಾಟೇರ. ಇವುಗಳಲ್ಲಿ ಸಲಾರ್ ಮತ್ತು ಡಂಕಿ ನಾಳೆಯಿಂದ ಚಿತ್ರಮಂದಿರಗಳಲ್ಲಿ ಬರುತ್ತಿವೆ. ಸಲಾರ್ ಹೀರೋ ಪ್ರಭಾಸ್ ತೆಲುಗಿನ ನಟರಾದರೂ, ಚಿತ್ರದ ಡೈರೆಕ್ಟರ್, ಪ್ರೊಡ್ಯೂಸರ್, ಟೆಕ್ನಿಷಿಯನ್ಸ್ ಹಾಗೂ ಕೆಲವು ಕಲಾವಿದರು ಕನ್ನಡದವರು. ಕನ್ನಡದಲ್ಲಿಯೂ ಬರುತ್ತಿರೋ ಸಿನಿಮಾ ಸಲಾರ್.
ಇನ್ನು ಸಲಾರ್ ಎದುರಾಗಿ ಬರುತ್ತಿರೋ ಡಂಕಿ ಚಿತ್ರಕ್ಕೆ ಶಾರೂಕ್ ಖಾನ್ ಹೀರೋ. ಮುನ್ನಾಬಾಯಿ ಎಂಬಿಬಿಸ್, ಲಗೇರಹೋ ಮುನ್ನಾಬಾಯಿ, 3 ಈಡಿಯಟ್ಸ್, ಪಿಕೆ ಖ್ಯಾತಿಯ ರಾಜಕುಮಾರ್ ಹಿರಾನಿ ಡೈರೆಕ್ಟರ್. ಅದು ಮುಗಿದ ಮೇಲೆ ಮುಂದಿನ ವಾರ ರಿಲೀಸ್ ಆಗುತ್ತಿರೋ ಸಿನಿಮಾ ಕಾಟೇರ. ದರ್ಶನ್ ಹೀರೋ ಆಗಿರುವ ಚಿತ್ರ. ಮಾಲಾಶ್ರೀ ಮಗಳು ಆರಾಧನಾ ಹೀರೋಯಿನ್. ರಾಬರ್ಟ್ ಖ್ಯಾತಿಯ ತರುಣ್ ಸುಧೀರ್ ಡೈರೆಕ್ಟರ್.
ಈ ಮೂರು ಚಿತ್ರಗಳಲ್ಲಿ ನಿಮ್ಮ ಬೆಂಬಲ ಯಾರಿಗೆ ಅನ್ನೋ ಪ್ರಶ್ನೆಗೆ ದುನಿಯಾ ವಿಜಯ್ ಸಖತ್ತಾಗಿಯೇ ಉತ್ತರ ಕೊಟ್ಟಿದ್ದಾರೆ. ನನಗೆ ಭಾಷೆಯ ಗಡಿ ಇಲ್ಲ. ಆದರೆ ಯಾವ ಚಿತ್ರ ಮೊದಲ ಆಯ್ಕೆ ಅನ್ನೋ ಪ್ರಶ್ನೆ ಬಂದಾಗ ನಾನು ಕನ್ನಡದ ಚಿತ್ರಕ್ಕೇ ಜೈ ಅಂತೀನಿ. ಹೀಗಾಗಿ ಸಲಾರ್ ಹಾಗೂ ಕಾಟೇರ ಚಿತ್ರಕ್ಕೆ ನನ್ನ ಬೆಂಬಲ ಎಂದು ಘೋಷಿಸಿದ್ದಾರೆ ದುನಿಯಾ ವಿಜಯ್. ಇಷ್ಟಕ್ಕೂ ದುನಿಯಾ ವಿಜಯ್ ಈ ಮಾತು ಹೇಳೋದಿಕ್ಕೆ ಕಾರಣ ಇದೆ. ಇತ್ತೀಚೆಗೆ ಒಂದಷ್ಟು ಶಾರೂಕ್ ಖಾನ್ ಅಭಿಮಾನಿಗಳು ವಿಜಯ್ ಅವರನ್ನು ಭೇಟಿಯಾಗಿ ಟಿಕೆಟ್ ಕೂಡಾ ಕೊಟ್ಟು, ಡಂಕಿ ಚಿತ್ರವನ್ನು ನೋಡಿ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದರು. ದುನಿಯಾ ವಿಜಯ್ ಟಿಕೆಟ್ ವಾಪಸ್ ಕೊಟ್ಟು ಕಳಿಸಿದ್ದರು.
ಸಲಾರ್ ಈ ವಾರ ಬರ್ತಾ ಇದೆ. ಅದು ಕನ್ನಡದ ಹೆಮ್ಮೆಯ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಸಿನಿಮಾ. ನಿರ್ದೇಶಕರು, ಬಹುತೇಕ ತಂತ್ರಜ್ಞರು ಕನ್ನಡದವರು. ಇನ್ನು ಮುಂದಿನ ವಾರ ಬರುತ್ತಿರುವ ಕಾಟೇರ ಅಪ್ಪಟ ಕನ್ನಡದ ಸಿನಿಮಾ. ಕನ್ನಡದಲ್ಲಷ್ಟೇ ಬರುತ್ತಿರುವ ಸಿನಿಮಾ. ಈ ಚಿತ್ರಗಳಿಗೆ ನನ್ನ ಬೆಂಬಲ ಎಂದು ಘೋಷಿಸಿದ್ದಾರೆ ದುನಿಯಾ ವಿಜಯ್.
ನಾನು ಶಾರೂಕ್ ಖಾನ್ ಅಭಿಮಾನಿ. ಆದರೆ ಕನ್ನಡದ ಚಿತ್ರಗಳು ನನ್ನ ಮೊದಲ ಆದ್ಯತೆ ಎಂದು ಶಾರೂಕ್ ಖಾನ್ ಅಭಿಮಾನಿಗಳಿಗೆ ಹೇಳಿ ಕಳಿಸಿದೆ. ಸದ್ಯ ದುನಿಯಾ ವಿಜಯ್ ‘ಭೀಮ’ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಈ ಹಿಂದೆ ‘ಸಲಗ’ ಸಿನಿಮಾ ಮಾಡಿ ವಿಜಿ ಗೆದ್ದಿದ್ದರು. ಈಗಾಗಲೇ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಅದರಲ್ಲೂ ‘ಬ್ಯಾಡ್ ಬಾಯ್ಸ್’ ಸಾಂಗ್ ಸದ್ದು ಗದ್ದಲ ಜೋರಾಗಿದೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ‘ಸಲಗ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ‘ಭೀಮ’ನ ಬಳಗದಲ್ಲಿದೆ.
ಅಂದಹಾಗೆ ಸಲಾರ್ ಚಿತ್ರದ ನಿರ್ಮಾಪಕರು ಪಿವಿಆರ್ ಐನಾಕ್ಸ್ ಹಾಗೂ ಮಿರಾಜ್ ಮಲ್ಟಿಪ್ಲೆಕ್ಸ್ ವಿರುದ್ಧ ಸಮರವನ್ನೇ ಘೋಷಿಸಿದ್ದಾರೆ. ಬಿಸಿನೆಸ್ ಹೊಡೆತಕ್ಕಿಂತ ದೊಡ್ಡ ಹೊಡೆತ ಮತ್ತೊಂದಿಲ್ಲ.



