ಕಾಟೇರ ಒಂದೊಂದೇ ಸವಾಲು ಮೆಟ್ಟಿ ಹೊರಬರುತ್ತಿದೆ. ಮೊದಲಿಗೆ ಚಿತ್ರ ಈ ವರ್ಷ ಇಲ್ಲ ಅನ್ನೋ ಸುದ್ದಿ ಬಂತು. ನಡುವೆ ಚಿತ್ರಕ್ಕೆ ತಾಂತ್ರಿಕ ತೊಂದರೆಗಳೂ ಎದುರಾದವು. ಟೆಕ್ನಿಷಿಯನ್ ಒಬ್ಬ ಎಸ್ಕೇಪ್ ಆಗಿ ಸಮಸ್ಯೆ ಸೃಷ್ಟಿಸಿದ್ದ. ಟ್ರೇಲರ್ ರಿಲೀಸ್ ಆದ ಕೂಡಲೇ ಇನ್ಯಾರೋ ವನ್ಯಜೀವಿ ಕಾಯ್ದೆಯ ಕ್ಯಾತೆ ತೆಗೆದ. ಇದು ಒಂದು ಹಂತವಾದರೆ, ಸೆನ್ಸಾರ್ ಆಗುವುದೇ ಡೌಟ್ ಎಂಬ ಮಾತು ಕೇಳಿಬಂತು. ಅದಕ್ಕೆ ಕಾರಣವೂ ಇತ್ತು. ಇದೀಗ ಅದನ್ನೂ ಗೆದ್ದಿದ್ದಾನೆ ಕಾಟೇರ.
ಕಾಟೇರ ಚಿತ್ರ ಸೆನ್ಸಾರ್ ಪ್ರಕ್ರಿಯೆ ಮುಗಿಸಿದೆ. ಸೆನ್ಸಾರ್ ಮಂಡಳಿಯ ಅಧಿಕಾರಿಯೊಬ್ಬರು ಸಿಬಿಐ ರೇಡ್ʻನಲ್ಲಿ ಅರೆಸ್ಟ್ ಆಗಿದ್ದ ಕಾರಣ ಸೆನ್ಸಾರ್ ಏನಾಗಲಿದೆಯೋ ಎಂಬ ಆತಂಕವಂತೂ ಇತ್ತು. ಫಿಲ್ಮ್ ಚೇಂಬರ್ʻಗೆ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿತ್ತು. ಇದೀಗ ಸೆನ್ಸಾರ್ ಪ್ರಕ್ರಿಯೆ ಶುರುವಾಗಿದ್ದು, ಕಾಟೇರ ಚಿತ್ರದ ಸೆನ್ಸಾರ್ ಮುಗಿದಿದೆ. ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಹೀಗಾಗಿ ಡಿಸೆಂಬರ್ ೨೯ಕ್ಕೆ ಕಾಟೇರ ರಿಲೀಸ್ ಆಗುವುದರಲ್ಲಿ ಅನುಮಾನ ಇಲ್ಲ.
ದರ್ಶನ್ ಚಿತ್ರಗಳಿಗೆ ಯುಎ ಪ್ರಮಾಣ ಪತ್ರ ಸಿಗುವುದು ಹೊಸದೇನಲ್ಲ. ಕೆಲವು ಚಿತ್ರಗಳಿಗೆ ಎ ಸರ್ಟಿಫಿಕೇಟ್ ಕೂಡಾ ಸಿಕ್ಕಿದ್ದಿದೆ. ಹಾಗೆಂದು ಅಶ್ಲೀಲತೆ ಇರುತ್ತದೆ ಎಂದಲ್ಲ. ಕಾಟೇರ ಚಿತ್ರದಲ್ಲಿ ರಕ್ತ ಜಾಸ್ತಿ ಚೆಲ್ಲಾಡುತ್ತದೆ. ಏಕೆಂದರೆ ಕಾಟೇರ ಆಕ್ಷನ್ ಸಿನಿಮಾನೂ ಹೌದು. ಕಾಟೇರದಲ್ಲಿ ಮಚ್ಚು, ಕೊಡಲಿಗಳ ಸೌಂಡು ಸ್ವಲ್ಪ ಜಾಸ್ತಿಯೇ ಇದೆ. ಚಿತ್ರದ ಹೀರೋ ಕುಲುಮೆಯಲ್ಲಿ ಮಚ್ಚು ತಯಾರು ಮಾಡುವವನು. ಹೋರಾಟದ ಕಥೆ. ಹೀಗಾಗಿಯೇ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ನೀಡಲಾಗಿದೆ.
ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು ಕಾಟೇರ. ಕಾಟೇರ ಅನ್ನೋದು ಕಾಟೇರಮ್ಮನ ಹೆಸರು. ವಿಶೇಷ ಅಂದರೆ ದರ್ಶನ್ ಮನೆ ದೇವರು ಕೂಡಾ ಕಾಟೇರಮ್ಮ ದೇವಿಯಂತೆ. ಅದೇ ತಾಯಿಯ ಹೆಸರನ್ನ ಚಿತ್ರಕ್ಕೆ ಇಡಲಾಗಿದೆ. ದರ್ಶನ್ ನಿರ್ವಹಿಸಿರೋ ಪಾತ್ರಕ್ಕೂ ಡೈರೆಕ್ಟರ್ ತರುಣ್ ಸುಧೀರ್ ಈ ಹೆಸರನ್ನ ಇಟ್ಟಿದ್ದಾರೆ. ಇಷ್ಟೆಲ್ಲ ಆಗಿ ಚಿತ್ರದಲ್ಲಿರೋದು ಭೂಮಿಗಾಗಿ ರೈತ ನಡೆಸುವ ಹೋರಾಟದ ಕಥೆ. ಕಥೆಯಲ್ಲಿ ರಿಯಲೆಸ್ಟಿಕ್ ಅಂಶಗಳು ಜಾಸ್ತಿ ಇವೆ. ದರ್ಶನ್ ಅವರಿಗೆ ಅಣ್ಣನಾಗಿ ಕುಮಾರ್ ಗೋವಿಂದ್, ಅತ್ತಿಗೆಯಾಗಿ ಶೃತಿ ನಟಿಸಿದ್ದಾರೆ. ದರ್ಶನ್ ಜೊತೆ ಕುಮಾರ್ ಗೋವಿಂದ್, ಶೃತಿ ಇಬ್ಬರಿಗೂ ಇದು ಫಸ್ಟ್ ಅನುಭವ.
ಕಾಟೇರ ಚಿತ್ರದಲ್ಲಿ ಹೀರೋಯಿನ್ ಆಗಿ ದರ್ಶನ್ ಕುತ್ತಿಗೆಗೆ ಮಚ್ಚಿಟ್ಟು ಪ್ರೀತಿ ಮಾಡ್ತಿಯೋ ಇಲ್ವೋ ಅಂತ ಕೇಳೋ ಖಡಕ್ ಪಾತ್ರದಲ್ಲಿ ಮಾಲಾಶ್ರೀ ಮಗಳು ಆರಾಧನಾ ನಟಿಸಿದ್ಧಾರೆ. ಜಗಪತಿ ಬಾಬು, ಕುಮಾರ್ ಗೋವಿಂದ್, ಶೃತಿ, ಅವಿನಾಶ್, ವೈಜನಾಥ್ ಬಿರಾದಾರ್ ಹೀಗೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.



