ಕರ್ನಾಟಕದ ಕೊಹಿನೂರ್ ಡೈಮಂಡ್.. ಎಂದು ತನಗೆ ತಾನೇ ಹೇಳಿಕೊಳ್ಳೋ ಹುಡುಗಾಟದ ಹುಡುಗ ಇನ್ಸ್ʻಪೆಕ್ಟರ್ ವಿಕ್ರಂ. ಸ್ವಲ್ಪ ತರಲೆ.. ಸಿಕ್ಕಾಪಟ್ಟೆ ಆಕ್ಟಿವ್. ಮೈಮೇಲೆ ಖಾಕಿ ಇದ್ದರೂ.. ಕಾಲೇಜು ಹುಡುಗನಂತೆ ಆಡೋ ವಿಕ್ರಂ, ತಗ್ಗಿ ಬಗ್ಗಿ ನಡೆಯುವುದು ಕಮಿಷನರ್ ಸಾಹೇಬರಿಗೆ ಮಾತ್ರ. ಏಕೆಂದರೆ.. ವಿಕ್ರಂನನ್ನು ಓದಿಸಿ ಕೆಲಸ ಕೊಡಿಸಿರುವುದು ಅವರೇ. ಆದರೆ.. ವಿಕ್ರಂ ತನ್ನ ಮಾತನ್ನೂ ಕೇಳದೆ ತರಲೆ ಮಾಡುತ್ತಾನೆ ಎಂದು ಅನ್ನಿಸಿದಾಗ.. ಆತನನ್ನು ತನಗಿಂತ ರಫ್ & ಟಫ್ ಆಗಿರೋ ಮಿಲಿಟರಿ ಮ್ಯಾನ್ ಮನೆಗೆ ಕಳಿಸ್ತಾರೆ. ಅಲ್ಲಿ ಮಿಲಿಟರಿ ಮಾವನ ಮಗಳನ್ನೇ ಲವ್ ಮಾಡುತ್ತಾನೆ ವಿಕ್ರಂ.
ಇದರ ನಡುವೆ ಒಬ್ಬ ಕಳ್ಳನನ್ನು ಹಿಡಿಯುತ್ತಾನೆ. ಆ ಕಳ್ಳ ಜೈಲಿಂದ ತಪ್ಪಿಸಿಕೊಳ್ತಾನೆ. ಆತನೋ.. ಬುದ್ದಿವಂತ. ವಿಕ್ರಮನೋ.. ಕೊಹಿನೂರ್ ಡೈಮಂಡು. ಇಬ್ಬರು ಬುದ್ದಿವಂತರ ನಡುವಿನ ಕಳ್ಳ ಪೊಲೀಸ್ ಆಟವೇ ಇನ್ಸ್ʻಪೆಕ್ಟರ್ ವಿಕ್ರಂ ಸ್ಟೋರಿ.
ಶಿವಣ್ಣ ಕಾಮಿಡಿ ಜಾನರ್ʻನಲ್ಲಿಯೂ ನಟಿಸಬಲ್ಲೆ ಎಂದು ಇಂಡಸ್ಟ್ರಿಗೆ ತೋರಿಸಿದ್ದ ಸಿನಿಮಾ. ದಿನೇಶ್ ಬಾಬು ನಿರ್ದೇಶನದ ಸಿನಿಮಾ 1989ರಲ್ಲಿ ರಿಲೀಸ್ ಆಗಿತ್ತು. ಸೂಪರ್ ಹಿಟ್ ಕೂಡಾ ಆಗಿತ್ತು. ಶಿವಣ್ಣ, ಗುರುದತ್, ಅಪರ್ಣಾ, ಅಶ್ವತ್ಥ್, ಸುಂದರ ಕೃಷ್ಣ ಅರಸ್ ನಟಿಸಿದ್ದ ಸಿನಿಮಾಗೆ ರಾಘವೇಂದ್ರ ರಾಜಕುಮಾರ್ ಪ್ರೊಡ್ಯೂಸರ್ ಆಗಿದ್ದರು.
ಅದೇ ಕರ್ನಾಟಕ ಪೊಲೀಸ್ ಡಿಪಾರ್ಟ್ʻಮೆಂಟಿನ ಕೊಹಿನೂರ್ ವಿಕ್ರಂ ಈಗ ಮತ್ತೊಮ್ಮೆ ಬರುತ್ತಿದ್ದಾರೆ. ಒನ್ಸ್ ಎಗೇನ್.. ಶಿವಣ್ಣನೇ ಬರುತ್ತಿರುವುದು ವಿಶೇಷ. ಈ ಹಿಂದೆ ಇದೇ ಟೈಟಲ್ಲಿನಲ್ಲಿ ಪ್ರಜ್ವಲ್ ದೇವರಾಜ್ ಕೂಡಾ ನಟಿಸಿದ್ದರು.
ಪ್ರಜ್ವಲ್, ಭಾವನಾ, ರಘು ಮುಖರ್ಜಿ ನಟಿಸಿದ್ದ ಸಿನಿಮಾ ಅಷ್ಟೇನೂ ಹೆಸರು ಮಾಡಲಿಲ್ಲ. ಇದೀಗ ಮತ್ತೊಮ್ಮೆ ಇನ್ಸ್ʻಪೆಕ್ಟರ್ ವಿಕ್ರಂ ಆಗಿ ಬರುತ್ತಿರುವ ಶಿವರಾಜ್ ಕುಮಾರ್, ಸೆನ್ಸೇಷನ್ ಸೃಷ್ಟಿಸಿದ್ದಾರೆ. ಸಿನಿಮಾಕ್ಕೆ ‘ಐವಿ ರಿಟರ್ನ್ಸ್’ (ಇನ್ಸ್ಪೆಕ್ಟರ್ ವಿಕ್ರಂ ರಿಟರ್ನ್ಸ್) ಎಂದು ಹೆಸರಿಡಲಾಗಿದೆ. ಶಿವರಾಜ್‌ಕುಮಾರ್ ಸೋದರ ಸಂಬಂಧಿ ಲಕ್ಕಿ ಗೋಪಾಲ್ ನಿರ್ದೇಶನವಿದ್ದು, ಮೊದಲ ಚಿತ್ರದಲ್ಲೇ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳುವ ಲಕ್, ಲಕ್ಕಿ ಗೋಪಾಲ್ ಅವರಿಗೆ ಸಿಕ್ಕಿದೆ.
ಮೈಲಾರಿ ಎಂ ನಿರ್ಮಾಪಕರಾಗಿದ್ದಾರೆ. ರೇಣುಕಾ ಪ್ರಸಾದ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ, ಮೈಸೂರು ರಮೇಶ್ ಪ್ರೊಡಕ್ಷನ್ ಮ್ಯಾನೇಜರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಾಸ್ತಿ ಡೈಲಾಗ್ಸ್ ಬರೆಯುತ್ತಿದ್ದು, ತಮಿಳಿನ ಹೆಸರಾಂತ ಸಂಗೀತ ನಿರ್ದೇಶಕ ಅಮ್ರಿಷ್ ಮ್ಯೂಸಿಕ್ ನೀಡುತ್ತಿದ್ದಾರೆ.



