ಊಹೂಂ.. ಇಂತಹ ಓಪನಿಂಗ್ ನಿರೀಕ್ಷೆ ಮಾಡಿರಲಿಲ್ಲ. ಶಿವಣ್ಣ ಚಿತ್ರಗಳೆಂದರೆ ಏಕ್ʻದಂ ಒಂದೇ ದಿನಕ್ಕೆ ನುಗ್ಗಿ ಬರುವ ಕ್ರೌಡ್ ಇರುವುದಿಲ್ಲ. ಆದರೆ, ಒಂದು ನಿರೀಕ್ಷೆಯಂತೂ ಇರುತ್ತದೆ. ಆದರೆ ಈ ಬಾರಿ ಆ ನಿರೀಕ್ಷೆಯೇ ಹುಸಿಯಾಗಿದೆ. ಹಾಗಂತ ಸಿನಿಮಾ ನೋಡಿದವರಿಗೆ ಬೇಸರವೇನಿಲ್ಲ. ಚೆಂದದ ಕಥೆ ಇದೆ.
ಯೋಗರಾಜ್ ಭಟ್ಟರು ತಮ್ಮ ಸಿನಿಮಾಗಳಲ್ಲಿ ಕಾಮನ್ ಆಗಿದ್ದ ಹಸಿರು, ಮಳೆ, ಚೇತೋಹಾರಿ ದೃಶ್ಯ ವೈಭವವನ್ನು ಪಕ್ಕಕ್ಕಿಟ್ಟು ಸಿನಿಮಾ ಮಾಡಿದ್ಧಾರೆ. ಆದರೆ, ತಮಾಷೆ ಮತ್ತು ವಿಷಾದಗಳನ್ನು ಬಿಟ್ಟಿಲ್ಲ. ಜೊತೆಗೆ ಅವರಿಗೆ ಶಿವಣ್ಣ ಮತ್ತು ಪ್ರಭುದೇವ ಎಂಬ ಅಪ್ರತಿಮ ಹೀರೋಗಳು ಸಿಕ್ಕಿದ್ದಾರೆ. ಹೀಗಾಗಿಯೇ ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಕರಟಕ ದಮನಕ ಈ ಮಣ್ಣಿನ ಕಥೆ ಹೇಳುತ್ತದೆ. ಆ ಮಣ್ಣಿನ ಜೊತೆಯಲ್ಲೇ ಇರುವ ನೀರಿನ ಕಥೆ ಹೇಳುತ್ತದೆ. ಭಟ್ಟರು ಹೇಳುವ ಕಥೆ ನಿಮ್ಮೂರೂ ಆಗಿರಬಹುದು. ಇದು ಕೇವಲ ಒಂದೂರಿನ ಕಥೆ ಎಂದು ಅನ್ನಿಸೋದಿಲ್ಲ.
ವಿರೂಪಾಕ್ಷಿ (ಶಿವಣ್ಣ) ಮತ್ತು ಬಾಲರಾಜು (ಪ್ರಭುದೇವ) ಮಾತಿನ ಮಲ್ಲರು. ಮೋಸ ಮಾಡುವಂತ ಪರಮಶ್ರೇಷ್ಟ ಕೆಲಸವೇ ಇಲ್ಲ ಎಂದು ನಂಬಿದವರು. ಜೈಲಿನಲ್ಲಿದ್ದ ಅಂತಹ ಖದೀರಮರನ್ನು ಜೈಲರ್ ರುದ್ರೇಶ್ (ರಾಕ್ʻಲೈನ್ ವೆಂಕಟೇಶ್) ನಂದಿಕೋಲೂರು ಎಂಬ ಹಳ್ಳಿಗೆ ಕಳಿಸ್ತಾರೆ. ಆ ಊರೋ.. ಎಷ್ಟೋ ವರ್ಷಗಳಿಂದ ಮಳೆಯನ್ನೇ ನೋಡದ ಊರು. ಊರಿನ ಜನರೆಲ್ಲ ಗುಳೆ ಹೊರಟಿರುವ ಆ ಊರು ಕೂಡಾ ಕಥೆ ಹೇಳುತ್ತದೆ. ಮಾತನಾಡುತ್ತದೆ. ಇದು ಏಕಕಾಲಕ್ಕೆ ಊರಿನ ಕಥೆಯೂ ಆಗುತ್ತದೆ. ನೀರಿನ ಕಥೆಯೂ ಆಗುತ್ತದೆ.
ಚಿತ್ರದಲ್ಲಿ ಶಿವಣ್ಣ ಮತ್ತು ಪ್ರಭುದೇವ ಆಡಿದಂತೆ ನಟಿಸಿಬಿಟ್ಟಿದ್ದಾರೆ. ಇಬ್ಬರ ಅನುಭವ ಮತ್ತು ಯಂಗ್ ಎನರ್ಜಿ ಚಿತ್ರಕ್ಕೆ ಪ್ಲಸ್ಸಾಗುತ್ತದೆ. ಬಹುಶಃ ಯೋಗರಾಜ್ ಭಟ್ಟರಿಗೆ ಈಗ ಊರಿನ ಕಥೆ ಹೇಳುವ ಉತ್ಸಾಹ ಬಂದಿರಬಹುದು. ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ತೆರೆಯ ಮೇಲಿದ್ದಷ್ಟೂ ಹೊತ್ತು ಮಾತನಾಡುತ್ತಿದ್ದಷ್ಟೂ ಹೊತ್ತು ಪ್ರೇಕ್ಷಕರಿಗೆ ರೋಮಾಂಚನ.
ಹರಿಕೃಷ್ಣ ಮ್ಯೂಸಿಕ್ಕು ಚೆನ್ನಾಗಿದೆ. ತೆಲುಗು ನಟ ತನಿಕೆಳ್ಳಾ ಭರಣಿ, ದೊಡ್ಡಣ್ಣ, ರಂಗಾಯಣ ರಘು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜಗ್ಗನ ಪಾತ್ರದಲ್ಲಿ ನಟ ರವಿಶಂಕರ್ ಹೊಸ ಸ್ಟೈಲ್‌ನಲ್ಲಿ ಮಿಂಚಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಶೋದಲ್ಲಿನ ಬಹುತೇಕ ಕಲಾವಿದರು ಇದರಲ್ಲಿ ಕಾಣಿಸಿಕೊಂಡು, ತೆರೆ ತುಂಬಿದ್ದಾರೆ. ರುದ್ರೇಶ್ ಪಾತ್ರದಲ್ಲಿ ಬರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ಗೆ ಎರಡು ಸೀನ್ ಸಿಕ್ಕಿವೆ. ಯೋಗರಾಜ್ ಭಟ್ ಕೂಡ ಒಂದು ವಿಶೇಷ ಪಾತ್ರ ಮಾಡಿದ್ದು, ಅದು ಸಿನಿಮಾದ ಅಚ್ಚರಿ. ಏಕೆಂದರೆ ಅವರೇ ಊರು. ನಂದಿಕೋಲೂರು.
ಉತ್ತರ ಕರ್ನಾಟಕ ಶೈಲಿಯ ಖಡಕ್ ಸಂಭಾಷಣೆ ಚಿತ್ರದ ಮತ್ತೊಂದು ಹೈಲೈಟ್. ಕೊನೆಯದಾಗಿ ಹೇಳಿರುವ ಸಂದೇಶ ಈ ಕಾಲಕ್ಕೆ ಬಹಳ ಆಪ್ತವಾಗಿದೆ. ಒಂದೊಳ್ಳೆ ಸಂದೇಶವೂ ಇರುವ ಕರಟಕ ದಮನಕ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.
ಆದರೆ ಪ್ರೇಕ್ಷಕರೇ ಬರದಿದ್ದರೆ.. ಈಗ ಆಗಿರುವುದೂ ಅದೇ. ಶಿವಣ್ಣ ಚಿತ್ರಗಳಿಗೆ ಈ ಪರಿಯ ಡಲ್ ಓಪನಿಂಗ್ ಆಗಿ ಯಾವುದೋ ಕಾಲವಾಗಿತ್ತು. ಒಂದು ಸಮಯದಲ್ಲಿ ಸಿಕ್ಕ ಸಿಕ್ಕ ಚಿತ್ರಗಳನ್ನೆಲ್ಲ ಒಪ್ಪಿಕೊಳ್ತಾ ಇದ್ದಾಗ ಆಗಿತ್ತು. ಆದರೆ, ಈ ಬಾರಿ ರಾಕ್ʻಲೈನ್ ವೆಂಕಟೇಶ್ ಬ್ಯಾನರ್, ಜೊತೆಗೆ ಪ್ರಭುದೇವ ಅವರಂತಹ ಕೋಸ್ಟಾರ್, ಯೋಗರಾಜ್ ಭಟ್ ನಿರ್ದೇಶನ ಇದ್ದರೂ.. ಮೊದಲ ವಾರವೇ ಡಲ್ಲು ಹೊಡೆಯುತ್ತಿದೆ.



