ದೈವ, ತುಳುನಾಡಿನವರ ಪ್ರೀತಿಯ ದೈವ. ದೈವವನ್ನು ಅವರು ಪ್ರೀತಿಸುತ್ತಾರೆ. ನಂಬುತ್ತಾರೆ. ಆರಾಧಿಸುತ್ತಾರೆ. ಅವರ ದೈವದ ಬಗ್ಗೆ ಜಗತ್ತಿಗೆ ಗೊತ್ತಾಗಿದ್ದು ಕಾಂತಾರದಿಂದ. ಸಾಮಾನ್ಯವಾಗಿ ದೈವ ಯಾರ ಮೈಮೇಲೂ ಆವಾಹನೆಯಾಗುವುದಿಲ್ಲ. ಹೀಗಿದ್ದರೂ ಕಾಂತಾರ ಚಾಪ್ಟರ್ 01 ರಿಲೀಸ್ ಆದ ನಂತರ ಕೆಲವರು ವಿಚಿತ್ರವಾಗಿ ವರ್ತಿಸಿದ್ದರು. ಅಂತಹ ವ್ಯಕ್ತಿಯೊಬ್ಬ ಕ್ಷಮೆ ಕೇಳಿದ್ದಾನೆ. ಕ್ಷಮೆ ಕೇಳುವುದಕ್ಕೂ ಕಾರಣ ಇದೆ.
ʻʻಎಲ್ಲರಿಗೂ ನಮಸ್ಕಾರ, ನಾನು ವೆಂಕಟ್ ಅಂತ. ಇತ್ತೀಚೆಗೆ ವೈರಲ್ ಆಗ್ತಿರುವ ವಿಡಿಯೋವನ್ನು ನೀವೆಲ್ಲರೂ ನೋಡಿಯೇ ಇರ್ತೀರ. ಅದು ನಾನು ಯಾವುದೇ ರೀತಿ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಕಾಂತಾರ ಟೀಂಗೆ, ರಿಷಬ್ ಶೆಟ್ಟಿ ಸರ್‌ಗೆ ನನ್ನ ಕ್ಷಮೆ ಇರಲಿ. ಹಾಗೂ ಮಂಗಳೂರು ಜನತೆಗೆ, ತುಳುನಾಡಿನ ಜನತೆಗೆ ನನ್ನ ಕ್ಷಮೆ ಇರಲಿ. ಈ ಘಟನೆ ಆದಾಗಿಂದ, ಮೂರು ದಿನದಿಂದ ನನಗೆ ನೆಮ್ಮದಿ, ಶಾಂತಿ ಅನ್ನೋದಿಲ್ಲ. ದಯವಿಟ್ಟು ನನ್ನ ರೀತಿ ಯಾರೂ ಮಾಡೋಕೆ ಹೋಗಬೇಡಿ. ನನ್ನ ನಿಮ್ಮವ ಅಂತ ನನ್ನನ್ನು ಕ್ಷಮಿಸಿಬಿಡಿʼʼ ಎಂದು ಕೇಳಿಕೊಂಡಿದ್ದಾನೆ.
ಈ ವೆಂಕಟ್ ಯಾರು ಎಂದು ಹುಡುಕಿದರೆ.. ಕಾವಿ ಧರಿಸಿಕೊಂಡು ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಕುಣಿದಾಡಿದ್ದ ವ್ಯಕ್ತಿ. ಥಿಯೇಟರ್ ಒಳಗೆ.. ಹೊರಗೆ ವಿಚಿತ್ರವಾಗಿ ಪಂಜುರ್ಲಿ, ಗುಳಿಗ ದೈವದಂತೆಯೇ ನರ್ತಿಸಿ, ವರ್ತಿಸಿ ದೊಡ್ಡ ಸುದ್ದಿ ಆಗಿದ್ದರು. ಅದಾದ ನಂತರ ಇನ್ನೂ ಹಲವರು ಹಾಗೆಯೇ ವರ್ತಿಸಿದ್ದರು. ಇದೀಗ ವೆಂಕಟ್ ಎಂಬ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ಆತ ಕ್ಷಮೆ ಕೇಳುವುದಕ್ಕೆ ಕಾರಣವೂ ಇದೆ. ಹಾಗೆ ಮಾಡಿದ ದಿನದಿಂದ ಆತ ನೆಮ್ಮದಿ ಕಳೆದುಕೊಂಡಿದ್ದಾನಂತೆ.
ಕಾಂತಾರದಲ್ಲಿ ಪಂಜುರ್ಲಿ ದೈವ ಕಾಡುಬೆಟ್ಟಕ್ಕೆ ಬರುವುದೇ ಅಲ್ಲಿ ನೆಲೆಸಿದ್ದ ರಾಜನಿಗೆ ನೆಮ್ಮದಿ ಕೊಡುವುದಕ್ಕಾಗಿ. ಪಂಜುರ್ಲಿಯೊಂದಿಗೆ ಗುಳಿಗನೂ ಬರುತ್ತಾನೆ. ಈಗ ಆ ದೈವವನ್ನೇ ಕಾಮಿಡಿ ಮಾಡಿದ್ದವನು ನೆಮ್ಮದಿ ಕಳೆದುಕೊಂಡಿದ್ದಾನೆ. ನೆಮ್ಮದಿ ಕಳೆದುಕೊಂಡು ಮೂರು ದಿನಗಳ ನಂತರ ಆತನಿಗೆ ತಾನೇನೋ ತಪ್ಪು ಮಾಡಿದೆ ಎಂದು ಗೊತ್ತಾಗಿದೆ.
ನಾನು ಉದ್ದೇಶಪೂರ್ವಕವಾಗಿ ಮಾಡಿದ್ದಂತೂ ಅಲ್ಲ. ಆದರೆ.. ಹಾಗೆ ಮಾಡಿದ ದಿನದಿಂದ ಮನಸ್ಸಿಗೆ ಒಂಥರಾ ಕಸಿವಿಸಿ, ನೆಮ್ಮದಿಯೇ ಇಲ್ಲ ಎಂದು ಹೇಳಿಕೊಂಡಿದ್ದಾನೆ. ದಯವಿಟ್ಟು ಯಾರೂ ಆ ರೀತಿ ಮಾಡೋಕೆ ಹೋಗಬೇಡಿ ಎಂದು ಕೈ ಮುಗಿದಿದ್ದಾನೆ.
ಇತ್ತ ತುಳುನಾಡು ಅಕಾಡೆಮಿ ಅಧ್ಯಕ್ಷ ಸುಂದರ್ ರಾಜ್ ರೈ ಕೂಡಾ ಅದೇ ಮಾತು ಹೇಳಿದ್ದಾರೆ. ʻʻಚಿತ್ರಮಂದಿರದಲ್ಲಿ ಪ್ರೇಕ್ಷಕರ ಮೈಮೇಲೆ ಬರುವುದು, ವೇಷ ಹಾಕಿಕೊಂಡು ಓಡಾಡುವುದು ಸರಿಯಲ್ಲ. ಅದು ಸಾಧ್ಯವೂ ಇಲ್ಲ. ಎಷ್ಟೋ ಜನ ಇಲ್ಲಿ ಆಚರಿಸುತ್ತಿದ್ದ ದೈವದ ಆಚರಣೆಯನ್ನು ಬೆಂಗಳೂರು, ಮೈಸೂರಿನಲ್ಲಿ ಆಚರಣೆ ಮಾಡಿದ್ದಾರೆ. ಅಲ್ಲಿಯೇ ವಿಫಲವಾಗಿದೆ. ಕೊನೆಗೆ, ದೈವ ಸ್ಥಾನಕ್ಕೆ ಬಂದು ಕೋಲ ಮಾಡಿಸಿದ್ದಾರೆ. ಭಕ್ತರೇ ಬೇರೆ ಕಡೆ ಮಾಡಿದಾಗ ಆವಾಹನೆಯಾಗದ ಪಂಜುರ್ಲಿ, ಯಕಶ್ಚಿತ್ ಸಿನಿಮಾ ನೋಡಿದಾಗ ಬರುತ್ತದೆ ಎಂದರೆ ನಂಬೋದು ಹೇಗೆ.. ಅನ್ನೋದು ಸುಂದರ್ ರಾಜ್ ರೈ ವಾದ.
ಅದು ಸತ್ಯವೂ ಹೌದು. ಏಕೆಂದರೆ ದೈವ ಆವಾಹನೆಯಾಗುವ ಮುನ್ನ, ದೈವ ನರ್ತಕರು ಯಾವ ಪರಿ ಶಿಸ್ತಿನ ಜೀವನ ಬದುಕುತ್ತಾರೆ ಎಂದರೆ, ಸಾಮಾನ್ಯರು ಅದನ್ನು ಊಹೆ ಮಾಡ್ಕೊಳ್ಳೋಕೂ ಆಗಲ್ಲ. ಈಗ ವೆಂಕಟ್ ಎಂಬ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ಇನ್ ಮುಂದೆ ಹುಷಾರು.



