ಕಾಂತಾರ ಚಾಪ್ಟರ್ 01 ನೋಡಿದ ಕೆಲವರು ಮೈಮೇಲೆ ದೈವ ಆವಾಹನೆಯಾದಂತೆ ಆಡುತ್ತಿರುವ ಕೆಲವು ವಿಡಿಯೋಗಳು ವೈರಲ್ ಆಗಿವೆ. ರಿಷಬ್ ಶೆಟ್ಟಿಯವರು ಸಿನಿಮಾ ಮಾಡಿದ್ಧಾರೆ. ಅಲ್ಲಿ ದೈವ, ಪಂಜುರ್ಲಿ, ಗುಳಿಗ, ಚಾವುಂಡಿ, ಬ್ರಹ್ಮರಾಕ್ಷಸ ಎಲ್ಲರ ಕಥೆಯೂ ಇದೆ. ಅದು ಆ ಜನರ ನಂಬಿಕೆ. ಆ ನಂಬಿಕೆಯನ್ನೇ ತಮಾಷೆಯ ವಸ್ತು ಮಾಡ್ಕೊಂಡಿದ್ಧಾರೆ ಕೆಲವರು. ರಿಷಬ್ ಶೆಟ್ಟಿ ಇದಕ್ಕೇ ಏನೋ.. ದೈವದ ದೃಶ್ಯವನ್ನ ಮಿಮಿಕ್ ಮಾಡೋಕೆ ಹೋಗಬೇಡಿ ಎಂದು ಕೇಳಿದ್ದು. ದೈವನರ್ತರು ರಿಷಬ್ ಶೆಟ್ಟಿಯವರ ಸಿನಿಮಾವನ್ನೇ ಬೇಡ ಅಂಥಾ ಹೇಳಿದ್ದು.
ಕಾಂತಾರ ನೋಡಿದ ಪ್ರೇಕ್ಷಕರು ಹುಚ್ಚರಂತೆ ಆಡ್ತಿದ್ದಾರೆ. ಸಿನಿಮಾ ನೋಡೋದು ಬೇರೆ. ಇಷ್ಟ ಆಗೋದು ಬೇರೆ. ಇಷ್ಟ ಇಲ್ಲದಿದ್ರೂ ಓಕೆ.. ಅದು ಅವರಿಷ್ಟ. ಆದರೆ.. ಈ ರೀತಿ ಹುಚ್ಚರಂತೆ ಆಡ್ತಿರೋದು ಯಾಕೆ..?
ಹಾವೇರಿಯಲ್ಲಿ ಸಿನಿಮಾ ನೋಡ್ತಿದ್ದ ಯುವತಿಗೆ ಮೈಮೇಲೆ ದೈವ ಬಂತಂತೆ. ಥಿಯೇಟರಲ್ಲೇ ಸುಸ್ತಾಗಿ ಹೆಂಗೆಂಗೋ ಆಡಿದ್ದ ಮಹಿಳೆಗೆ ನೀರು ಚಿಮುಕಿಸಿ ತಣ್ಣಗೆ ಮಾಡಿದ್ದಾರೆ.
ಮೈಸೂರಿನಲ್ಲಿಯೂ ಹಂಗೇ ಆಗಿದೆ. ಸಿನಿಮಾ ನೋಡ್ ನೋಡ್ತಿದ್ದಂಗೇ ಮೈಮೇಲೆ ದೈವ ಬಂದಿದೆ.
ಇನ್ನೊಬ್ಬ ಬಿಡಿ.. ಸಿನಿಮಾದಲ್ಲಿ ಥೇಟು ರಿಷಬ್ ಶೆಟ್ಟಿ ಆಡೋ ತರಾನೇ ಆಡಿದ್ದಾನೆ. ಮತ್ತೂ ಒಬ್ಬ ಮೈ ಎಲ್ಲ ಬಿಚ್ಚಿ.. ಕಾಂತಾರ ನೋಡ್ಲಿಲ್ಲ ಅಂದ್ರೆ ಸತ್ತೋಗ್ತೀರಿ ಅಂತೆಲ್ಲ ಡ್ರಾಮಾ ಮಾಡಿದ್ದಾನೆ.
ಇಷ್ಟಕ್ಕೂ ಇದನ್ನ ರಿಷಬ್ ಶೆಟ್ಟಿ ಮೊದಲೇ ಹೇಳಿದ್ರು. ದೈವ ಅನ್ನೋದು ನಮ್ಮ ನಂಬಿಕೆ. ಆ ರೀತಿ ಟ್ರೈ ಮಾಡ್ಬೇಡಿ ಅಂದಿದ್ರು. ರಿಷಬ್ ಶೆಟ್ಟಿ ದುಡ್ಡು ಮಾಡೋಕೆ ಓಕೆ, ನಾವ್ ಮಾಡಿದ್ರೆ ಪ್ರಾಬ್ಲಮ್ಮಾ ಅನ್ನೋವ್ರಿಗೆ ಕೊರತೆ ಇಲ್ಲ ಬಿಡಿ. ಆದರೆ.. ಆ ಸಿನಿಮಾದಲ್ಲಿ ರಿಷಬ್ ಶೆಟ್ಟಿ ತಮಗೆ ತಾವೇ ವಿಧಿಸಿಕೊಂಡಿರೋ ಕಂಡೀಷನ್ಸ್ ಇವೆಯಲ್ಲ.. ಆ ಕಂಡೀಷನ್ಸ್ ನೋಡಿದ್ರೆ ಸಾಕು, ದೈವದ ಬಗ್ಗೆ ರಿಷಬ್ ಅವರಿಗೆ ಇರೋ ಭಯ, ಭಕ್ತಿ, ನಂಬಿಕೆ ಎಲ್ಲ ಕಾಣುತ್ತೆ.
ಆದರೆ.. ಈ ರೀತಿ ಹುಚ್ಚಾಟ ಆಡಿದ್ರೆ.. ನಂಬಿಕೆ ಬರೋದಿರ್ಲಿ.. ದೈವದ ಬಗ್ಗೆ ಇರೋ ಗೌರವ ಕೂಡಾ ಹೋಗುತ್ತೆ. ದೈವ ನರ್ತಕರು ಸಿನಿಮಾದಲ್ಲಿ ದೈವವನ್ನ ಬಳಸೋದು ಬೇಡ ಅಂತಾ ಹೇಳ್ತಾ ಇದ್ದದ್ದು ಯಾಕೆ ಅನ್ನೋದು ಈ ಹುಚ್ಚರ ಹುಚ್ಚಾಟ ನೋಡಿ ಅರ್ಥ ಅಗ್ತಿದೆ.
ಕಾಂತಾರ ಸಿನಿಮಾ. ಅದರಲ್ಲಿ ದೈವ ಇದೆ. ಭೂತ ಕೋಲದ ಬಗ್ಗೆ ನಂಬಿಕೆ ಇದೆ. ಇಂಥ ಡ್ರಾಮಾ ಮಾಡಿ ಮಾಡಿನೇ.. ಜನಕ್ಕೆ ದೇವರ ಮೇಲಿನ ಭಕ್ತಿ ಕಡಿಮೆ ಆಗಿದ್ದು. ಅದನ್ನ ದೈವದ ವಿಷಯಕ್ಕೂ ಮಾಡಬೇಡಿ. ಅವರಾದ್ರೂ ಸೀರಿಯಸ್ ಆಗಿ ದೈವವನ್ನ ನಂಬಿಕೊಂಡಿದ್ದಾರೆ. ಆ ನಂಬಿಕೆಯನ್ನ ಸಾಯಿಸಬೇಡಿ.
ದೈವಗಳಾದ ಪಂಜುರ್ಲಿ, ಗುಳಿಗ, ಚಾವುಂಡಿ.. ಹಂಗೆಲ್ಲ ಸಿಕ್ಕ ಸಿಕ್ಕವರ ಮೈಮೇಲೆ ಬರೋದಿಲ್ಲ. ಸಿನಿಮಾ ನೋಡಿದ್ದಕ್ಕೆ ಮೈಮೇಲೆ ಬರೋದಂತೂ ಸುಳ್ಳು. ಹಂಗೇನಾದ್ರೂ ಮೈಮೇಲೆ ಬರ್ತಿದೆ ಅಂದ್ರೆ.. ಅಂತಹವರನ್ನ ತಕ್ಷಣ ಹುಚ್ಚಾಸ್ಪತ್ರೆಗೆ ಸೇರಿಸೋದು ಒಳ್ಳೇದು. ಮೆಂಟಲಿ ವೀಕ್ ಇರೋ ಆ ಜನ, ಡೇಂಜರಸ್ ಆಗಿರ್ತಾರೆ.



