ಯಾವುದೂ ಬದಲಾಗಿಲ್ಲ. ಹಳೆಯ ಕಾಂತಾರಕ್ಕೂ ಹೊಸ ಕಾಂತಾರಕ್ಕೂ ಮಧ್ಯೆ ಒಂದು ಇತಿಹಾಸ ಸೃಷ್ಟಿಯಾಗಿದೆ. ಒಂದು ಹಿನ್ನೆಲೆ ಇದೆ. ಹಳೆಯ ಕಾಂತಾರದಲ್ಲಿ ಯಶಸ್ಸಿನ ಹಂಬಲವಿತ್ತು. ಈಗಿನ ಕಾಂತಾರದಲ್ಲಿ ದೊಡ್ಡ ದೊಡ್ಡ ದೊಡ್ಡ ದೊಡ್ಡ ಯಶಸ್ಸಿನ ಹಂಬಲಗಳಿವೆ. ಎಲ್ಲದಕ್ಕೂ ಕಾರಣ ಕಾಂತಾರ. ಹೀಗಾಗಿ ಹಳೆಯ ಹಾದಿಯಲ್ಲಿಯೇ.. ದೈವದ ಅಪ್ಪಣೆ ಪಡೆದು.. ನೀತಿ ನಿಯಮಗಳನ್ನು ಪಾಲಿಸುತ್ತಲೇ ದೊಡ್ಡ ಹೆಜ್ಜೆಯಿಟ್ಟಿದೆ ಕಾಂತಾರ 2. ಇದು ಸೀಕ್ವೆಲ್ ಅಲ್ಲ, ಪ್ರೀಕ್ವೆಲ್.
ಅದೇ ಆನೆಗುಡಿ ದೇವಸ್ಥಾನ. ಕಾಂತಾರ ಎಲ್ಲಿ ಶುರುವಾಗಿತ್ತೋ.. ಅಲ್ಲಿಯೇ ಕಾಂತಾರ ಪ್ರೀಕ್ವೆಲ್ ಶುರುವಾಗಲಿದೆ. ಹೌದು, ಕಾಂತಾರ 2ಗೆ ಅರ್ಥಾತ್ ಪ್ರೀಕ್ವೆಲ್`ಗೆ ಆಗಸ್ಟ್ 27ಕ್ಕೆ ಮುಹೂರ್ತ ನಡೆಸುವುದಾಗಿ ಚಿತ್ರತಂಡ ನಿರ್ಧರಿಸಿದೆ.
ಬಹುತೇಕ ಸ್ಕ್ರಿಪ್ಟ್ ಮುಗಿಸಿರುವ ರಿಷಬ್ ಶೆಟ್ಟಿ, ಸ್ಕ್ರಿಪ್ಟ್`ನ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡುತ್ತಿದ್ದಾರಂತೆ. ಲೊಕೇಷನ್`ಗಳನ್ನೂ ಫಿಕ್ಸ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ಆಗಸ್ಟ್ 27ಕ್ಕೆ ಕಾಂತಾರ ಚಿತ್ರ ಸೆಟ್ಟೇರಲಿದೆ. ಆಗಸ್ಟ್ ನಲ್ಲಿ ಕಾಂತಾರ ಪ್ರಿಕ್ವೆಲ್ ಗೆ ಮುಹೂರ್ತವಾದರೆ ಸೆಪ್ಟೆಂಬರ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ ರಿಷಬ್ ಶೆಟ್ಟಿ. ಪಂಜುರ್ಲಿ ದೈವದ ಸುತ್ತವೇ ಚಿತ್ರಕಥೆ ಇರುವುದರಿಂದ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ ‘ಕಾಂತಾರ’ 2 ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.
ಹೊಂಬಾಳೆಯವರು ಮೊದಲ ಕಾಂತಾರವನ್ನು 16 ಕೋಟಿಗಳಲ್ಲಿ ಮುಗಿಸಿದ್ದರು. ಅದೂ ಸೆಟ್ ಕೊಚ್ಚಿ ಹೋಗಿದ್ದ ಕಾರಣಕ್ಕೆ ಬಜೆಟ್ ಏರಿತ್ತು. ಆದರೆ ಈ ಕಾಂತಾರ 2ನ್ನೂ ಕಾಂತಾರಕ್ಕೆ ಖರ್ಚು ಮಾಡಿದ್ದಕ್ಕಿಂತ 10 ಪಟ್ಟು ಖರ್ಚು ಮಾಡಲು ಹೊಂಬಾಳೆ ತೀರ್ಮಾನ ಮಾಡಿದೆ.



