ಅವನು ಪರಶುರಾಮನಾ..? ಕೈಯ್ಯಲ್ಲಿ ಪರಶು ಇದೆ. ಗುಹೆಯೊಳಗೆ ಕೊಡಲಿ ಮತ್ತು ತ್ರಿಶೂಲ ಹಿಡಿದ ಋಷಿಯ ರೂಪದಲ್ಲಿ ರಿಷಬ್ ಕಾಣಿಸಿಕೊಂಡಿದ್ಧಾರೆ. ತ್ರಿಶೂಲ, ಕೊಡಲಿ, ಸುರಿಯುತ್ತಿರುವ ರಕ್ತ, ಕೆಂಡದಂತೆ ಸುಡುತ್ತಿರುವ ಕಣ್ಣುಗಳು.. ಹಾಗಾದರೆ ಅವನು ಅಘೋರಿಯಾ.. ಇಲ್ಲ ಇಲ್ಲ.. ಕರಾವಳಿಯ ಪಾಡ್ದನಗಳಲ್ಲಿ ಅಘೋರಿಗಳ ಪ್ರಸ್ತಾಪವೂ ಬರಲ್ಲ. ಹಾಗಾದರೆ ಗುಳಿಗನಾ..? ಪಂಜುರ್ಲಿಯಾ..? ಇರಬಹುದೇನೋ.. ಪಂಜುರ್ಲಿ ಶಿಕ್ಷೆ ಕೊಡುವುದಿಲ್ಲ. ಗುಳಿಗನಷ್ಟೇ ಶಿಕ್ಷೆ ನೀಡುತ್ತಾನೆ. ಏಕೆಂದರೆ ಅವನೇ ಕ್ಷೇತ್ರಪಾಲ.. ಈ ಎಲ್ಲ ಪ್ರಶ್ನೆಗಳ ನಡುವೆಯೇ ರಿಷಬ್ ಶೆಟ್ಟಿಯ ಕಾಂತಾರ 1 ಫಸ್ಟ್ ಲುಕ್ʻನ್ನು ಬೊಂಬಾಟ್ ಎನಿಸುವಂತೆ ಮಾಡಿವೆ. . ಬ್ಯಾಕ್ ಗ್ರೌಂಡಿನಲ್ಲಿ ಕೇಳಿ ಬರುವ ವರಾಹರೂಪಂ.. ಗೀತೆಯ ಬೇರೆಯದೇ ಟ್ಯೂನ್ʻನ ಮ್ಯೂಸಿಕ್ ಕೊಡುವ ಸಂಭ್ರಮವೇ ಬೇರೆ.
ಕಾಂತಾರ 1 ಮುಹೂರ್ತ ನೆರವೇರಿದೆ. ರಿಷಬ್ ಶೆಟ್ಟಿಯವರ ಅದೃಷ್ಟದ ಪುಣ್ಯ ಕ್ಷೇತ್ರ ಆನೆಗುಡ್ಡದ ಗಣಪತಿ ದೇವಸ್ಥಾನದಲ್ಲಿಯೇ ಮುಹೂರ್ತವಾಗಿರುವುದು ವಿಶೇಷ. ರಿಷಬ್ ಶೆಟ್ಟಿಯವರದ್ದು ಪರಶುರಾಮನ ವೇಷವಾ..? ಅದು ಗುಳಿಗನ ವೇಷವಾ..? ಅಥವಾ.. ಬೇರೇನು.. ಎಂಬ ಕುತೂಹಲ ಸೃಷ್ಟಿಸಿದೆ ಫಸ್ಟ್ ಲುಕ್. ‘ಕಾಂತಾರ ಅಧ್ಯಾಯ 1’ರ ಕಥೆಯು ಕದಂಬರ ಆಳ್ವಿಕೆಯ ಕಾಲದಲ್ಲಿ ನಡೆಯಲಿದೆ. ಅಂದಹಾಗೆ, ಕದಂಬರು ಕ್ರಿ ಶ 345ರಿಂದ 540ರ ವರೆಗೆ ಆಳ್ವಿಕೆ ನಡೆಸಿದ್ದರು. ಹಾಗಾಗಿ, ಈ ಕಥೆಯು ಅದೇ ಕಾಲಘಟ್ಟದಲ್ಲಿ ನಡೆಯಬಹುದು. ಒಟ್ಟಿನಲ್ಲಿ ದೊಡ್ಡ ಕುತೂಹಲವನ್ನಂತೂ ಈ ಫಸ್ಟ್ ಲುಕ್ ಟೀಸರ್ ಸೃಷ್ಟಿಸಿದೆ. ಕನ್ನಡದ ಜೊತೆ ಏಳು ಭಾಷೆಗಳಲ್ಲಿ ಫಸ್ಟ್ ಲುಕ್ ಟೀಸರ್ ಸಿಗುತ್ತಿದೆ.
ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಅಲ್ಲದೆ ಇಂಗ್ಲಿಷ್ ಮತ್ತು ಬೆಂಗಾಲಿ ಭಾಷೆಯಲ್ಲೂ ಸಿನಿಮಾ ಬರಲಿದೆ. ತುಳುವಿನಲ್ಲಿ ಇಲ್ಲ.
ಆನೆಗುಡ್ಡದ ಗಣಪತಿ ಹೊಂಬಾಳೆಯವರಿಗೂ ಅದೃಷ್ಟದ ಕ್ಷೇತ್ರ. ರಿಷಬ್ ಶೆಟ್ಟಿಯವರಿಗೂ ಅದೃಷ್ಟದ ಕ್ಷೇತ್ರ. ಕಳೆದ ಬಾರಿ ಕಾಂತಾರಕ್ಕೂ ಇಲ್ಲಿಯೇ ಮುಹೂರ್ತ ಮಾಡಿದ್ದೇವೆ. ಅದೇ ರೀತಿ ಈ ಬಾರಿಯೂ ಆನೆಗುಡ್ಡೆಯ ಗಣಪತಿ ಆಶೀರ್ವಾದದೊಂದಿಗೆ ಪ್ರಾರಂಭ ಮಾಡಿದ್ದೇವೆ. ಅದ್ಭುತವಾದ ಸಿನಿಮಾ ನೀಡಲು ಇಡೀ ಚಿತ್ರ ತಂಡ ಕೆಲಸ ಮಾಡಲಿದೆ ಎಂದಿದ್ದಾರೆ ನಟ ನಿರ್ದೇಶಕ ರಿಷಬ್ ಶೆಟ್ಟಿ.
ಬಹುತೇಕ ಕಾಂತಾರ ಚಿತ್ರದ ತಾಂತ್ರಿಕ ತಂಡವೇ ಮುಂದುವರಿಯಲಿದೆ. ಕರಾವಳಿ ಭಾಗದಲ್ಲೇ ಹೆಚ್ಚಿನ ಶೂಟಿಂಗ್ ನಡೆಯಲಿದೆ. ಕಾಂತಾರದ ಚಿತ್ರ ತಂಡವೇ ಹೆಚ್ಚಾಗಿ ಅಧ್ಯಾಯ-1ರಲ್ಲೂ ಇರಲಿದೆ. ಕೆಲವೊಂದು ಬದಲಾವಣೆಗಳ ಸಹಿತ ಹೊಸಬರು ಕೂಡ ಸೇರಲಿದ್ದಾರೆ. ಸಿನೆಮಾ ತಂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದೆ. ಕನ್ನಡದವರಿಗೆ ಪ್ರಥಮ ಆದ್ಯತೆ. ಸದ್ಯಕ್ಕೆ ಸಿನಿಮಾದ ಬಗ್ಗೆ ಏನೂ ಹೇಳುವುದಿಲ್ಲ. ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದೇವೆ ಎಂದಿರುವ ರಿಷಬ್ ಶೆಟ್ಟಿ, ಚಿತ್ರೀಕರಣದಲ್ಲಿ ಬ್ಯುಸಿಯಾಗುತ್ತಿದ್ಧಾರೆ.
ಚಿತ್ರಕ್ಕೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿಯವರೇ ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ಧಾರೆ. ಉಳಿದಂತೆ ತಾರಾಗಣದ ಡೀಟೈಲ್ಸ್ ಗೊತ್ತಾಗಿಲ್ಲ. ಜನರನ್ನು ಸೇರದಂತೆ ನಿಭಾಯಿಸುವ ಸಲುವಾಗಿ ಚಿತ್ರೀಕರಣವನ್ನು ಶ್ರೀಲಂಕಾದಲ್ಲಿ ಮಾಡಲು ನಿರ್ಧಾರ ಮಾಡಲಾಗಿದೆ.



