ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ಮೊದಲೂ ಇತ್ತು. ಈಗಲೂ ಶುರುವಾಗಿದೆ. ʻಪ್ರೇಕ್ಷಕರ ಕೋರ್ಟ್ʼ ಆಗಿರುವ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇವೆ. ಇದರ ನಡುವೆಯೇ ಕಾಂತಾರ ಹೊಸ ದಾಖಲೆ ಬರೆದಿದೆ. ವೀಕೆಂಡ್ ಬರುತ್ತಿದ್ದಂತೆ ಮತ್ತೊಮ್ಮೆ ಕಾಂತಾರ ಬಾಕ್ಸಾಫೀಸ್ ಕಲೆಕ್ಷನ್ ಮೌಂಟ್ ಎವರೆಸ್ಟ್ ಏರಿದೆ. ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಥಟ್ಟಂತ ಡಬಲ್.. ತ್ರಿಬಲ್.. ಆಗಿದೆ. ಕಾಂತಾರ ನೋಡಿದವರ ಸಂಖ್ಯೆ ಈಗ 1 ಕೋಟಿಯ ಗಡಿ ದಾಟಿದೆ. ಮೊದಲಿನ ಕಾಂತಾರ ಚಿತ್ರವನ್ನು ಕೂಡಾ ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದರು. ಆದರೆ.. ಈ ಬಾರಿ ಹಾಗಲ್ಲ. ಕಾಂತಾರ ಚಾಪ್ಟರ್ 01 ಚಿತ್ರವನ್ನು ನೋಡಿದ.. ಆನ್ ಲೈನಿನಲ್ಲಿ ಟಿಕೆಟ್ ಖರೀದಿಸಿದವರ ಸಂಖ್ಯೆಯೇ 1 ಕೋಟಿ ದಾಟಿದೆ. ಚಿತ್ರಮಂದಿರಗಳಲ್ಲಿ ಟಿಕೆಟ್ ಖರೀದಿಸಿ ನೋಡಿದವರ ಸಂಖ್ಯೆಯ ಲೆಕ್ಕ ಬೇರೆ. ಆ ಲೆಕ್ಕದಲ್ಲಿ ನೋಡಿದರೆ.. ಕಾಂತಾರ ಚಾಪ್ಟರ್ 01, ಕಾಂತಾರ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ. ಅಂದಹಾಗೆ ಕಾಂತಾರ ಲೈಫ್ ಟೈಂ ಟಿಕೆಟ್ ಪಡೆದು ನೋಡಿದವರ ಸಂಖ್ಯೆ 1 ಕೋಟಿ ತಲುಪಿದಾಗ. ಸಿನಿಮಾ 50 ದಿನಗಳ ಸಮೀಪದಲ್ಲಿತ್ತು. ಆದರೆ.. ಈ ಬಾರಿ ಒಂದು ವಾರದಲ್ಲೇ ದಾಖಲೆ ಬರೆದಿದೆ. ಜೊತೆಗೆ ಕಾಂತಾರ ಚಿತ್ರದ ಒಟ್ಟಾರೆ ಕಲೆಕ್ಷನ್ 600 ಕೋಟಿ ದಾಟಿದ್ದು, ಈ ವಾರಾಂತ್ಯದ ಹೊತ್ತಿಗೆ 800 ಕೋಟಿ ದಾಟುವ ನಿರೀಕ್ಷೆ ಇದೆ.
ಇನ್ನು ಕಾಂತಾರ ಪರ-ವಿರೋಧ ಚರ್ಚೆಗಳೂ ಚಾಲ್ತಿಯಲಿಲವೆ. ಕಾಂತಾರ ಸಿನಿಮಾವನ್ನು ವಿರೋಧಿಸುತ್ತಿರುವವರ ಪ್ರಕಾರ ದೈವ ಗಡ್ಡ ಬಿಡಲ್ಲ. ದೈವ ಯಾರನ್ನೂ ಕೊಲ್ಲುವುದಿಲ್ಲ. ರಕ್ತ ಕುಡಿಯುವುದಿಲ್ಲ. ವಿಕೃತವಾಗಿ ವರ್ತಿಸುವುದಿಲ್ಲ. ಕಾಂತಾರದಲ್ಲಿ ದೈವ ಆವಾಹನೆಯಾದಾಗ ರಿಷಬ್ ಶೆಟ್ಟಿಯವರ ವರ್ತನೆ, ದೈವಕ್ಕೆ ಅಪಮಾನವಾಗುವಂತಿದೆ. ದೈವಕ್ಕೆ ಅಪಚಾರ ಮಾಡಿದ ಕಾರಣಕ್ಕೇ ಕಾಂತಾರ ಚಿತ್ರೀಕರಣ ವೇಳೆ ಅನಾಹುತಗಳ ಮೇಲೆ ಅನಾಹುತಗಳಾದವು.
ಇನ್ನು ಅದು ತಪ್ಪು ಎನ್ನುವವರ ಪ್ರಕಾರ ಅಂಥದ್ದೇನೂ ಆಗಿಲ್ಲ. ಸಿನಿಮಾದ ಆರಂಭದಲ್ಲಿಯೇ ಇದು ನಮ್ಮ ನಂಬಿಕೆ. ಇದನ್ನು ಅನುಕರಣೆ ಮಾಡಬೇಡಿ ಎಂಬ ಡಿಸ್ ಕ್ಲೇಮರ್ ಕೂಡಾ ಇದೆ. ಜೊತೆಗೆ ಅದು ಸಿನಿಮಾ. ಸಿನಿಮಾದಂತೆ ನೋಡಿ. ಒಂದು ಸಿನಿಮಾ ಎಂದ ಮೇಲೆ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ದೈವ ಮುನಿಸಿಕೊಂಡಿದ್ದರೆ, ಕಾಂತಾರ ಫ್ಲಾಪ್ ಆಗಬೇಕಿತ್ತು. ಸಿನಿಮಾದ ಯಶಸ್ಸು ಕೂಡಾ ದೈವದ ಅನುಗ್ರಹವೇ ಅಲ್ಲವೇ..
ಅಂದಹಾಗೆ ದೈವದ ಕುರಿತು ದೈವಾರಾಧನೆ, ಆಚರಣೆ, ದೈವನರ್ತಕರ ಕುರಿತು ಬಂದ ಚಿತ್ರಗಳಲ್ಲಿ ಕಾಂತಾರ ಮೊದಲ ಚಿತ್ರವಲ್ಲ. ಈ ಹಿಂದೆ ದೈವ, ಗಗ್ಗರ, ಧರ್ಮದೈವ, ಕಲ್ಜಿಗ, ಕರಿಹೈದ ಕರಿಅಜ್ಜ, ದಿಗಿಲ್, ಧರ್ಮಚಾವಡಿ, ಪುಂಡಿ ಪಣವು, ದೇಯಿ ಬೈದೆತಿ.. ಹೀಗೆ ಹಲವು ಚಿತ್ರಗಳಿವೆ. ಯಕ್ಷಗಾನಗಳೂ ಆಗಿವೆ. ಯಕ್ಷಗಾನದ ವಿಡಿಯೋಗಳೂ ಆಗಿವೆ. ಶಾರ್ಟ್ ಫಿಲ್ಮ್ ಆಗಿವೆ. ಮಾರುಕಟ್ಟೆಯೂ ಆಗಿದೆ. ಹಣವನ್ನೂ ಮಾಡಿವೆ. ಆದರೆ.. ಎಲ್ಲವೂ ತುಳು ಚಿತ್ರಗಳಲ್ಲಿಯೇ ಹೆಚ್ಚು. ಹುಡುಕಿದರೆ ಇನ್ನಷ್ಟು ಸಿಕ್ಕಾವು. ಆದರೆ.. ಆ ಯಾವ ಚಿತ್ರಗಳಿಗೂ ಇಲ್ಲದ ವಿರೋಧ ಕಾಂತಾರಕ್ಕೆ ಮಾತ್ರ ಏಕೆ..? ಸಕ್ಸಸ್ ಆಯ್ತು ಅಂತಾನಾ.. ಅರ್ಥವೇ ಆಗಲ್ಲಪ್ಪ.



