ಶಿವಣ್ಣ ವೃತ್ತಿ ಜೀವನದಲ್ಲಿ ಹಲವಾರು ಮರೆಯಲಾಗದ ಚಿತ್ರಗಳಿವೆ. ಜನುಮದ ಜೋಡಿ ಕೂಡಾ ಅವುಗಳಲ್ಲಿ ಒಂದು. ಜನುಮದ ಜೋಡಿ ಚಿತ್ರದ ಕಥೆ ಅಷ್ಟೇ ಅಲ್ಲ, ಚಿತ್ರದಲ್ಲಿ ಬಳಸಿಕೊಳ್ಳಲಾಗಿರುವ ಚಾಮರಾಜನಗರ ಸುತ್ತ ಮುತ್ತಲಿನ ಕಂಸಾಳೆ ನೃತ್ಯವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
ಕೋಲುಮಂಡೆ ಜಂಗಮದೇವರು ಗುರುವೇ ಕ್ವಾರುಣ್ಯಕ್ಕೆ ದಯ ಮಾಡವ್ರೆ.. ಎಂದು ಶಿವಣ್ಣ ಹಾಡುತ್ತಾ ಬರುತ್ತಿದ್ದರೆ.. ಪ್ರೇಕ್ಷಕರ ಹೃದಯದಲ್ಲಿ ಕಂಸಾಳೆಯ ಸದ್ದುಗಳು ಮೊಳಗುತ್ತಿದ್ದವು. ಈ ಹಾಡನ್ನು ಚಾಮರಾಜನಗರ ಸುತ್ತಮುತ್ತಲಿನ ಜನ ಸರ್ವೇಸಾಧಾರಣವಾಗಿ ಕೇಳಿರುತ್ತಾರೆ. ಆದರೆ ಇಡೀ ಕನ್ನಡಿಗರಿಗೆ ಈ ಹಾಡು ಹೃದಯ ಹೊಕ್ಕಿದ್ದು ಜನುಮದ ಜೋಡಿ ಚಿತ್ರದ ನಂತರ. ಸಂಗೀತ ನಿರ್ದೇಶಕ ವಿ ಮನೋಹರ್ ಮತ್ತು ನಿರ್ದೇಶಕ ನಾಗಾಭರಣ ಅವರು ಸೃಷ್ಟಿಸಿದ್ದ ಅದ್ಭುತ ಗೀತೆ ಅದು. ಡಾ.ರಾಜ್ ಅವರ ತಮ್ಮ ವರದಪ್ಪನವರ ಒತ್ತಾಸೆಯ ಮೇರೆಗೆ ಸೃಷ್ಟಿಯಾಗಿದ್ದ ಹಾಡಿನಲ್ಲಿ ನಟ ಶಿವರಾಜ್ ಕುಮಾರ್ ಕೂಡಾ ಅಷ್ಟೇ ಅದ್ಭುತವಾಗಿ ಕಂಸಾಳೆ ನೃತ್ಯಕ್ಕೆ ಹಾಡಿ ಕುಣಿದಿದ್ದರು. ಸ್ವತಃ ಮಾದಪ್ಪನ ಜಿಲ್ಲೆಯವರಾದ ಡಾ.ರಾಜ್ ಅವರಿಗೂ ಈ ಹಾಡು ಹೃದಯಕ್ಕೆ ಹತ್ತಿರವಾಗಿತ್ತು. ಆ ಹಾಡಿನ ನೃತ್ಯ ಸಂಯೋಜನೆ ಮಾಡಿದ್ದ ಕುಮಾರಸ್ವಾಮಿ ನಿಧನರಾಗಿದ್ದಾರೆ.
ಸೂರಿನ ಬಂಡಿಕೇರಿಯ ನಿವಾಸಿ ಕುಮಾರಸ್ವಾಮಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೈಸೂರಿನ ಹಿರಿಯ ಜಾನಪದ ಕಲಾವಿದ ಕುಮಾರಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತಂದೆ ಕಂಸಾಳೆ ಮಹಾದೇವಯ್ಯ ಅವರಂತೆ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಾನಪದ ಸೊಬಗನ್ನು ಕನ್ನಡಿಗರಿಗೆ ಉಣಬಡಿಸಿದ ಕುಮಾರಸ್ವಾಮಿ ಅವರ ಕಲಾಸೇವೆ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗ ಮತ್ತು ಬಂಧುಮಿತ್ರರಿಗೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವರಕೋಡು ಸಮೀಪದ ಬಡಗಲಹುಂಡಿಯಲ್ಲಿ 1951ರಲ್ಲಿ ಜನಿಸಿದ ಕುಮಾರಸ್ವಾಮಿ ಅವರಿಗೆ ತಂದೆ ಕಂಸಾಳೆ ಮಹಾದೇವಯ್ಯ ಅವರೇ ಗುರು. ಕೇವಲ ೭ನೇ ಕ್ಲಾಸ್ ಓದಿದ್ದ ಕುಮಾರಸ್ವಾಮಿ, ಕಂಸಾಳೆಯಲ್ಲಿ ಪ್ರವೀಣರಾದರು. ಕಂಸಾಳೆ, ಹಾಡುಗಾರಿಕೆ, ನೃತ್ಯ ಪ್ರಕಾರ, ಬೀಸು ಕಂಸಾಳೆ.. ಹೀಗೆ ಹಲವು ಪ್ರಕಾರಗಳನ್ನು ಒಗ್ಗಿಸಿಕೊಂಡಿದ್ದ ಕುಮಾರಸ್ವಾಮಿ ಅವರಿಗೆ‘ಜಾನಪದ ಲೋಕ’ ಪ್ರಶಸ್ತಿ, ಕನ್ನಡ ಜಾನಪದ ಪರಿಷತ್ತಿನ ‘ಜಾನಪದ ಪ್ರಪಂಚ’, ಕನ್ನಡ ಬಳಗದ ‘ಕಂಸಾಳೆ ಜಾನಪದ ರತ್ನ’, ಕನ್ನಡ ಕ್ರಾಂತಿ ದಳದ ‘ಕಂಸಾಳೆ ಕಂಠೀರವ’ ಬಿರುದು ಸೇರಿ ವಿವಿಧ ಪುರಸ್ಕಾರಗಳು ಸಂದಿದ್ದವು. 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇವರು, ಇಟಲಿ, ರೋಂ, ಟರ್ಕಿ ಸೇರಿ ದೇಶ- ವಿದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದರು.
ಆದರೆ ಸಿನಿಮಾ ಲೋಕದಲ್ಲಿ ಕುಮಾರಸ್ವಾಮಿ ಅವರು ಖ್ಯಾತಿ ಪಡೆದಿದ್ದು ಕೋಲುಮಂಡೆ.. ಹಾಡಿನಿಂದ. ಕನಕಳಿಗೆ ಕೃಷ್ಣ ಕೋಲುಮಂಡೆ ಹಾಡಿನ ಮೂಲಕ ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಾನೆ. ಆ ಹಾಡಿಗೆ ಅದ್ಭುತವಾಗಿ ನೃತ್ಯ ಸಂಯೋಜಸಿದ್ದರು ಕುಮಾರಸ್ವಾಮಿ.
ಕಂಸಾಳೆಯಲ್ಲಿ ತಾಳ ಹಾಕುತ್ತಾ ಹಾಡುವುದು ಸುಲಭದ ಮಾತಲ್ಲ. ನೃತ್ಯ ಪ್ರಕಾರದ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದವರು, ತರಬೇತಿ ಇದ್ದವರಷ್ಟೇ ಅಷ್ಟು ಅದ್ಬುತವಾಗಿ ಹಾಡಲು ಹಾಗೂ ಕುಣಿಯಲು ಸಾಧ್ಯ. ತಾಳ ತುಸು ತಪ್ಪಿದರೂ ಕೈ ಗಾಯವಾಗುವ ಸಂಭವ ಇರುತ್ತದೆ. ಚಾಮರಾಜನಗರದಲ್ಲಿ ಕಂಸಾಳೆ ಹಾಡುತ್ತಾ ಕ್ವಾರುಣ್ಯ ಬೇಡುವುದು ಸರ್ವೇಸಾಮಾನ್ಯ. ಚಾಮರಾಜನಗರದ ಆ ಸಂಸ್ಕೃತಿಯನ್ನು ಜನುಮದ ಜೋಡಿ ಚಿತ್ರದಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳಲಾಗಿತ್ತು. ಆ ಯಶಸ್ಸಿಗೆ ಡಾ.ರಾಜ್ ಸಂಸ್ಥೆಯಷ್ಟೇ ಕೊಡುಗೆ ಕುಮಾರಸ್ವಾಮಿ ಅವರದ್ದು. ಡಾ.ರಾಜ್ ಅವರಂತೂ ಹಾಡನ್ನು ನೋಡಿ ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿ ಮಾಡಿ ಅಭಿನಂದಿಸಿದ್ದರು. ಈಗ ಆ ಕಂಸಾಳೆ ಕುಮಾರಸ್ವಾಮಿ ವಿಧಿವಶರಾಗಿದ್ದಾರೆ.



