ಕನ್ನೇರಿ ಶ್ರೀ. ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. ಇವರು ಇತ್ತೀಚೆಗೆ ವಿವಾದದಿಂದಲೇ ಸುದ್ದಿಯಾಗಿದ್ದಾರೆ. ಆದರೆ ಕನ್ನೇರಿ ಶ್ರೀಗಳನ್ನು ಬೆಂಬಲಿಸುವವರೂ ಇದ್ದಾರೆ. ಕಾರಣ ಇಷ್ಟೇ, ಕನ್ನೇರಿ ಶ್ರೀಗಳು ಆಡುತ್ತಿರುವ ಮಾತು, ಭಾಷೆಯ ಬಳಕೆ ತಪ್ಪಿರಬಹುದು, ಆದರೆ ಸುಳ್ಳನ್ನಂತೂ ಹೇಳುತ್ತಿಲ್ಲ ಎನ್ನುವುದು ಕೆಲವರ ವಾದ. ಇಷ್ಟಕ್ಕೂ ಕನ್ನೇರಿ ಶ್ರೀಗಳು ಮತ್ತೆ ಮತ್ತೆ ಚರ್ಚೆ ಆಗ್ತಾ ಇರೋದು ಏಕೆ..? ಒಂದಂತೂ ಸತ್ಯ. ಕನ್ನೇರಿ ಶ್ರೀಗಳ ವಿವಾದದಿಂದಾಗಿ.. ಇನ್ನೊಂದಿಷ್ಟು ಸ್ವಾಮೀಜಿಗಳ ಮರೆತೇ ಹೋಗಿದ್ದ ಹೊಲಸು ಭಾಷಣಗಳು ನೆನಪಾಗಿವೆ.
ಮೊದಲಿಗೆ ಕನ್ನೇರಿ ಶ್ರೀಗಳ ಒಂದಿಷ್ಟು ಹೇಳಿಕೆಗಳನ್ನು ನೋಡಿದರೆ..
ನಾವು ಕಾವಿ ಬಟ್ಟೆ ಹಾಕಿಕೊಂಡಿರುವ ಬಸವ ತಾಲಿಬಾನಿಗಳು. ಹನುಮ ಮಾಲೆಯ ಬಗ್ಗೆ ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರೂ, ನಮ್ಮಂಥ ಕಾವಿ ಧರಿಸಿದ ಬಸವ ತಾಲಿಬಾನಿಗಳೂ ಅದನ್ನು ಪ್ರಶ್ನಿಸಬಹುದು. ಇಲ್ಲಿ ವಿವಾದ ಆಗಿದ್ದು “ಕಾವಿ ಧರಿಸಿದ ಮಠಾಧೀಶರು ಬಸವ ತಾಲಿಬಾನಿಗಳು” ಎಂಬ ಪದ ಪ್ರಯೋಗಕ್ಕೆ.
ನಮ್ಮ ಹುಡುಗಿಯರನ್ನ ಹೊತ್ತುಕೊಂಡು ಹೋಗುತ್ತಾರೆ. ಅಂಥವರನ್ನು ಕರೆಯಿಸಿ ಆರತಿ ಬೆಳಗಬೇಕಾ? ಅಂಥವರನ್ನು ಹಿಡಿದುಕೊಂಡು ಬಂದು ತಿಳಿಯುವ ಭಾಷೆಯಲ್ಲಿ ಹೇಳಬೇಕು,. ಕೈಯಲ್ಲಿ ಬಡಗಿ ಹಿಡಿದು ಅಡ್ಡಾಡಿದ್ದನ್ನು ವಿರೋಧಿಸುತ್ತಾರೆ. ಬಡಗಿ ಬದಲಿಗೆ ಏನು? ಆರತಿ ತಟ್ಟೆ ಹಿಡಿದುಕೊಳ್ಳಬೇಕಾ? (ಹುಡುಗಿಯರನ್ನು ಹೊತ್ತುಕೊಂಡು ಹೋಗ್ತಾರೆ ಎಂಬ ಹೇಳಿಕೆ ವಿವಾದವಾಯ್ತು)
ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ. ಅವರು ಬಸವ ಸಂಸ್ಕೃತಿ ಅಭಿಯಾನ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿ; ದೇವರು ಗುಡ್ಯಾಗ ಇಲ್ಲ. ಗುಡೀಗೆ ಹೋಗಬ್ಯಾಡ್ರಿ, ಮನ್ಯಾಗಿನ ದೇವರುಗಳನ್ನು ತಗೊಂಡು ಹೊಳ್ಯಾಗ ಹಾಕ್ರಿ. ಹೋಟೆಲ್ ದಾಗ ಹೋಗಿ ದಾರು ಕುಡೀರಿ. ಆರಾಮಾಗಿರಿ, ಮಾಂಸ ತಿನ್ರಿ…” ಎಂದು ಜನರಿಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಇದು ಕೋರ್ಟಿಗೂ ಹೋಗಿ, ಆನಂತರ ಸ್ವಾಮೀಜಿಗೆ ಸುಪ್ರೀಂಕೋರ್ಟ್ ಧ್ಯಾನದ ಸಲಹೆ ನೀಡಿತ್ತು. ವಿಜಯಪುರ, ಧಾರವಾಡ, ಬಾಗಲಕೋಟೆ.. ಮೊದಲಾದ ಕಡೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೊಂದು ವಿವಾದ.
ವಾಸ್ತವದಲ್ಲಿ ಕನ್ನೇರಿ ಶ್ರೀಗಳು ಆಡುತ್ತಿರುವ ಭಾಷೆ, ಪದ ಬಳಕೆ ತಪ್ಪಿರಬಹುದು. ಆದರೆ, ಅವರು ಹೇಳ್ತಾ ಇರೋದ್ರಲ್ಲಿ ಯಾವುದು ಸುಳ್ಳು.. ಏಕೆಂದರೆ ಸಾಣೆಹಳ್ಳಿ ಶ್ರೀ (ಗಣೇಶನ ಬಗ್ಗೆ ಹೇಳಿಕೆ), ಮನಗೂಳಿ ವಿರಕ್ತಮಠದ ವೀರತಿಶಾನಂದ ಸ್ವಾಮಿ (ದೇವರೆಲ್ಲ ನಮಗೆ ಕಸದ ಸಮಾನ), ನಿಜಗುಣಾನಂದ ಸ್ವಾಮೀಜಿ (ಅವಾಚ್ಯ ಶಬ್ಧ ಬಳಸಿ ನಿಂದನೆ).. ಹೀಗೆ ಹಲವು ಸ್ವಾಮೀಜಿಗಳಿದ್ದಾರೆ. ವಿರೋಧಿಸುವುದು ಬೇರೆ.. ದ್ವೇಷ ಮಾಡುವುದು ಬೇರೆ. ಹೀಗಿರುವಾಗ ಕನ್ನೇರಿ ಶ್ರೀಗಳು ಹೇಳಿದ್ದು ಮಾತ್ರವೇ ಅಸಭ್ಯ.. ನಿಂದನೆ ಆಗುತ್ತದೆ ಎನ್ನುವುದಾದರೆ.. .ಇವರು ಆಡಿರುವ ಮಾತುಗಳು ಏಕೆ ಅಸಭ್ಯ ಅಶ್ಲೀಲ ಅಲ್ಲ.
ಕೊಲ್ಲಾಪೂರದ ಕನ್ನೇರಿ ಮಠವು ಹಿಂದಿನಿಂದಲೂ ಸಾಮಾಜಿಕ ಹೇಳಿಕೆಗಳು, ಸುಧಾರಣಾ ಚಟುವಟಿಕೆಗಳು ಹಾಗೂ ತೀವ್ರ ಅಭಿಪ್ರಾಯಗಳಿಂದ ಹೆಸರುವಾಸಿಯಾಗಿರುವುದರಿಂದ ಈ ಬಾರಿ ಕೂಡಾ ಶ್ರೀಗಳ ಹೇಳಿಕೆಗಳು ನಿರೀಕ್ಷಿತ ರೀತಿಯಲ್ಲೇ ವಿವಾದ ಎಬ್ಬಿಸಿವೆ. ಆದರೆ ಕೆಲವು ಪದಪ್ರಯೋಗ ಸಮಾಜ ಹಾಗೂ ಕೆಲವು ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದರೆ, ಇದು ವಿವಾದ ಆದ ಕಾರಣಕ್ಕಾಗಿಯೇ ಈ ಕೆಲವು ಸ್ವಾಮೀಜಿಗಳ ಹೊಲಸು ನಾಲಗೆಯ ಬಗ್ಗೆಯೂ ಚರ್ಚೆಯಾಯಿತು.



