ಶಹಬ್ಬಾಸ್ ಕಮಲ್ ಹಾಸನ್. ಹೀಗೊಂದು ಮಾತು ಹೇಳದೇ ಇದ್ದರೆ ಅದು ಕಮಲ್ ಹಾಸನ್ ಅವರಿಗೆ ಮಾಡುವ ಅವಮಾನ. ನಟ ಕಮಲ್ ಹಾಸನ್ ಕ್ಷಮೆ ಕೇಳುವುದಕ್ಕೆ ನಿರಾಕರಿಸಿ, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯನ್ನೇ ಮುಂದೂಡಿದ್ದಾರೆ. ಥಗ್ ಲೈಫ್ ಸಿನಿಮಾ, ಕರ್ನಾಟಕ ಬಿಟ್ಟು, ಜಗತ್ತಿನ ಎಲ್ಲೆಡೆ ಪ್ರದರ್ಶನವಾಗಲಿದೆ. ಇದರಿಂದ ಆಗುವ ನಷ್ಟ ಸುಮಾರು 20-30 ಕೋಟಿ ಎನ್ನಲಾಗುತ್ತಿದೆ. ಇಲ್ಲ ಕಣ್ರೀ.. ಕಮಲ್ ಹಾಸನ್ ಸಿನಿಮಾಗೆ 10 ಕೋಟಿ ಬಿಸಿನೆಸ್ಸೂ ಆಗಲ್ಲ, ಅಷ್ಟೆಲ್ಲ ಲಾಸ್ ಆಗಲ್ಲ ಎನ್ನುವವರೂ ಇದ್ದಾರೆ. ಆಯಿತು, ಕಡಿಮೆ ಎಂದು 10 ಕೋಟಿಯನ್ನೇ ಇಟ್ಟುಕೊಳ್ಳೋಣ. ತಮಿಳು ಗ್ರೇಟ್ ಎಂದು ಆತ ಸುಳ್ಳೇ ಹೇಳಿದ್ದರೂ, ಅದಕ್ಕಾಗಿ 10 ಕೋಟಿ ವ್ಯವಹಾರ ಬಿಟ್ಟಿದ್ದು ಕಡಿಮೆ ವಿಷಯವೇ.. ಕನ್ನಡದ ಸ್ಟಾರ್ ನಟರು ಈತನನ್ನು ನೋಡಿ ಕಲಿಯಬೇಕಿದೆ ಎಂದಿದ್ದು ಇದೇ ಕಾರಣಕ್ಕೆ.
ಥಗ್ ಲೈಫ್ ಸಿನಿಮಾ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲಮ್ಸ್, ಅರ್ಜಿ ಮುಂದೂಡಿಕೆಗೆ ಮನವಿ ಮಾಡಿತ್ತು. ಕ್ಷಮೆ ಕೇಳುವುದಿಲ್ಲ. ತಪ್ಪೇ ಮಾಡದೆ ಕ್ಷಮೆ ಕೇಳುವುದಕ್ಕೆ ಒಪ್ಪುವುದಿಲ್ಲ ಎಂದು ವಾದಿಸಿದ್ದರು ಕಮಲ್ ಪರ ವಕೀಲರು.
ಈಗ ಥಗ್ ಲೈಫ್ ಸಿನಿಮಾ ಬಿಡುಗಡೆಯಾಗುವುದೋ.. ಇಲ್ಲವೋ.. ಎಂಬುದು ವಿಷಯವೇ ಅಲ್ಲ. ಇತ್ತ ಫಿಲ್ಮ್ ಚೇಂಬರ್ ಕೂಡಾ ನಿಟ್ಟುಸಿರು ಬಿಟ್ಟಿತು. ಏಕೆಂದರೆ ಕಮಲ್ ಹಾಸನ್ ಕ್ಷಮೆಗೆ ಚೇಂಬರ್ ಒತ್ತಾಯಿಸಿತ್ತು. ಆದರೆ ಕಮಲ್ ಹಾಸನ್ ಪತ್ರ ಬರೆದು ವಿವರಣೆ ಕೊಟ್ಟಿದ್ದರೇ ಹೊರತು ಕ್ಷಮೆ ಕೇಳಿರಲಿಲ್ಲ. ಈಗ ಸಿನಿಮಾ ಬಿಡುಗಡೆಯೇ ಮುಂದೆ ಹೋಗಿರುವ ಕಾರಣ ಸದ್ಯಕ್ಕೆ ಥಗ್ ಲೈಫ್ ಬಿಡುಗಡೆ ವಿಷಯವೇ ಅಪ್ರಸ್ತುತ. ಕರ್ನಾಟಕದ ಮಾರುಕಟ್ಟೆ ಬೇಡ. ಹಣ ಬೇಡ. ನಮ್ಮ ಭಾಷೆಯೇ ಇರಲಿ ಎನ್ನುತ್ತಿರುವ ಕಮಲ್ ಹಾಸನ್ ಧೈರ್ಯ, ಭಾಷಾ ಪ್ರೇಮಕ್ಕೆ ಮೆಚ್ಚುಗೆಯೂ ಇದೆ. ಇಂಥಾದ್ದೊಂದು ವ್ಯಕ್ತಿತ್ವ ನಮ್ಮ ನಟರಿಗೂ ಬರಲಿ ಎಂಬ ದುರಾಸೆಯೂ ಕೆಲವರಲ್ಲಿದೆ.
ಏಕೆಂದರೆ ವಿವಾದ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆಯೇ ಸಚಿವ ಶಿವರಾಜ್ ತಂಗಡಗಿ ಎಲ್ಲ ಭಾರವನ್ನೂ ಫಿಲ್ಮ್ ಚೇಂಬರ್ ಮೇಲೆ ಹೊತ್ತು ಹಾಕಿದ್ದರು. ಸಮಸ್ಯೆ ಆದರೆ ಅವರೇ ನೋಡಿಕೊಳ್ಳಲಿ ಬಿಡು ಎಂಬಂತೆ ಜಾಣ ಹೆಜ್ಜೆ ಇಟ್ಟಿದ್ದರು. ನಟ್ಟು ಬೋಲ್ಟು ಟೈಟು ಮಾಡುವುದಾಗಿ ಹುಕುಂ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ತಮಿಳು ಮತ್ತು ಕನ್ನಡದ ಬಾಂಧವ್ಯ ನೆನಪಾಗಿತ್ತು. ಅವರಿಗೆ ಅದು ರಾಜಕೀಯ. ರಾಜಕೀಯ ಮೈತ್ರಿಗಾಗಿ ಅವರು ಕನ್ನಡವನ್ನು ದೂರ ತಳ್ಳುವ ಧೈರ್ಯ ಅವರಿಗೆ ಇದೆ.
ಇನ್ನು ಎಲ್ಲ ಭಾಷೆಯಲ್ಲೂ ಸಲ್ಲುವ ಕಿಶೋರ್ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದರೆ, ದೇಶದಲ್ಲಿ ಮೋದಿ ಮತ್ತು ಬಿಜೆಪಿಯನ್ನು ಕೂತರೂ, ನಿಂತರೂ ಲೇವಡಿ ಮಾಡುವ ಪ್ರಕಾಶ್ ರೈ ಅವರಿಗೆ ವಿಷಯವೇ ಗೊತ್ತಾಗಲಿಲ್ಲ. ಬಹುಭಾಷಾ ನಟರು ಈಗ ಪ್ಯಾನ್ ಇಂಡಿಯಾ ಆಗಿರುವ ಯಶ್, ಸುದೀಪ್ ಅವರೆಲ್ಲ ಗಪ್ ಚುಪ್ ಆಗಿದ್ದರು. ಸದ್ಯಕ್ಕೆ ಮಾರ್ಕೆಟ್ಟಿನಲ್ಲಿ ಚಲಾವಣೆ ಇಲ್ಲದ ಹಿರಿಯ ಕಲಾವಿದರಷ್ಟೇ ಈ ವಿಷಯದ ಬಗ್ಗೆ ಮಾತನಾಡಿದ್ದು. ಶ್ರೀನಾಥ್, ಎಂಎಸ್ ಉಮೇಶ್, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಮುಖ್ಯಮಂತ್ರಿ ಚಂದ್ರು, ಜಯಮಾಲಾ.. ಮೊದಲಾದವರು. ಅಂದರೆ ಇವರಿಗೆ ಟೀಕಿಸಿದರೆ ನಷ್ಟ ಇಲ್ಲ ಎಂದು ಖಚಿತವಾಗಿ ಗೊತ್ತು. ಇನ್ನು ಚಲಾವಣೆಯಲ್ಲಿರುವ ನಟರಿಗೆ ಬಿಸಿನೆಸ್ ಮುಖ್ಯ.
ಆದರೆ ಕಮಲ್ ಹಾಸನ್ ನೋಡಿ.. ಆತ ನಾನು ತಪ್ಪು ಮಾಡಿಲ್ಲ. ಯಾವುದೇ ರೀತಿಯ ಕ್ಷಮಾಪಣೆ ಕೇಳುವಷ್ಟು ತಪ್ಪು ಮಾಡಿಲ್ಲ ಅನ್ನೋದೇ ಅವರ ಸಮರ್ಥನೆ. ಈ ವಿಷಯದ ಪ್ರಮುಖ ಬೆಳವಣಿಗೆ ಎಂದರೆ, ಈಗ ಕಮಲ್ ಹಾಸನ್ ಕ್ಷಮೆ ಕೇಳಿಲ್ಲ. ಇನ್ನೊಂದು ವಾರದ ಹೊತ್ತಿಗೆ ಥಗ್ ಲೈಫ್ ಹಣೆಬರಹವೂ ಬರುತ್ತದೆ. ಅದಾದ ಒಂದು ತಿಂಗಳಿಗೆ ಒಟಿಟಿಗೆ ಬರುತ್ತದೆ. ಅದು ಬೇರೆ ವಿಚಾರ.
ಆದರೆ, ಈ ವಿಷಯದಲ್ಲಿ ಕನ್ನಡ ಮೊದಲಾ.. ತಮಿಳು ಮೊದಲಾ ಎಂಬ ವಿಷಯದ ಚರ್ಚೆ ಕೋರ್ಟಿನಲ್ಲಿ ನಡೆಯುತ್ತದೆ. ಕೋರ್ಟಿನಲ್ಲಿಯೇ ಯಾವುದು ಪುರಾತನ ಭಾಷೆ ಎನ್ನುವುದೂ ಕೂಡಾ ನಿರ್ಧಾರವಾಗುತ್ತದೆ. ಅದಾದ ಮೇಲೆ ಕನ್ನಡಕ್ಕೆ ನಾವೇ ಅಪ್ಪ ಅಮ್ಮ ಎಂದು ಯಾರೂ ಹೇಳುವ ಅಗತ್ಯ ಇರುವುದಿಲ್ಲ. ಇದರ ಮಧ್ಯೆ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ನಟ, ನಟಿಯರ, ರಾಜಕಾರಣಿಗಳ ಹಣೆಬರಹ ಗೊತ್ತಾಗಿದೆ.



