ಬಾಹುಬಲಿ ನಂತರ ತೆಲುಗು ಚಿತ್ರರಂಗದ ಸ್ಟಾರ್ ಪ್ರಭಾಸ್ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತಿವೆ. ಗೆಲುವು ಅನ್ನೋದು ಕೈಗೆಟುಕಿಲ್ಲ. ಆದರೆ ಅಷ್ಟೂ ಚಿತ್ರಗಳಿಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಸಾಹೋ, ರಾಧೇಶ್ಯಾಂ ಮತ್ತೀಗ ಆದಿಪುರುಷ್ ಚಿತ್ರಗಳು ಸೋತಿವೆ. ಚಿತ್ರಗಳೆಲ್ಲವೂ ನೂರಾರು ಕೋಟಿ ಬಜೆಟ್ ಸಿನಿಮಾಗಳು. ಆದರೆ ನಿರ್ಮಾಪಕರು ಬಚಾವ್ ಆಗಿದ್ದಾರೆ. ಹೀಗಾಗಿಯೇ ಪ್ರಭಾಸ್ ಹೊಸ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಹಿ ಹಾಕಿದೆ.
ಸದ್ಯಕ್ಕೆ ಪ್ರಭಾಸ್ ಸಲಾರ್, ಪ್ರಾಜೆಕ್ಟ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಲಾರ್ ಸಿನಿಮಾ ಸೆಪ್ಟೆಂಬರ್`ಗೆ ರಿಲೀಸ್ ಆಗಲಿದ್ದು, ಆ ಚಿತ್ರಕ್ಕೆ ಹೊಂಬಾಳೆ ವಿಜಯ್ ಕಿರಗಂದೂರು ಪ್ರೊಡ್ಯೂಸರ್ ಆದರೆ, ಕೆಜಿಎಫ್ ಪ್ರಶಾಂತ್ ನೀಲ್ ಡೈರೆಕ್ಟರ್. ಹೀಗಾಗಿ ಸಿನಿಮಾ ಮೇಲೆ ಈ ಹಿಂದಿನ ಸಾಹೋ, ಆದಿಪುರುಷ್, ರಾಧೇ ಶ್ಯಾಂ ಚಿತ್ರಗಳಿಗಿಂತ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಅದಾದ ಮೇಲೆ ಪ್ರಾಜೆಕ್ಟ್ ಇದೆ. ಈಗಾಗಲೇ ಪ್ರಭಾಸ್ ಎದುರು ಕಮಲ್ ಹಾಸನ್, ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ ಎನ್ನುವುದೇ ಸೆನ್ಸೇಷನ್. ಅದಾದ ಡಿಲಕ್ಸ್ ರಾಜಾ ಮಾಡಲಿದ್ದಾರೆ. ಆ ಚಿತ್ರವೂ ಕಂಪ್ಲೀಟ್ ಆದಮೇಲೆ ಕೆವಿಎನ್ ಚಿತ್ರ ಶುರುವಾಗಬಹುದು. ಮೂಲಗಳ ಪ್ರಕಾರ ತೆಲುಗಿನ ಹರೀಶ್ ಶಂಕರ್ ಡೈರೆಕ್ಟರ್ ಎನ್ನಲಾಗಿದೆ. ಗಬ್ಬರ್ ಸಿಂಗ್, ದುವ್ವಡೆ ಜಗನ್ನಾಥಂನಂತಹ ಹಿಟ್ ಕೊಟ್ಟಿದ್ದವರು ಹರೀಶ್ ಶಂಕರ್. ಇದೀಗ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಮಾಡುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಕನ್ನಡದಲ್ಲಿ ಸಖತ್, ಬೈಟುಲವ್ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಇದೀಗ ಧ್ರುವ ಸರ್ಜಾ-ಜೋಗಿ ಪ್ರೇಮ್ ಅವರ ಕೆಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಕೂಡಾ ನಟಿಸುತ್ತಿರುವ ಕೆಡಿ, ಹೊಸ ಸಂಚಲನ ಸೃಷ್ಟಿಸೋಕೆ ಸಿದ್ಧವಾಗಿದೆ.
ಕನ್ನಡದಲ್ಲಿ ಹಲವು ಚಿತ್ರಗಳಿಗೆ ಫೈನಾನ್ಸ್ ಕೂಡಾ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್, ಆರ್.ಆರ್.ಆರ್. ಸೇರಿದಂತೆ ಹಲವು ಸ್ಟಾರ್ ನಟರ ಚಿತ್ರಗಳನ್ನು ವಿತರಣೆ ಕೂಡಾ ಮಾಡಿತ್ತು. ಇದೀಗ ಪ್ರಭಾಸ್ ಅವರ ಕಾಲ್`ಶೀಟ್ ಸಿಕ್ಕಿದೆ.



