ಮಫ್ತಿ ಚಿತ್ರದಲ್ಲಿ ಹಿಟ್ ಆದ ಹಾಡು ರಾಕ್ಷಸನು ನೀನೇನಾ.. ರಕ್ಷಕನೂ ನೀನೇನಾ…. ಮಫ್ತಿಯಲ್ಲಿ ಶ್ರೀಮುರಳಿಗೆ ಭೈರತಿ ರಣಗಲ್ ನಿಜವಾಗಲೂ ಏನು ಅನ್ನೋದು ಗೊತ್ತಾಗೋದು ಆ ಹಾಡಿನ ಮೂಲಕ. ಆ ಹಾಡಿನಲ್ಲಿ ಭೈರತಿ ರಣಗಲ್ ಎಂಬ ವ್ಯಕ್ತಿಯ ಕ್ರೌರ್ಯ, ಮಮತೆ, ಅಭಿಮಾನ, ಪ್ರೀತಿ, ದಾನ, ಶೌರ್ಯ, ಮುಗ್ಧತೆ.. ಎಲ್ಲವನ್ನೂ ತೋರಿಸಿದ್ದರು ಡೈರೆಕ್ಟರ್ ನರ್ತನ್. ಖಳನಾಯಕ ಎಂದುಕೊಂಡಿದ್ದ ಭೈರತಿ ರಣಗಲ್ ಕುರಿತಂತೆ ಸಿಬಿಐ ಆಫೀಸರ್ ಶ್ರೀಮುರಳಿಯ ಅಭಿಪ್ರಾಯ ಬದಲಾಗುವುದೇ ಅಲ್ಲಿಂದ. ಅದಾದ ಮೇಲೆ ಚಿತ್ರ ವಿಚಿತ್ರ ತಿರುವು ಪಡೆಯುತ್ತದೆ.
ಇದೀಗ ಭೈರತಿ ರಣಗಲ್ ಏಕೆ ಹಾಗಾದ ಎನ್ನುವ ಕಥೆಯ ಇನ್ನೊಂದು ಹಾಡು ರಿಲೀಸ್ ಆಗಿದೆ. ‘ಮಾಯದಿರೋ ಮನದ ಗಾಯಕೆ, ಮಮತೆ ಮದ್ದು ಹಚ್ಚೊ ಸೇವಕ’ ಎಂಬ ಸಾಹಿತ್ಯವುದೆ, ಶಿವಣ್ಣ ಅಭಿನಯದ ಭೈರತಿ ರಣಗಲ್ ಈ ವಾರ ರಿಲೀಸ್ ಆಗಬೇಕಿತ್ತು. ಆದರೆ ಧ್ರುವ ಸರ್ಜಾ ಅವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳು ಮುಂದಕ್ಕೆ ಹೋಗಿರುವ ಭೈರತಿ ರಣಗಲ್, ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಹಾಡೊಂದನ್ನು ಕೊಟ್ಟಿದ್ದಾರೆ. ಚಿತ್ರದ ʻಕಾವಲಿಗ.. ʼ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಭರವಸೆಗೆ ಮರುಜೀವ ತುಂಬುತಿರೋ ಅಂಬಿಗ..
ಕಂಬನಿಗೆ ಕಾವಲಿಗ.. ನಂಬಿಕೆಗೆ ಕಾವಲಿಗ..
ಮನದ ವ್ಯಾಧಿಗೆ ಮಮತೆಯ ಮದ್ದು ಹಚ್ಚುವ ಕಾರ್ಮಿಕ..
ಮುಂತಾದ ಮನಮುಟ್ಟುವ ಸಾಲುಗಳಿವೆ. ಮೆಲುಧ್ವನಿಯಲ್ಲಿರುವ ಹಾಡು, ಹಾಡಿನಲ್ಲಿರುವ ಸಾಹಿತ್ಯ ಎಲ್ಲವೂ ಭೈರತಿ ರಣಗಲ್ ವ್ಯಕ್ತಿತ್ವವನ್ನು ಹೊಗಳುವಂತಿದೆ. ಸಾಯಿ ಸರ್ವೇಶ್ ಅವರ ಸಾಹಿತ್ಯಕ್ಕೆ ಅಷ್ಟೇ ಮಾಧುರ್ಯ ತುಂಬಿ ಹಾಡಿರುವುದು ವಿಜಯ ಪ್ರಕಾಶ್. ರವಿ ಬಸ್ರೂರು ಸಂಗೀತ ನಿಧಾನವಾಗಿ ಹೃದಯಕ್ಕೆ ಇಳಿಯುವಂತಿದೆ.
ಹಾಡಿನಲ್ಲಿ ನರ್ತನ್ ಸಿನಿಮಾದ ಮೇಕಿಂಗ್ ಅನ್ನೂ ಸೇರಿಸಿದ್ದಾರೆ. ಶಿವಣ್ಣನ ಜೊತೆಗೆ ನಾಯಕಿ ರುಕ್ಷ್ಮಿಣಿ ವಸಂತ್ ಕೂಡ ಕಾಣಿಸಿಕೊಂಡಿದ್ದಾರೆ. ಮೇಕಿಂಗ್ ನೋಡಿದರೆ, ರುಕ್ಮಿಣಿ ವಸಂತ್ ಡಾಕ್ಟರ್ ಪಾತ್ರ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಶಿವಣ್ಣ ಅವರದ್ದು ಲಾಯರ್ ಪಾತ್ರ ಅನ್ನೋದನ್ನು ಈಗಾಗಲೇ ಹೇಳಲಾಗಿದೆ.
ಶಿವಣ್ಣ, ರುಕ್ಮಿಣಿ ಜೊತೆ ಜೊತೆಯಲ್ಲಿ ಇನ್ನೂ ಕೆಲವು ಪ್ರಮುಖ ಪಾತ್ರಗಳು ಹಾಡಿನಲ್ಲಿ ಕಾಣಸಿಗುತ್ತವೆ. ‘ಭೈರತಿ ರಣಗಲ್’ ಸಿನಿಮಾ ಮುಂದಿನ ತಿಂಗಳು ನವೆಂಬರ್ 15ರಂದು ಕನ್ನಡ, ತೆಲುಗು, ತಮಿಳು ಸೇರಿದಂತೆ ಮೂರು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನರ್ತನ್ ನಿರ್ದೇಶಿಸಿರುವ ‘ಭೈರತಿ ರಣಗಲ್’ ಸಿನಿಮಾ ಅವರೇ ನಿರ್ದೇಶಿಸಿದ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್. ಇಲ್ಲಿ ಶಿವಣ್ಣ ಪಾತ್ರವನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.
ಲಾಯರ್ ಆಗಿದ್ದ ಭೈರತಿ ರಣಗಲ್, ದುಷ್ಟರ ವಿರುದ್ಧ ಕಾನೂನು ಸಮರ ಮಾಡಿ ಗೆಲ್ಲುತ್ತಾನೆ. ಆದರೆ, ಆ ಕಾನೂನು ಸಮರ ಗೆದ್ದರೂ, ಖಳನಾಯಕರ ಆರ್ಭಟ ನಿಯಂತ್ರಣಕ್ಕೆ ಬರುವುದಿಲ್ಲ. ಅದಾದ ಮೇಲೆ ಭೈರತಿ ರಣಗಲ್, ಕರಿಕೋಟು ಪಕ್ಕಕ್ಕಿಟ್ಟು, ರೌಡಿಸಂ ಹಿಡಿಯುತ್ತಾನೆ. ಅವುಗಳಿಗೆಲ್ಲ ಸಾಕ್ಷಿಯಾಗುವುದು ಡಾಕ್ಟರ್ ರುಕ್ಮಿಣಿ ವಸಂತ್. ಕರಿಕೋಟಿನಲ್ಲಿ ಹಾಗೂ ಕಪ್ಪು ಲುಂಗಿಯಲ್ಲಿ ಶಿವಣ್ಣನ ಲುಕ್ಕು ಇಷ್ಟವಾಗುತ್ತದೆ.
ಕಿನ್ನಾಳ್ ರಾಜ್ ಅವರು ಬರೆದಿರುವ “ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು” ಎಂಬ ಭೈರತಿ ರಣಗಲ್ ಸಿನಿಮಾದ ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ʻಕಾವಲಿಗ..ʼ ಹಾಡು. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ೨ನೇ ಚಿತ್ರವಿದು.



