ಮೊನ್ನೆ ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಸಮಸ್ತ ಸಮಸ್ಯೆಗಳ ಬಗ್ಗೆ ಚಿತ್ರೋದ್ಯಮದ ಪ್ರಮುಖರನ್ನೆಲ್ಲ ಮನೆಗೆ ಕರೆಸಿಕೊಂಡು ಮಾತನಾಡಿದ್ದ ನಟ ಶಿವ ರಾಜ್ ಕುಮಾರ್, ಇದ್ದಕ್ಕಿದ್ದಂತೆ ವಿಲನ್ ಆಗಿದ್ದಾರೆ. ನಟ ಕಮಲ್ ಹಾಸನ್ ಮಾಡಿರುವ ಕಿತಾಪತಿ ಇದಕ್ಕೆಲ್ಲ ಕಾರಣ. ಕಮಲ್ ಕನ್ನಡ ಬಿಕ್ಕಟ್ಟಿನಲ್ಲಿ ಶಿವರಾಜ್ ಕುಮಾರ್ ಏಕಾಂಗಿಯಾಗಿದ್ದಾರೆ. ನಟ ಶಿವರಾಜ್ ಕುಮಾರ್ ಹೀಗೆ ಏಕಾಂಗಿರುವುದು ಇದೇ ಮೊದಲು ಎನ್ನಬಹುದು.
ಶಿವಣ್ಣನ ಕಟ್ಟರ್ ಅಭಿಮಾನಿಗಳೂ ಜೊತೆಗೆ ನಿಲ್ಲುತ್ತಿಲ್ಲ. ಶಿವರಾಜ್ ಕುಮಾರ್ ಅವರಿಗೆ ಬಹಿರಂಗವಾಗಿ ಸಪೋರ್ಟ್ ಮಾಡುವ ಒಬ್ಬರೇ ಒಬ್ಬ ನಟರಿಲ್ಲ. ತಂತ್ರಜ್ಞರೂ ಇಲ್ಲ. ಬಹುತೇಕ ಕಲಾವಿದರು ಕಮಲ್ ಹಾಸನ್ ಅವರ ಅಹಂಕಾರದ ಬಗ್ಗೆ ಮಾತನಾಡುತ್ತಿದ್ದರೂ, ಶಿವಣ್ಣ ವಿರುದ್ಧ ಮಾತನಾಡುತ್ತಿಲ್ಲ. ಶಿವಣ್ಣ ಕೂಡಾ ವಿವಾದವನ್ನು ವಿನಾಕಾರಣ ದೊಡ್ಡದು ಮಾಡಿಕೊಂಡಿದ್ದಾರೆ ಎನ್ನುವುದೂ ನಿಜ. ಶಿವಣ್ಣ ಅಭಿಮಾನಿಗಳಿಗೀಗ ಹೇಳಿಕೊಳ್ಳಲು ಆಗದಂತಾ ಸ್ಥಿತಿ ಇದೆ. ಉಗುಳೋಕೂ ಆಗಲ್ಲ. ನುಂಗೋಕೂ ಆಗಲ್ಲ. ಏಕೆಂದರೆ ಕಮಲ್ ಹಾಸನ್ ಪ್ರಶ್ನೆ ಮಾಡಿರುವುದು ಕನ್ನಡದ ಬಗ್ಗೆ. ಶಿವಣ್ಣ, ಕನ್ನಡ ಭಾಷೆಗಿಂತ ದೊಡ್ಡವರಲ್ಲ ಎನ್ನವುದು ಅಭಿಮಾನಿಗಳಿಗೂ ಗೊತ್ತು. ಒಂದ್ಸಲ ಶಿವರಾಜ್ ಕುಮಾರ್, ಕಮಲ್ ಹಾಸನ್ ಹೇಳಿಕೆಯನ್ನು ಒಪ್ಪುವುದಕ್ಕೆ ಆಗಲ್ಲ ಎಂದು ಹೇಳಲಿ ಎಂದು ಕಾಯುತ್ತಿದ್ದಾರೆ.
ಇದರ ಮಧ್ಯೆ ಶಿವಣ್ಣ ಮೊದಲಿಗೆ ಅದೇನು ಅಂತ ದೊಡ್ಡ ವಿಷಯವಾ ಎಂದಿದ್ದು, ಅದಾದ ನಂತರ ಅವರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿಕೆ ನೀಡಿದ್ದು.. ವಿಷಯವನ್ನು ಇನ್ನಷ್ಟು ರಗಳೆ ಮಾಡಿದವು. ನಾನೇನು ಕಮಲ್ ಹಾಸನ್ ಅವರನ್ನ ಸಮರ್ಥನೆ ಮಾಡಿಕೊಳ್ಳಲ್ಲ. ಭಾಷೆ ಬಗ್ಗೆ ಮಾತಾಡ್ತಿದ್ದಾರೆ ಅಂದಾಗ ನಾನು ಕೈ ತಟ್ಟಿದ್ದು ನಿಜ. ಆದರೆ ಆ ಸಂದರ್ಭದಲ್ಲಿ ಏನು ಮಾತಾಡ್ತಿದ್ದಾರೆ ಅಂತಾ ಗೊತ್ತಾಗಲಿಲ್ಲ ಎಂದಿರುವ ಶಿವಣ್ಣ ಸ್ಟೇಜ್‌ನಲ್ಲಿ ನೀವು ಯಾಕೆ ಪ್ರಶ್ನೆ ಮಾಡಲಿಲ್ಲ ಅಂದಾಗ ನನಗೆ ಅವರು ಮಾತಾಡಿದ್ದು ಸ್ಪಷ್ಟವಾಗಿ ಕೇಳಲಿಲ್ಲ. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೇ ಗೊತ್ತಾಗಿದ್ದು. ಆ ಕಾರ್ಯಕ್ರಮದಲ್ಲಿ ಅವರ ಮಾತು ನನಗೆ ಸ್ಪಷ್ಟವಾಗಿ ಕೇಳಿಸಲಿಲ್ಲ. ಕಲಾವಿದನಾಗಿ ಭಾಷೆ ಬಗ್ಗೆ ಮಾತಾನಾಡುತ್ತಿದ್ದಾರೆಂದು ಚಪ್ಪಾಳೆ ತಟ್ಟಿದೆ. ಕಮಲ್ ಹಾಸನ್ ಮಾತಾಡಿದ್ದನ್ನ ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ ಎಂದಿದ್ದಾರೆ.
ಬಹುಶಃ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಈ ವಿಷಯದಲ್ಲಿ ಒಂಟಿಯಾಗಿದ್ದಾರೆ ಎನ್ನಬಹುದು. ಏಕೆಂದರೆ ಶಿವಣ್ಣ ಹೇಳುತ್ತಿರುವುದು ಸರಿ ಎಂದು ಯಾವೊಬ್ಬ ಕೂಡಾ ಹೇಳಿಕೆ ಕೊಡುತ್ತಿಲ್ಲ. ಕಮಲ್ ಹಾಸನ್ ವಿರುದ್ಧ ಮಾತನಾಡುತ್ತಿದ್ಧಾರೆ. ಶಿವಣ್ಣ ವಿಷಯದಲ್ಲಿ ಮೌನವಾಗುತ್ತಿದ್ದಾರೆ.
ಇನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಶಿವಣ್ಣನೇ ಆಗಲಿ, ಇನ್ಯಾರೇ ಆಗಲಿ, ಕಮಲ್ ಹಾಸನ್ ಹೇಳಿಕೆಗೆ ನನ್ನ ವಿರೋಧ ಇದೆ. ಅವರೆಲ್ಲರೂ ಕನ್ನಡ ದ್ರೋಹಿಗಳು ಎನ್ನುತ್ತಿದ್ದಾರೆ. ಇನ್ನು ಶಿವಣ್ಣನ ಜೊತೆಯಲ್ಲೇ ಗುರುತಿಸಿಕೊಳ್ಳುವ ಬಹುತೇಕರು ಏನನ್ನೂ ಮಾತನಾಡುತ್ತಿಲ್ಲ.
ನಟಿ ಸುಧಾರಾಣಿಗೆ ವಿಷಯವೇ ಗೊತ್ತಿಲ್ಲ. ರಾಕ್ ಲೈನ್ ವೆಂಕಟೇಶ್ ಅವರಿಗೆ ಮಾಹಿತಿಯೇ ಇಲ್ಲ. ಸುದೀಪ್, ಧ್ರುವ, ಯಶ್ ಮೊದಲಾದವರಿಗೆ ಪ್ಯಾನ್ ಇಂಡಿಯಾ ಮಾರ್ಕೆಟ್ ಅಂದ್ರೆ ತಮಿಳು ಪ್ರೇಕ್ಷಕರ ಕಾಳಜಿ. ರಚಿತಾ ರಾಮ್ ಮೊದಲಾದವರು ಇನ್ ಡೈರೆಕ್ಟ್ ಆಗಿ ಶಿವಣ್ಣ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಶಿವಣ್ಣ ಈಗ ಲೀಡರ್ ಆಗಿ ಉಳಿದಿಲ್ಲ.



