ಕಾಟೇರ ಗೆದ್ದಿದೆ. ಕಾಟೇರ ಗೆದ್ದಿದೆ ಅನ್ನೋ ಕಾರಣಕ್ಕೇ ಪಾರ್ಟಿ ಆಗ್ತಾ ಇದೆ. ಕಾಟೇರ ಗೆದ್ದ ಮೇಲೆ ನಡೆದ ಪಾರ್ಟಿಗೆ ಕಿರಿಕ್ಕು ಕೊಡೋವ್ರು ಜಾಸ್ತಿ ಆಗಿದ್ಧಾರೆ. ಹಾಗಂತ ಇಲ್ಲಿ ಯಾರೂ ಮಧ್ಯರಾತ್ರಿ ಪಾರ್ಟಿ ಮಾಡೋದನ್ನ, ರೂಲ್ಸ್ ಬ್ರೇಕ್ ಮಾಡೋದನ್ನ, ಜನರಿಗೆ ತೊಂದರೆ ಕೊಡೋದನ್ನ ಸಮರ್ಥನೆ ಮಾಡ್ತಾ ಇಲ್ಲ. ಚಿತ್ರನಟರು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಸೆಲಬ್ರಿಟಿಗಳಿಗೆ ಸಾಮಾನ್ಯ ಜನರಿಗಿಂತ ಜವಾಬ್ದಾರಿ ಹೆಚ್ಚೇ ಇರುತ್ತದೆ. ಹೊರಗಿನ ಮಾತುಕತೆ, ವರ್ತನೆಗಳಲ್ಲಷ್ಟೇ ಅಲ್ಲ, ಪರ್ಸನಲ್ ವಿಚಾರಗಳಲ್ಲಿಯೂ ಸದಾ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಆದರೆ.. ಇಲ್ಲಿ ನಡೆದಿರೋದೇ ಬೇರೆ.
ಕಾಟೇರ ಚಿತ್ರ ಗೆಲುವು ಕಾಣುತ್ತಿದ್ದಂತೆ ತೊಂದರೆ ಕೊಡೋವ್ರು ಹೆಚ್ಚಾಗಿದ್ದಾರಾ..? ಬೇಕೆಂತಲೇ ದರ್ಶನ್ ಟಾರ್ಗೆಟ್ ಆಗುತ್ತಿದ್ದಾರಾ..? ದರ್ಶನ್ ಅವರನ್ನು ಸಿಲುಕಿಸೋಕೆ ಅವರ ಜೊತೆಯಲ್ಲಿದ್ದ ಎಲ್ಲರನ್ನೂ ವಿಚಾರಣೆಗೆ ಕರೆದಿದ್ದಾರಾ..? ಹೀಗೊಂದು ಅನುಮಾನ ಹಾಗೂ ಪ್ರಶ್ನೆಗಳು ಉದ್ಭವವಾಗಿರೋದು ರಾಕ್ʻಲೈನ್ ವೆಂಕಟೇಶ್ ಅವರ ಮಾತಿನಿಂದ.
ಏಕೆಂದರೆ ವಿಚಾರಣೆ ಹಾಜರಾಗಿದ್ದು ದರ್ಶನ್ ಒಬ್ಬರೇ ಅಲ್ಲ. ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್, ಡಾಲಿ ಧನಂಜಯ, ಚಿಕ್ಕಣ್ಣ, ಸತೀಶ್.. ಹೀಗೆ ಹಲವರು ವಿಚಾರಣೆ ಹಾಜರಾಗಿ ಪೊಲೀಸರ ಪ್ರಶ್ನೆ ಎದುರಿಸಿದ್ದಾರೆ. ಎಲ್ಲರ ಮಾತು ಕೇಳಿದ ಮೇಲೆ ಹುಟ್ಟುವ ಕೆಲವು ಪ್ರಶ್ನೆಗಳಿವೆ.
ಲೇಟ್ ಆಯ್ತು ಅನ್ನೋದನ್ನು ಬಿಟ್ಟರೆ, ಯಾವುದೇ ಚಿಕ್ಕ ಗಲಾಟೆಯೂ ಆಗಿಲ್ಲ. ಊಟ ಮಾಡಿಕೊಂಡು ನಾವು ಹೊರಟಿದ್ದೇವೆ. ಅಕ್ಕ-ಪಕ್ಕದವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನ್ ಗಮನ ಹರಿಸಿದ್ಧಾರೆ. ಆ ಸಂದರ್ಭದಲ್ಲಿ ಪೊಲೀಸರು ಅಥವಾ ಅಬಕಾರಿ ಅಧಿಕಾರಿಗಳು ನಮ್ಮನ್ನು ಏನೂ ಕೇಳಲಿಲ್ಲ. ನಾವು ಗ್ರಾಹಕರು, ಮಾಲೀಕರಲ್ಲ. ಮೊದಲ ಸಲ ಗ್ರಾಹಕರಿಗೆ ನೋಟಿಸ್ ಕೊಟ್ಟು ಠಾಣೆಗೆ ಕರೆಸಿದ್ದಾರೆ. ಇದು ಎಷ್ಟು ಸರಿಯೋ ನಮಗೆ ಗೊತ್ತಿಲ್ಲ ಇದು ರಾಕ್ʻಲೈನ್ ವೆಂಕಟೇಶ್ ವಾದ.
ಆದರೆ ದರ್ಶನ್ ಪರ ವಕೀಲರು ಇಷ್ಟನ್ನೇ ಕೇಳಿ ಸುಮ್ಮನಾಗಿಲ್ಲ. ಬದಲಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎತ್ತಿದ್ದಾರೆ. ಯಾವ ಪ್ರಶ್ನೆಗೆ ಯಾವ ಉತ್ತರ ಕೊಡೋದು..? ಗೊತ್ತಿಲ್ಲ. ಉತ್ತರಗಳು ಗೊತ್ತಿಲ್ಲ. ಪ್ರಶ್ನೆಗಳನ್ನ ನೋಡಿ.
- ಬೆಂಗಳೂರಿನಲ್ಲಿ ಹಲವು ಎಂಪೈರ್ ಹೋಟೆಲ್ಗಳಿದ್ದು, ಎಲ್ಲವೂ ಬೆಳಗಿನ ಜಾವ ಮೂರು ಗಂಟೆವರೆಗೂ ಓಪನ್ ಇರ್ತವೆ. ಆ ಎಂಪೈರ್ ಹೋಟೆಲ್ಲುಗಳಿಗೆಲ್ಲ, ಗ್ರಾಹಕರಿಗೆಲ್ಲ ನೋಟಿಸ್ ಕೊಡ್ತೀರಾ..?
- ಬೆಂಗಳೂರಿನ ತಾಜ್ ವೆಸ್ಟೆಂಡ್ ಸೇರಿದಂತೆ ಹಲವು ಫೈವ್ ಸ್ಟಾರ್ ಹೋಟೆಲ್ಗಳು ರಾತ್ರಿಪೂರ್ತಿ ತೆಗೆದಿರ್ತವೆ. ಊಟ, ಪಾರ್ಟಿ ನಡೆಯುತ್ತೆ. ರಾಜಕಾರಣಿಗಳು ಇರ್ತಾರೆ. ಅವರಿಗೆಲ್ಲ ನೋಟಿಸ್ ಕೊಡ್ತೀರಾ..?
- ಹಲವು ಬಾರಿ ಸಿಎಂ ಕೂಡಾ ಹೋಟೆಲ್ಲುಗಳಿಗೆ ಹೋಗಿ ಮಧ್ಯರಾತ್ರಿ 3-4 ಗಂಟೆಗೆ ಊಟ ಮಾಡ್ತಾರೆ. ಅವರಿಗೂ ನೋಟಿಸ್ ಕೊಡ್ತೀರಾ..?
- ರೂಲ್ಸ್ ಬ್ರೇಕ್ ಆದರೆ ಜೆಟ್ ಲ್ಯಾಗ್ ಮಾಲೀಕರನ್ನ ವಿಚಾರಣೆಗೆ ಕರೆಸಬೇಕು. ಅದರ ಬದಲು ಹೋಟೆಲ್ಲಿಗೆ ಊಟಕ್ಕೆ ಹೋದ ಗ್ರಾಹಕರಿಗೆ ನೋಟಿಸ್ ನೀಡಿದ್ದಾದರೂ ಏಕೆ..?
- ಜೆಟ್ ಲ್ಯಾಗ್ ಹೋಟೆಲ್ನ ಮಾಲೀಕ ನಿಮಗೆ ಬೇಕಾಗಿರುವುದು ಕೊಟ್ಟಿಲ್ಲವಾ? ಅದಕ್ಕೆ ಕೇಸು ನೊಂದಣಿ ಮಾಡಿದ್ದೀರಾ?
ಇಂತಹ 5 ಪ್ರಶ್ನೆಗಳನ್ನ ದರ್ಶನ್ ಪರ ವಕೀಲರು ಹಾಕಿದ್ಧಾರೆ. ಎಲ್ಲ ಓಕೆ, ಪೊಲೀಸರು ಸುಮಟೋ ಕೇಸ್ ಹಾಕಿದ್ಧಾರೆ. ಆದರೆ ದರ್ಶನ್ ವಿರುದ್ಧ ನಿಂತ ಬೆನ್ನ ಹಿಂದೆ ಕೇಸು ಹಾಕಿಸಿದ್ದು ಯಾರು? ಗೊತ್ತಿಲ್ಲ. ಏಕೆಂದರೆ ಚಿತ್ರರಂಗದ ಎಲ್ಲರಿಗೂ ಬೇಕಾದ ರಾಕ್ʻಲೈನ್ ವೆಂಕಟೇಶ್ ಕೂಡಾ ಜೊತೆಯಲ್ಲಿದ್ಧಾರೆ. ಅಂಬರೀಷ್ ಅವರ ಪುತ್ರ ಅಭಿಷೇಕ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್ ಅವರೂ ಇದ್ದಾರೆ. ಹಾಗಾದರೆ ಇದು ಚಿತ್ರರಂಗದವರ ಕೈವಾಡವಾ..? ಅಥವಾ ಹೊರಗಿನವರ ಕೈವಾಡವಾ..? ನಿಜಕ್ಕೂ ಪೊಲೀಸರೇ ಕ್ರಮ ತೆಗೆದುಕೊಂಡರಾ.. ಪ್ರಶ್ನೆಗಳಿವೆ. ಉತ್ತರಗಳಿಲ್ಲ.



