ಕಾಟೇರ ಚಿತ್ರ ಒಟಿಟಿಗೆ ಎಂಟ್ರಿ ಕೊಡೋ ದಿನಗಳು ಹತ್ತಿರವಾಗುತ್ತಿವೆ. ಈ ನಡುವೆಯೇ ಕಾಟೇರ ಈಗಷ್ಟೇ ಯಶಸ್ವಿಯಾಗಿ ೨೫ ದಿನ ಪೂರೈಸಿದೆ. ಬಿಡುಗಡೆಯಾದ ದಿನಕ್ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಟೇರ ಆಮೇಲೆ ಪ್ರದರ್ಶನಗೊಂಡಿದೆ. ಚಿತ್ರತಂಡದವರ ಲೆಕ್ಕದ ಪ್ರಕಾರವೇ ಚಿತ್ರ ಈಗಾಗಲೇ ೨೦೦ ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಹೀಗಿರುವಾಗಲೇ ಕಾಟೇರ ಚಿತ್ರದ ಒಟಿಟಿ ರಿಲೀಸ್ ಸಮಯ ಹತ್ತಿರವಾಗಿದೆ. ಫೆಬ್ರವರಿ ೫ಕ್ಕೆ ಕಾಟೇರ ಜೀ೫ನಲ್ಲಿ ಪ್ರಸಾರವಾಗಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಫೆಬ್ರವರಿ ೫ಕ್ಕೆ ಎಂದರೆ ಸಿನಿಮಾ ರಿಲೀಸ್ ಆಗಿ ೪೦ ದಿನ ಕಳೆದಿರುತ್ತೆ. ಈ ಹಿಂದೆ ಇಂತಹದ್ದೇ ಸಮಸ್ಯೆ ಕಾಂತಾರ ಚಿತ್ರಕ್ಕೂ ಎದುರಾಗಿತ್ತು. ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದ ಹಿನ್ನೆಲೆಯಲ್ಲಿ ಒಟಿಟಿ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಅದೆಲ್ಲವೂ ಒಪ್ಪಂದಕ್ಕಿಂತ ಹೆಚ್ಚಾಗಿ ವಿಶ್ವಾಸದ ಮೇಲೆಯೇ ಆಗಿತ್ತು. ಹೊಂಬಾಳೆಯವರ ಮನವಿಯನ್ನು ಒಟಿಟಿ ರೈಟ್ಸ್ ಖರೀದಿಸಿದ್ದ ಅಮೇಜಾನ್ʻನವರೂ ಒಪ್ಪಿಕೊಂಡಿದ್ದರು.
ಇದೀಗ ಕಾಟೇರವೂ ಹಾಗೆಯೇ ಆಗಿದೆ. ಕಾಟೇರ ಚಿತ್ರದ ವೀಕೆಂಡ್ ಶೋಗಳು ಈಗಲೂ ಹೌಸ್ ಫುಲ್ ಆಗುತ್ತಿವೆ. ಹಾಗಾಗಿ ಒಟಿಟಿ ದಿನಾಂಕವನ್ನು ಮುಂದೂಡುವುದಕ್ಕೆ ಸಾಧ್ಯವಾದೀತೇ.. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಿನಿಮಾವೊಂದು ಥಿಯೇಟರುಗಳಲ್ಲಿ ಪ್ರದರ್ಶನಗೊಂಡರೇನೇ ಚಿತ್ರರಂಗಕ್ಕೆ ಚಿತ್ರಕ್ಕೆ ಹೆಚ್ಚು ಲಾಭ. ಈಗ ಬಿಡಿ, ಬಿಡುಗಡೆಯಾದ ಒಂದೇ ವಾರಕ್ಕೆ ಒಟಿಟಿಗಳಲ್ಲಿ ಸಿನಿಮಾ ಬರುತ್ತಿದೆ. ಆದರೆ ಸಕ್ಸಸ್ ಕಂಡ ಸಿನಿಮಾವೊಂದು ಈ ರೀತಿ ಆಗಬಾರದು. ಕಾಂತಾರ ಚಿತ್ರಕ್ಕೆ ಸಿಕ್ಕ ಲಾಭವನ್ನು ಕಾಟೇರ ಚಿತ್ರವೂ ಪಡೆಯೋದ್ರಲ್ಲಿ ತಪ್ಪೇನಿದೆ? ಈ ನಿಟ್ಟಿನಲ್ಲಿ ರಾಕ್ʻಲೈನ್ ವೆಂಕಟೇಶ್ ಪ್ರಯತ್ನಿಸುತ್ತಾರೆಂಬ ನಿರೀಕ್ಷೆ ಅಭಿಮಾನಿಗಳದ್ದು.



