ಕಾಟೇರ. ಕಳೆದ ವರ್ಷ ರಿಲೀಸ್ ಆದ ಭರ್ಜರಿ ಹಿಟ್ ಸಿನಿಮಾ. ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾದ ಕಥೆ, ಸಂಭಾಷಣೆ, ನಟನೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ.. ಈಗ ಹಿಟ್ ಆದ ಮೇಲೆ ವಿವಾದದ ಕಿಡಿ ಹೊತ್ತಿದೆ. ಮತ್ತೊಮ್ಮೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ನಟ ದರ್ಶನ್ ನಡುವೆ ಬೆಂಕಿ ಭುಗಿಲೆದ್ದಿದೆ. ಕಾಟೇರ ಟೈಟಲ್ ನಮ್ದೇ. ಕಥೆಯೂ ನಮ್ದೇ. ಏಯ್ ತಗಡೇ.. ಪುಂಗಿಸ್ಕೊಬೇಡ.. ಅಂತೆಲ್ಲ ಡೈರೆಕ್ಟ್ ಆಗಿ ವಾರ್ನಿಂಗ್ ಮಾಡಿದ್ದಾರೆ ದರ್ಶನ್. ಅವರು ಬಿಡಿ, ದೊಡ್ಡವರು. ದೇವರಿದ್ದಾನೆ ಎನ್ನುತ್ತಿರುವ ಉಮಾಪತಿ ಶ್ರೀನಿವಾಸ್ ರಾಬರ್ಟ್ ಚಿತ್ರದ ಕಥೆಯೂ ಅವರದ್ದೇ, ದುಡ್ಡು ಹಾಕಿದ್ದೂ ಅವರೇ ಎಂದೆಲ್ಲ ವ್ಯಂಗ್ಯವಾಗಿ ಹೇಳಿ ಚುಚ್ಚಿದ್ದಾರೆ. ಹಾಗಾದರೆ ಕಥೆ ಏನು..?
ಯಾವುದೇ ಚಿತ್ರದ ಟೈಟಲ್ಲುಗಳು ರಿಜಿಸ್ಟರ್ ಆಗಿರುವುದು ಫಿಲ್ಮ್ ಚೇಂಬರ್ʻನಲ್ಲಿ. ಅದು ಕಾನೂನಾತ್ಮಕ ದಾಖಲೆ. ಅಧಿಕೃತ ಮಾಹಿತಿ. ಸೆನ್ಸಾರ್ʻಗೆ ಕೊಡಬೇಕಾದರೂ, ಚೇಂಬರ್ʻನವರ ಅನುಮತಿ ಪತ್ರ ಇರಲೇಬೇಕು. ಹೀಗಾಗಿ ಫಿಲ್ಮ್ ಚೇಂಬರಿನಲ್ಲಿ ಸಿಕ್ಕಿರುವ ಮಾಹಿತಿ ಅಧಿಕೃತ. ಹಾಗಾದರೆ ಟೈಟಲ್ ಯಾರದು..?
ಉಮಾಪತಿ ಶ್ರೀನಿವಾಸ್ ಪ್ರಕಾರ :
ಉಮಾಪತಿ ಶ್ರೀನಿವಾಸ್ ಪ್ರಕಾರ ಅವರ ಬ್ಯಾನರ್ ನೆರವಿಂದಲೇ 2017ರಲ್ಲಿ ಕಥೆ ಸಿದ್ಧವಾಯ್ತು. 2017ರಲ್ಲಿ ಅವರಿಂದಲೇ ಹಣಕಾಸು ಸಹಾಯ ಪಡೆದು ಕಥೆ ಮಾಡಿದ್ರು. ಕಥೆ ಜಡೇಶ್ ಅವರದ್ದು. ನನಗೆ ಕರೆ ಮಾಡಿದ್ದು ತರುಣ್ ಸುಧೀರ್. ವರಮಹಾಲಕ್ಷ್ಮಿ ಹಬ್ಬದ ದಿನವೈ ಅಡ್ವಾನ್ಸ್ ಕೊಟ್ಟೆ. ಆ ದಿನ ಮನೆಯವರು ಮತ್ತು ಕೆಲವರು ಕೊಡೋದು ಬೇಡ ಎಂದರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅದಾದ ಮೇಲೆ ನನ್ನ ಮತ್ತು ದರ್ಶನ್ ನಡುವಣ ಸಂಬಂಧ ಕೆಟ್ಟ ಕಾರಣ ಸಿನಿಮಾ ಆಗಲಿಲ್ಲ ಎನ್ನುವುದು ಉಮಾಪತಿ ವಾದ.
ಫಿಲ್ಮ್ ಚೇಂಬರ್ ಪ್ರಕಾರ :
ಕಾಟೇರ ಟೈಟಲ್ ಇದ್ದದ್ದು ಉಮಾಪತಿಯವರ ಹತ್ತಿರ. ಆ ಟೈಟಲ್ʻನ್ನು ಎಂಜಿ ರಾಮಮೂರ್ತಿಯವರಿಗೆ ಕೊಟ್ಟ ಉಮಾಪತಿಯವರು, ರಾಮಮೂರ್ತಿಯವರ ಹತ್ತಿರ ಇದ್ದ ಮದಗಜ ಟೈಟಲ್ ಪಡೆದುಕೊಂಡರು. ಅದಾದ ಮೇಲೆ ಕಾಟೇರ ಟೈಟಲ್ಲನ್ನು ರಾಕ್ʻಲೈನ್ ವೆಂಕಟೇಶ್ ಬ್ಯಾನರಿನವರು ಪಡೆದುಕೊಂಡರು ಎನ್ನುವ ಮಾಹಿತಿ ಸಿಗುತ್ತದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಅವರಂತೂ ಈ ವಿವಾದ ಅಗತ್ಯವೇ ಇರಲಿಲ್ಲ. ಸಿನಿಮಾ ಹಿಟ್ ಆಗಿದೆ. ಇಂತಹ ಟೈಮಿನಲ್ಲಿ ಈ ರೀತಿ ಜಗಳವಾಡ್ತಾ ಕೂತರೆ ಇಂಡಸ್ಟ್ರಿಗೆ ಒಳ್ಳೆಯದಾಗುವುದಿಲ್ಲ. ಇವತ್ತಿನ ದಿನಗಳಲ್ಲಿ ಸಿನಿಮಾ ಗೆಲ್ಲೋದೇ ಕಷ್ಟವಾಗಿದೆ. ಈ ವಿಷಯ ಇಲ್ಲಿಗೇ ಬಿಡೋಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದರ್ಶನ್ ಒಳ್ಳೆಯ ನಟ. ಉಮಾಪತಿ ದೊಡ್ಡ ನಿರ್ಮಾಪಕ. ಇಂತಹವರ ಜಗಳದಿಂದ ಚಿತ್ರರಂಗಕ್ಕೆ ಒಳಿತಾಗುವುದಿಲ್ಲ ಎನ್ನುವುದು ಸುರೇಶ್ ಅವರ ವಾದ.
ದರ್ಶನ್ ಅವರ ತಗಡೇ.. ಪುಂಗಿಸಿಕೊಳ್ಳೋದು ಮೊದಲಾದ ಮಾತುಗಳಿಗೆ ನಾವೆಲ್ಲ ತಗಡುಗಳು ತಗಡುಗಳಾಗೇ ಇರಬೇಕಲ್ವ? ‘ರಾಬರ್ಟ್’ ಸಿನಿಮಾ ಅವರದ್ದೇ, ಅವರೇ ಕತೆ ಕೊಟ್ಟರು ದುಡ್ಡು ಅವರೇ ಹಾಕಿದರು. ನಿರ್ಮಾಪಕನೂ ನಾನಲ್ಲ, ನಾನು ಡಮ್ಮಿ ನಿರ್ಮಾಪಕ ಆಗಿದ್ದೆ. ಅವರೆಲ್ಲ ದೊಡ್ಡ ವ್ಯಕ್ತಿಗಳು, ಮಾತನಾಡಿದ್ದಾರೆ, ಮಾತನಾಡಲಿ ಬಿಡಿ. ಮೇಲಿರುವ ಭಗವಂತನ ಬಳಿ ಎಲ್ಲದಕ್ಕೂ ಲೆಕ್ಕ ಇದೆ. ನಾವೆಲ್ಲ ತಗಡುಗಳು ಅಷ್ಟೆ ಎಂದು ಉತ್ತರ ಕೊಟ್ಟಿದ್ದಾರೆ. ಒಟ್ನಲ್ಲಿ ಸಿನಿಮಾ ಹಿಟ್ ಆದ್ರೂ ಪುಂಗೋದು ನಿಂತಿಲ್ಲ.



