ಅದೊಂದು ಚಿತ್ರ ರಿಲೀಸ್ ಆಯ್ತು. ಅದೊಂದು ಚಿತ್ರದಿಂದ ಇಬ್ಬರು ಸ್ಟಾರ್ʻಗಳು ಉದ್ಭವವಾದ್ರು. ಒಬ್ರು ಡೈರೆಕ್ಟರ್. ಮತ್ತೊಬ್ರು ಹೀರೋ. ಈ ರೀತಿಯಲ್ಲೂ ಸಿನಿಮಾ ಮಾಡ್ಬಹುದಾ.. ಎಂದು ನೋಡಿದವರು ಬೆರಗಾಗಿದ್ದರು.
ದುನಿಯಾ. ಹೀಗೆಂದರೆ.. ಪ್ರೇಕ್ಷಕರಿಗೆ ಥಟ್ಟಂತ ನೆನಪಾಗುವುದೇ ದುನಿಯಾ ಸೂರಿ ಹಾಗೂ ದುನಿಯಾ ವಿಜಯ್. ಈ ಜೋಡಿ ಮತ್ತೊಮ್ಮೆ ಒಂದಾಗಿದೆ. ಆದರೆ.. ಅಲ್ಲಿ ದುನಿಯಾ ವಿಜಯ್ ಇಲ್ಲ. ಮತ್ತೆ ಹೇಗೆ ದುನಿಯಾ ಜೋಡಿ ಪುನರ್ ಮಿಲನ ಅಂತೀರಾ.. ದುನಿಯಾ ವಿಜಯ್ ಮಗಳು ರಿತನ್ಯಾ ದುನಿಯಾ ಸೂರಿಯ ಹೊಸ ಚಿತ್ರಕ್ಕೆ ನಾಯಕಿ.
ಇತ್ತೀಚೆಗಷ್ಟೇ ವಿಜಯ್ ಅವರ ಹೊಸ ಸಿನಿಮಾ ಸೆಟ್ಟೇರಿದ್ದು, ಆ ಚಿತ್ರದಲ್ಲಿ ರಿತನ್ಯಾ ವಿಜಯ್ ಅವರಿಗೆ ಮಗಳಾಗಿಯೇ ನಟಿಸುತ್ತಿದ್ಧಾರೆ. ಇದರ ಜೊತೆಯಲ್ಲೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದ ಹೆಸರು ಕಾಗೆ ಬಂಗಾರ.
9 ವರ್ಷಗಳ ಹಿಂದೆ ಸೂರಿ ‘ಕೆಂಡಸಂಪಿಗೆ’ ಸಿನಿಮಾ ಮಾಡಿ ಗೆದ್ದಿದ್ದರು. ಈ ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಮಾಡುವುದಾಗಿ ಕೂಡ ಹೇಳಿದ್ದರು. ಪ್ರೀಕ್ವೆಲ್ ಕಥೆಗೆ ‘ಕಾಗೆ ಬಂಗಾರ’ ಎನ್ನುವ ಟೈಟಲ್ ಕೂಡಾ ಫಿಕ್ಸ್ ಮಾಡಿದ್ದರು. ಸೀಕ್ವೆಲ್ ಅನ್ನು ‘ಬ್ಲ್ಯಾಕ್ ಮ್ಯಾಜಿಕ್’ ಹೆಸರಿನಲ್ಲಿ ಕಟ್ಟಿಕೊಡುವುದಾಗಿ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ‘ಕಾಗೆ ಬಂಗಾರ’ ತಡವಾಗಿತ್ತು. ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ಇದೀಗ ಸಿನಿಮಾ ಶುರುವಾಗುತ್ತಿದೆ.
ಹೊಸ ಚಿತ್ರಕ್ಕೆ ವಿರಾಟ್ ಹೀರೋ ಆಗಿದ್ದರೆ, ರಿತನ್ಯಾ ನಾಯಕಿ. ಕೆಂಡ ಸಂಪಿಗೆಯ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಮಾನ್ಯತಾ ಕಾಮತ್, ಟಗರು ಬರುವವರೆಗೆ ಕೆಂಡ ಸಂಪಿಗೆ ಹುಡುಗಿಯಾಗಿಯೇ ಖ್ಯಾತರಾಗಿದ್ದರು.
ವಿಜಯ್ ಮತ್ತು ಸೂರಿ ಇಬ್ಬರನ್ನೂ ಕನ್ನಡ ಚಿತ್ರರಂಗ ಮತ್ತು ಫ್ಯಾನ್ಸ್ ಇವತ್ತಿಗೂ ಗುರುತಿಸುವುದು ದುನಿಯಾ ಚಿತ್ರದ ಮೂಲಕವೇ. ಸೂರಿ.. ದುನಿಯಾ ಚಿತ್ರದ ನಂತರ ಸ್ಟಾರ್ ಡೈರೆಕ್ಟರ್ ಆದರೆ.. ಅದೂವರೆಗೆ ಸಣ್ಣ ಪುಟ್ಟ ಪಾತ್ರಗಳಲ್ಲಷ್ಟೇ ನಟಿಸುತ್ತಿದ್ದ ವಿಜಯ್.. ಸ್ಟಾರ್ ಹೀರೋ ಆದರು. ಈಗ ಡೈರೆಕ್ಟರ್ ಕೂಡಾ ಆಗಿ ಗೆಲ್ಲುತ್ತಿದ್ಧಾರೆ.
ತಂದೆಗೆ ಕೊಟ್ಟಂತಹ ಸಕ್ಸಸ್ ಹಾಗೂ ಹಿಟ್ ಚಿತ್ರವನ್ನೇ ಮಗಳಿಗೂ ಕೊಡುವ ನಿರೀಕ್ಷೆ ಎಲ್ಲರಲ್ಲೂ ಇದೆ.
ಹಾಗೆ ನೋಡಿದರೆ.. ಸೂರಿಯವರಿಗೆ ಇತ್ತೀಚೆಗೆ ದೊಡ್ಡದೊಂದು ಫ್ಲಾಪ್ ಸಿಕ್ಕಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ಅದೇನೇ ಹೊಗಳಿಕೊಂಡ್ರೂ.. ಅದೊಂದು ಫ್ಲಾಪ್ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್. ಅಭಿಷೇಕ್ ಅಂಬರೀಷ್ ಹೀರೋ ಆಗಿದ್ದ ಆ ಸಿನಿಮಾ ಒಂದೇ ವಾರಕ್ಕೆ ಸುಸ್ತು ಹೊಡೆದು ಹೋಗಿತ್ತು. ಸೂರಿಯವರು ಕೂಡಾ ಅದಕ್ಕೆ ಕಾರಣ.
ಟಗರು ಹಿಟ್ ಆದ ನಂತರ ಸೂರಿಯವರ ನಿರೂಪಣೆ ಶೈಲಿ, ಕ್ಯಾರೆಕ್ಟರುಗಳು ನಡೆದುಕೊಳ್ಳುವ ವರ್ತನೆ ಎಲ್ಲವೂ ಅತಿರೇಕದಲ್ಲಿಯೇ ಇರುತ್ತದೆ. ಮೊದಲಿನ ವಿಭಿನ್ನತೆ, ನವಿರು ನಿರೂಪಣೆ ಕಾಣುತ್ತಿಲ್ಲ. ಅಷ್ಟೇ ಏಕೆ.. ವಿಕೃತಿಯನ್ನೇ ಹಾಸ್ಯದಂತೆ ತೋರಿಸುವ ವಿಚಿತ್ರವೊಂದನ್ನು ಸೂರಿ ರೂಢಿಸಿಕೊಂಡಿದ್ಧಾರೆ. ಅದೆಲ್ಲವನ್ನೂ ಮೀರಿ ಹೊಸ ಚಿತ್ರದಲ್ಲಿ ಮತ್ತೆ ಮ್ಯಾಜಿಕ್ ಮಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.



