ನಾನು ಯುದ್ಧಕ್ಕೆ ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದು ಯಾವುದೂ ಇರೋದಿಲ್ಲ. ನಾನು ಮನುಷ್ಯ ಅಲ್ಲ. ನಾನು ರಾಕ್ಷಸ.. ಟೀಸರಿನಲ್ಲಿ ಮೊಳಗುವ ಸುದೀಪ್ (Kichcha Sudeep) ಕಂಚಿನ ಕಂಠ ಪ್ರೇಕ್ಷಕರಿಗೆ ಬೆರಗು ಹುಟ್ಟಿಸುತ್ತದೆ. ಇಷ್ಟೊಂದು ವಯಲೆನ್ಸ್ ಬೇಕಿತ್ತಾ ಎಂದೆನ್ನಿಸದೇ ಇರದು. ಆದರೆ ಸುದೀಪ್ ಈ ಬಾರಿ ಸಿಕ್ಸರ್ ಹೊಡೆದಿದ್ದಾರೆ. ಇತ್ತೀಚೆಗೆ ಸುದೀಪ್ ಅವರ ವಾಯ್ಸ್‍ನಲ್ಲಿ ಪದಗಳನ್ನು ನುಂಗುವ ಕೆಟ್ಟ ಪದ್ಧತಿ ಶುರುವಾಗಿತ್ತು. ಅದ್ಭುತ ಕಂಠವಿದ್ದರೂ ಸುದೀಪ್ ಅವರೇ ಓವರ್ ಕಾನ್ಫಿಡೆನ್ಸ್`ನಲ್ಲಿ ಮರೆಯುತ್ತಿದ್ದರು. ಅದನ್ನು ಕೆ 46ನಲ್ಲಿ ಸರಿಪಡಿಸಿಕೊಂಡಂತೆ ಕಾಣುತ್ತಿದೆ.
ರಕ್ತ ಸಿಕ್ತ ದೇಹ.. ಹರಿದ ಬಟ್ಟೆ.. ಕೈಯಲ್ಲಿ ಬಂದೂಕು.. ತುಂಡಾಗಿ ಬಿದ್ದಿರುವ ಖಳರ ದೇಹಗಳು.. ದಾಳಿಗೆ ಒಳಗಾದ ಬಸ್, ಮೈಯಲ್ಲಿ ಬುಲೆಟ್ಟು.. ಇದು ಕಿಚ್ಚ ಸುದೀಪ್ ಹೊಸ ಚಿತ್ರದ ಪುಟ್ಟ ದೃಶ್ಯ. ಆ ದೃಶ್ಯವನ್ನು ಮಜಬೂತಾಗಿ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್ ವಿಜಯ್ ಕಾರ್ತಿಕೇಯ. ವಿಜಯ್ ಕಾರ್ತಿಕೇಯ ಹೊಸ ಡೈರೆಕ್ಟರ್. ಮೊದಲ ಚಿತ್ರದಲ್ಲೇ ಸುದೀಪ್ ಅವರನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿದೆ. ಜೊತೆಗೆ ಕಲೈಪುಲಿ ಎಸ್ ಧಾನು ಅವರ ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್.
ಶೇಖರ್ ಚಂದ್ರ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಇರುವ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ.
ಈ ಚಿತ್ರದ ಮೂಲಕ ಕಬಾಲಿ (Kabali) ಕರ್ಣನ್ (Karnan) ಅಸುರನ್ (Asuran) ಥರದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ತಮಿಳಿನ ಕಲೈಪುಲಿ ಎಸ್ ಧಾನು ಕನ್ನಡಕ್ಕೆ ಬಂದಿದ್ದಾರೆ. ಟೀಸರ್ ಕಿಚ್ಚು ಹೊತ್ತಿಸಿದೆ. ಸುದೀಪ್ ಅವರೂ ಅಚ್ಚರಿ ಪಡುವಂತೆ ಇಡೀ ಚಿತ್ರರಂಗದವರು ಸುದೀಪ್ ಅವರನ್ನು ಹೊಗಳಿದ್ದಾರೆ.



