ಕಾಮುಕರ ಕಪಿಮುಷ್ಟಿಯಲ್ಲಿ ಮಲಯಾಳಂ ಚಿತ್ರರಂಗ. ಇದರಲ್ಲಿ ಹೊಸದೇನಿಲ್ಲ, ಎಲ್ಲ ಗೊತ್ತಿರೋದೇ ಎನ್ನಬೇಡಿ. ಆದರೆ, ಈ ವರದಿ ನೀಡಿರುವುದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ. ಆಯೋಗದ ಆ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶಗಳಿವೆ.
ನ್ಯಾಯಮೂರ್ತಿ ಹೇಮಾ ಆಯೋಗದ ವರದಿ, ಕೇವಲ ಮಲಯಾಳಂ ಚಿತ್ರರಂಗವನ್ನಷ್ಟೇ ಅಲ್ಲ, ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
ನ್ಯಾಯಾಂಗ ತನಿಖಾ ವರದಿ ಬರುವುದಕ್ಕೆ ಕಾರಣವಾಗಿದ್ದು ಆ ಪ್ರಕರಣ..!
ಕಾಸ್ಟಿಂಗ್ ಕೌಚ್ ಎಲ್ಲಿಲ್ಲ.. ಅದರಲ್ಲಿಯೂ ಚಿತ್ರರಂಗಲ್ಲಿ ಇದು ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ನಟಿಯೊಬ್ಬರನ್ನು ಕಿಡ್ನಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಲಾಗಿತ್ತು. ಕನ್ನಡದಲ್ಲಿಯೂ ನಟಿಸಿರುವ ಈ ನಟಿ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ್ದರು. ಆಕೆಯನ್ನು ಅಪಹರಿಸಿ, ಲೈಂಗಿಕ ಕಿರುಕುಕಳ ನೀಡಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಕಿರುಕುಳ ನೀಡಿ, ಅದರ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಲಾಗಿತ್ತು. ಬಚಾವ್ ಆಗಿ ಬಂದ ಆ ನಟಿ ದೂರು ಕೊಟ್ಟ ಕಾರಣ, ಮಲಯಾಳಂ ಚಿತ್ರರಂಗದ ಹಲವು ಕರಾಳ ಮುಖಗಳು ಹೊರಬಿದ್ದಿದ್ದವು. ನಟ ದಿಲೀಪ್ ಸೇರಿ 10 ಮಂದಿ ಅರೆಸ್ಟ್ ಆಗಿದ್ದರು. ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿತ್ತು. ಈ ಘಟನೆ ನಡೆದಿದ್ದು 2017 ರ, ಫೆಬ್ರವರಿ 7ನೇ ತಾರೀಕು.
ಯಾರು ಆ ನಟಿ..?
ಆಕೆ ಮೂಲತಃ ಮಲಯಾಳಂನವರಾದರೂ, ದೊಡ್ಡ ಮಟ್ಟದ ಹೆಸರು ಮಾಡಿದ್ದು ತಮಿಳು ಹಾಗೂ ಕನ್ನಡದಲ್ಲಿ. ತೆಲುಗಿನಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಎಲ್ಲ ಸ್ಟಾರ್ ಹೀರೋಗಳ ಜೊತೆಯೂ ನಟಿಸಿರುವ ಈ ನಟಿ, ಈಗ ಮದುವೆಯಾಗಿದ್ದಾರೆ. ಈಗಲೂ ನಟನೆಯಲ್ಲಿ ಬ್ಯುಸಿ ಇರುವ ಈಕೆ ಭಾವನೆಗಳನ್ನು ಅದ್ಭುತವಾಗಿ ವ್ಯಕ್ತಪಡಿಸುತ್ತಾರೆ.
ಆಮೇಲೇನಾಯ್ತು..?
ಆ ನಟಿ ಇತರೆ ನಟಿಯರಂತೆ ಹೆದರಿ ಕೂರಲಿಲ್ಲ. ಮಾಫಿಯಾಗೆ ಶರಣಾಗಲಿಲ್ಲ. ರಣಚಂಡಿಯಂತೆ ತಿರುಗಿಬಿದ್ದರು. ಪೊಲೀಸ್ ಠಾಣೆ ಮೆಟ್ಟಿಲೇರಿದರು. ಪ್ರಕರಣ ಸೀರಿಯಸ್ ಆಗಿ, ಚಿತ್ರರಂಗದಲ್ಲಿನ ಮಹಿಳೆಯರ ಸ್ಥಿತಿಗತಿ ಅರಿತುಕೊಳ್ಳುವ ಸಲುವಾಗಿಯೇ ಆಯೋಗವೊಂದು ರಚನೆಯಾಗಿತ್ತು. ನ್ಯಾಯಮೂರ್ತಿ ಹೇಮಾ ನೇತೃತ್ವದಲ್ಲಿ ರಚನೆಯಾಗಿದ್ದ ಅಯೋಗದಲ್ಲಿ ನ್ಯಾಯಮೂರ್ತಿ ಹೇಮಾ ಅವರಷ್ಟೇ ಅಲ್ಲದೆ, ಮಲಯಾಳಂ ಚಿತ್ರರಂಗದ ಹಿರಿಯ ನಟಿ ಶಾರದಾ, ಪೊಲೀಸ್ ಅಧಿಕಾರಿಯೂ ಆಗಿದ್ದ ಕೆಬಿ ವತ್ಸಲಾ ಕುಮಾರಿ ಇದ್ದರು. ಈ ಸಮಿತಿ 295 ಪುಟಗಳ ವರದಿ ಸಲ್ಲಿಸಿದ್ದು, ನಟ, ನಟಿಯರ ಹೆಸರನ್ನೂ ಉಲ್ಲೇಖಿಸಲಾಗಿದೆ. ಆದರೆ.. ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಅವರ ಹೆಸರನ್ನು ಬದಲಿಸಿ ನೀಡಲಾಗಿದೆ. ವರದಿಯಲ್ಲಿರುವ ವಿವರಗಳು ಬೆಚ್ಚಿಬೀಳಿಸುವಂತಿದೆ. ಸದ್ಯಕೆ ಆರ್ʻಟಿಐ ಮಾಹಿತಿ ಅಡಿ ಸಿಕ್ಕಿರುವ ವರದಿ 66 ಪುಟಗಳಷ್ಟಿದೆ.
ವರದಿಯಲ್ಲಿವೆ ಭಯಾನಕ ಮಾಹಿತಿ..!
ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ಅವಕಾಶ ಬೇಕು ಎಂದರೆ ಕಿರಿಯ ನಟಿಯರು ಸೆಕ್ಸ್ʻಗೆ ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಸಿನಿಮಾದಲ್ಲಿ ಅವಕಾಶವೇ ಸಿಗುವುದಿಲ್ಲ.
ಒಪ್ಪಿಕೊಳ್ಳದೇ ಇದ್ದ ನಟಿಯರು ಇಷ್ಟವಾಗಿಬಿಟ್ಟರೆ, ಅವರಿಗೆ ಅವಕಾಶ ಸಿಗುತ್ತದೆ. ಆದರೆ ಅವಕಾಶ ಕೊಟ್ಟು ಕಿರುಕುಳ ನೀಡಲಾಗುತ್ತದೆ. ಅವಕಾಶ ಕೊಟ್ಟರೂ.. ಅದಾದ ನಂತರ ಚಿತ್ರೀಕರಣ ವೇಳೆ ಟಾಯ್ಲೆಟ್, ಬಟ್ಟೆ ಬದಲಿಸುವ ಜಾಗವನ್ನೂ ಬಿಡದೆ ಹಿಂಸೆ ನೀಡಲಾಗುತ್ತದೆ. ಸೆಕ್ಸ್ʻಗೆ ಒಪ್ಪಿಕೊಳ್ಳುವವರೆಗೆ ಇಂತಹ ಕಿರುಕುಳ ನಡೆಯುತ್ತಲೇ ಇರುತ್ತದೆ.
ರಾತ್ರಿ ಹೊತ್ತು ದಬದಬನೆ ರೂಂ ಬಾಗಿಲು ಬಡಿಯುತ್ತಾರೆ. ಟಾಯ್ಲೆಟ್ಟಿನಲ್ಲಿರುವಾಗ ಬಾಗಿಲು ಬಡಿಯುತ್ತಾರೆ. ಇದೆಲ್ಲವನ್ನೂ ಕೇಳಿದರೆ ಅಡ್ಜಸ್ಟ್ ಮಾಡ್ಕೊಳಿ ಅಂತಾರೆ. ನಿದ್ರೆ ಮಾಡುವುದಕ್ಕೂ ಅವಕಾಶ ಕೊಡದೆ ಚಿತ್ರಹಿಂಸೆ ಕೊಡುತ್ತಾರೆ.
ಮಲಯಾಳಂ ಚಿತ್ರರಂಗದಲ್ಲಿ ಇದೊಂದು ಮಾಫಿಯಾ. ಆ ಮಾಫಿಯಾದಲ್ಲಿ ನಟರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರು ಎಲ್ಲರೂ ಇದ್ದಾರೆ. ಸ್ಟಾರ್ ನಟರೂ ಇದ್ದಾರೆ.
ನೇರವಾಗಿ ನನ್ನ ಜೊತೆ ಸೆಕ್ಸ್ ಮಾಡಿ ಎಂದು ಯಾರೂ ಕೇಳೋದಿಲ್ಲ. ಆದರೆ, ಕಾಂಪ್ರಮೈಸ್, ಅಡ್ಜಸ್ಟ್ʻಮೆಂಟ್ ಮಾಡಿಕೊಳ್ಳಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಅದರ ಅರ್ಥ ಅವರ ಜೊತೆ ಮಲಗಬೇಕು ಎನ್ನವುದೇ.
ಅಷ್ಟೇ ಅಲ್ಲ, ಹಾಗೆ ಒಮ್ಮೆ ಒಪ್ಪಿಕೊಂಡ ನಟಿಯರ ವಿಡಿಯೋ ಮಾಡಿ ಆಮೇಲೆ ಬ್ಲಾಕ್ ಮೇಲ್ ಮಾಡ್ತಾರೆ. ಆನಂತರ ಆ ನಟಿಯರು ಆ ಗ್ಯಾಂಗಿನವರು ಹೇಳಿದಂತೆ ಕೇಳಬೇಕು.
ಹಲವು ನಟಿಯರು ಅನಿವಾರ್ಯ ಕಾರಣಗಳಿಂದಾಗಿ ಒಪ್ಪಿಕೊಳ್ಳುತ್ತಾರೆ. ಮನೆಯವರಲ್ಲಿಯೂ ಹೇಳಿಕೊಳ್ಳೋದಿಲ್ಲ.
ವರದಿಯಲ್ಲಿ ಚಿತ್ರ ನಟಿಯರ ಹೆಸರನ್ನು ಕೋಡ್ ನಂಬರುಗಳಲ್ಲಿ ಹೇಳಲಾಗಿದೆ. ಅಧಿಕೃತವಾಗಿ ಯಾರದೇ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದರೆ, ನ್ಯಾಯಮೂರ್ತಿಗಳು ನೀಡಿರುವ ಸಂಪೂರ್ಣ ವರದಿಯಲ್ಲಿ ಹೆಸರುಗಳೂ ಇವೆ ಎನ್ನಲಾಗಿದೆ.
ಆ ಕ್ರಿಮಿನಲ್ಸ್ ಮಾಫಿಯಾ ಹೇಗೆ ಕೆಲಸ ಮಾಡುತ್ತದೆ ಎಂದರೆ.. ಅದಕ್ಕೆ ಒಪ್ಪದೇ ಇರುವ ನಟಿಯರಿಗೆ ಅವಕಾಶಗಳು ಸಿಗುವುದಿಲ್ಲ. ಒಪ್ಪಿಕೊಂಡ ಸಂಭಾವನೆಯೂ ಸಿಗುವುದಿಲ್ಲ.
ಇವರ ಸಹವಾಸವೇ ಬೇಡ, ಸಿನಿಮಾನೂ ಬೇಡ ಎಂದು ಹೋಗುವವರಿಗೆ ಕಿರುಕುಳ ನೀಡಿದ ವಿಡಿಯೋ ಅಪ್ʻಲೋಡ್ ಮಾಡಿ ಬೆದರಿಸಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಾರೆ. ಅಂತಿಮವಾಗಿ ಆ ನಟಿ ಅವರು ಕೇಳಿದ್ದನ್ನು ಕೊಟ್ಟು ಶರಣಾಗುತ್ತಾರೆ.
ಕೆಲವು ಒಳ್ಳೆಯ ನಟರ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದೆ. ನಟಿಯರು ಕೆಲವು ನಟರು, ತಂತ್ರಜ್ಞರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಆ ನಟರು, ನಿರ್ದೇಶಕರ ಜೊತೆ ಕೆಲಸ ಮಾಡುವುದು ಸಲೀಸು. ಜೆಂಟಲ್ʻಮನ್ ರೀತಿ ವರ್ತಿಸುತ್ತಾರೆ. ಅವರೊಂದಿಗೆ ಕೆಲಸ ಮಾಡುವಾಗ ನಮಗೆ ಅಭದ್ರತೆಯ ಭಾವ ಕಾಡುವುದಿಲ್ಲ ಎಂದೂ ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಈ ವರದಿ ಬಹಿರಂಗವಾಗಿದ್ದು ಸಂಚಲನ ಮೂಡಿಸಿದೆ. ವರದಿಯಲ್ಲಿ ಆಕಾಶ, ನಕ್ಷತ್ರ, ಚಂದಮಾಂ ದೂರದಿಂದ ನೋಡುವುದಕ್ಕೆ ಸುಂದರವಾಗಿಯೇ ಕಾಣುತ್ತವೆ. ಆದರೆ, ಹೊಳೆಯುವುದೆಲ್ಲ ನಕ್ಷತ್ರವಲ್ಲ ಎಂಬ ರೀತಿ ಹೇಳಲಾಗಿದೆ.



