‘ಸಂಜು ವೆಡ್ಸ್ ಗೀತ 2’ ಸಿನಿಮಾ ಇದೇ ಜನವರಿ 10ಕ್ಕೆ ಬಿಡುಗಡೆ ಆಗ್ಬೇಕಿತ್ತು. ಇನ್ನೇನು ರಿಲೀಸ್ ಆಗ್ಬೇಕು, ಇನ್ನೊಂದು ದಿನ ಇರುವಾಗ ಹೈದರಾಬಾದ್ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿತ್ತು. ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟಿಸಿ ನಾಗಶೇಖರ್ ನಿರ್ದೇಶನ ಮಾಡಿರುವ ಸಂಜು ವೆಡ್ಸ್ ಗೀತಾ 2 ಮೇಲೆ ಭಾರಿ ನಿರೀಕ್ಷೆಗಳೇನೋ ಇವೆ. ಹೀಗಿರುವಾಗಲೇ ತಡೆ ಬಂದಿತ್ತು. ವಿಶೇಷ ಅಂದ್ರೆ ಗುರುವಾರ ಕೊಟ್ಟಿದ್ದ ತಡೆಯಾಜ್ಞೆಗೆ, ಶುಕ್ರವಾರವೇ ಅದೇ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ೪ ಕೋಟಿ ರೂ. ಶೂರಿಟಿ ಕಟ್ಟಿಸಿಕೊಂಡಿರುವ ನ್ಯಾಯಾಲಯ, ತಡೆಯಾಜ್ಞೆ ತೆರವು ಮಾಡಿದೆ.
ಕಾರಣ ಏನೆಂದರೆ ನಾಗಶೇಖರ್ ನಿರ್ದೇಶನ ಮಾಡಿದ್ದ ತೆಲುಗಿನ ಸಿನಿಮಾ ಒಂದರ ಫೈನ್ಯಾನ್ಶಿಯರ್ ಒಬ್ಬರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆ ಆಗದಂತೆ ತಡೆಯಾಜ್ಞೆ ತಂದಿದ್ದರು. ಆದರೆ ಈಗ ತಡೆಯಾಜ್ಞೆ ತೆರವಾಗಿದೆ. ಒಂದೇ ದಿನದಲ್ಲಿ ತಡೆಯಾಜ್ಞೆ ತೆರವಾಗಿದ್ದು ಹೇಗೆ..? ಇಷ್ಟಕ್ಕೂ ಸಮಸ್ಯೆ ಏನಾಗಿತ್ತು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಆದರೆ ನಾಗಶೇಖರ್, ತೆಲುಗಿನಲ್ಲಿ ಸಿನಿಮಾ ಮಾಡಿದಾಗ ಚೀಟಿಂಗ್ ಮಾಡಿದ್ಧಾರಾ ಎಂಬ ಆರೋಪಕ್ಕೆ ಅವರೂ ಸ್ಪಷ್ಟನೆ ಕೊಟ್ಟಿಲ್ಲ. ಅವರು ಗೆಳೆಯ ಭಾವನಾ ರವಿ ಜೊತೆ ಸೇರಿ ತೆಲುಗಿನಲ್ಲಿ ‘ಗುರ್ತುಂದಾ ಸೀತಾಕಾಲಂ’ ಹೆಸರಿನ ಸಿನಿಮಾ ಮಾಡಿದ್ದರಂತೆ. ಆ ಚಿತ್ರಕ್ಕೆ ಫೈನಾನ್ಸ್ ಮಾಡಿದ್ದವರೊಬ್ಬರು ʻಸಂಜು ವೆಡ್ಸ್ ಗೀತಾ 2ʼ ಚಿತ್ರ ನಾಗಶೇಖರ್ ಅವರ ಬ್ಯಾನರ್ ಸಿನಿಮಾ ಎಂದು ತಪ್ಪು ತಿಳಿದುಕೊಂಡು ಕೇಸ್ ಹಾಕಿದ್ದರಂತೆ. ಹಳೆಯ ವಿಡಿಯೋ ನೋಡಿ, ಅವರು ಇದು ನನ್ನ ಸಿನಿಮಾ ಅಂದುಕೊಂಡಿದ್ದರು ಹಾಗಾಗಿ ಸ್ಟೇ ತಂದಿದ್ದರು ಎಂದು ವಿವರ ನೀಡಿದ್ದಾರೆ ನಾಗಶೇಖರ್. ಎಲ್ಲ ಓಕೆ, ಕೇಸ್ ಆರಂಭದಲ್ಲೇ ಬಿದ್ದು ಹೋಗಬೇಕಿತ್ತಲ್ವಾ ಎಂದರೆ ಉತ್ತರ ಸಿಕ್ಕಲ್ಲ.
ಸಂಜು ವೆಡ್ಸ್ ಗೀತಾ ಚಿತ್ರದ ನಿರ್ಮಾಪಕರು 6 ಕೋಟಿ ಬ್ಯಾಲೆನ್ಸ್ ಉಳಿಸಿಕೊಂಡಿದ್ದಾರೆ. ಹಾಗಾಗಿ ಸಮಸ್ಯೆ ಆಗಿದೆ ಎಂದೆಲ್ಲ ಕಥೆಗಳು ಬರ್ತಾ ಇವೆ. ಹಾಗೇನಿಲ್ಲ. ಹೈದರಾಬಾದ್ ನ್ಯಾಯಾಲಯಕ್ಕೆ 4 ಕೋಟಿ ಶೂರಿಟಿ ಕೊಟ್ಟು, ತಡೆಯಾಜ್ಞೆ ತೆರವು ಮಾಡಿಸಿದ್ದಾರೆ ನಿರ್ಮಾಪಕರು ಎನ್ನುವ ನಾಗಶೇಖರ್ 15 ಕೋಟಿ ಹಾಕಿ ಸಿನಿಮಾ ಮಾಡಿರುವವರಿಗೆ ಇದು ದೊಡ್ಡ ಮೊತ್ತ ಅಲ್ಲ ಎಂದು ಹೇಳಿದ್ಧಾರೆ.
ಅಲ್ಲಿಗೆ ಸಂಜು ವೆಡ್ಸ್ ಗೀತಾ 2 ಚಿತ್ರದ ಸಮಸ್ಯೆ ನಿರ್ಮಾಪಕರಲ್ಲ ಎನ್ನುವುದು ಖಚಿತವಾಗಿದೆ. ಈಗ ತಡೆಯಾಜ್ಞೆ ತೆರವಾದ ಮೇಲೆ ಹೊಸ ಡೇಟ್ ಘೋಷಣೆಯಾಗಬೇಕು. ಅದಿನ್ನೂ ಆಗಿಲ್ಲ.
ಒಟ್ಟಿನಲ್ಲಿ ಸಂಜು ವೆಡ್ಸ್ ಗೀತಾಗೆ ರಮ್ಯಾ ಅವರೇ ಅಟ್ರಾಕ್ಷನ್ ಆಗಿದ್ದಂತೆ, ಈಗ ರಚಿತಾ ರಾಮ್ ಅಭಿನಯದ ಸಿನಿಮಾಗೂ ಅವರೇ ಸ್ಟಾರ್ ಅಟ್ರಾಕ್ಷನ್. ಹಾಗೆ ನೋಡಿದರೆ ಸದ್ಯದ ಮಟ್ಟಿಗೆ ಶ್ರೀನಗರ ಕಿಟ್ಟಿಗೆ ಮಾರ್ಕೆಟ್ ಇಲ್ಲ. ಅದು ವಾಸ್ತವ. ಸದ್ಯಕ್ಕೆ ರಚಿತಾ ರಾಮ್ ಅವರ ಅಭಿನಯವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಬೇಕು. ಹಾಗೆ ಕರೆತಂದವರನ್ನು ನಾಗಶೇಖರ್ ಚಿತ್ರಮಂದಿರದಲ್ಲಿ ಉಳಿಸಿಕೊಳ್ಳಬೇಕು. ಅಷ್ಟೇ.



