ಯತ್ನಾಳ್ ಟೀಮಿನ ವಕ್ಫ್ ರಿಪೋರ್ಟ್ʻಗೆ ಜೆಪಿಸಿ ಮುಖ್ಯಸ್ಥ ಜಗದಂಬಿಕಾ ಪಾಲ್ ಅಭಿನಂದನೆ ಸಲ್ಲಿಸಿದ್ದಾರೆ. ಯತ್ನಾಳ್ ಟೀಂ ವಕ್ಫ್ ವರದಿಗೆ ಶಹಬ್ಬಾಸ್ ಎಂದ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್, ಯತ್ನಾಳ್ ಟೀಂನ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪಗೆ ಅಭಿನಂದನೆ ಹೇಳಿದ್ಧಾರೆ. ಖುದ್ದಾಗಿ ಫೋನ್ ಮಾಡಿ ಗುಡ್ ಗುಡ್.. ಗುಡ್ ರಿಪೋರ್ಟ್ ಎಂದಿದ್ದಾರೆ. ಒಟ್ಟಾರೆಯಾಗಿ ಯತ್ನಾಳ್ ಟೀಂಗೆ ಗುಡ್ ಎಂದ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್, ಇನ್ನೊಂದು ಕಡೆ ವಿಜಯೇಂದ್ರ ಬಣದ ಟೆನ್ಷನ್ ಜಾಸ್ತಿ ಮಾಡಿದ್ದಾರೆ.
ವಕ್ಫ್ ಕುರಿತಂತೆ ರಾಜ್ಯಾದ್ಯಂತ ಹೋರಾಟ ರೂಪಿಸಿದ್ದ ಬಸನಗೌಡ ಪಾಟೀಲ ಯತ್ನಾಳ್ ಪಡೆ, ಯತ್ನಾಳ್ ಟೀಂನಿಂದ ವಕ್ಪ್, ರೈತರು, ದೇವಸ್ಥಾನಗಳು, ಸರ್ಕಾರಿ ಜಾಗಗಳ ಆಸ್ತಿಯನ್ನು ಅತಿಕ್ರಮಿಸಿದ್ದರ ಬಗ್ಗೆ ವರದಿ ಸಲ್ಲಿಸಿತ್ತು. ಡಿಸೆಂಬರ್ 04ರಂದು ದೆಹಲಿಯಲ್ಲಿ ವಕ್ಫ್ ಸಂಬಂಧಪಟ್ಟಂತೆ ಸಂಪೂರ್ಣ ವರದಿ ಸಲ್ಲಿಕೆಯಾಗಿತ್ತು. ಹೋರಾಟ ನಡೆಯುತ್ತಿದ್ದ ವೇಳೆ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ವಿಜಯಪುರದ ʻವಕ್ಫ್ ವಿರುದ್ಧ ಹೋರಾಟʼಕ್ಕೆ ಬಂದಿದ್ದರು. ಯತ್ನಾಳ್ ಬಣದ ಹೋರಾಟಕ್ಕೆ ಜಗದಂಬಿಕಾ ಪಾಲ್ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದಾದ ಮೇಲೆ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ನೇತೃತ್ವದ ತಂಡ 7 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವಕ್ಫ್ ವರದಿ ಸಿದ್ಧಪಡಿಸಿತ್ತು. ವಿಜಯೇಂದ್ರ ವಿರುದ್ಧ ಹೋರಾಟಕ್ಕೆ ವಕ್ಫ್ ವಿವಾದವನ್ನು ಬಳಸಿಕೊಂಡಿದ್ದ ಯತ್ನಾಳ್ ಪಡೆ, ನಾವೂ ಸ್ಟ್ರಾಂಗ್ ಇದ್ದೇವೆ ಎಂಬ ಸಂದೇಶ ರವಾನಿಸಿತ್ತು. ಇದೀಗ ವರದಿಗೆ ಶಹಬ್ಬಾಸ್ ಕೂಡಾ ಬಂದಿದ್ದು, ವಿಜಯೇಂದ್ರ ತಂಡದ ತಳಮಳ ಹೆಚ್ಚಿದೆ.
ವಿಜಯೇಂದ್ರ ಬಣದ ತಳಮಳ ಹೆಚ್ಚುವುದಕ್ಕೆ ಕಾರಣ ಯತ್ನಾಳ್ ಒಬ್ಬರೇ ಅಲ್ಲ..
ಅತ್ತ ಕೇಂದ್ರದ ನಾಯಕರ ಮೆಚ್ಚುಗೆಗೆ ಪಾತ್ರರಾಗಿರುವ ಯತ್ನಾಳ್, ಇತ್ತ ರಾಜ್ಯದಲ್ಲಿ ತಮ್ಮ ಬೆಂಬಲಿಗರ ಪಡೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಜತೆಗಿನ ಭಿನ್ನಾಭಿಪ್ರಾಯ ಹೊರಬಿದ್ದ ಬೆನ್ನಲ್ಲೇ ಮಾಜಿ ಸಚಿವರಾದ ಬಿ.ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರ ನಡುವಿನ ಬಿರುಕು ತಕ್ಕಮಟ್ಟಿಗೆ ನಿವಾರಣೆಯಾಗಿದೆ. ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ನಡುವೆ ಕೊಂಡಿಯಂತೆ ಕೆಲಸ ಮಾಡಿ ಉಭಯ ನಾಯಕರ ನಡುವೆ ಸ್ನೇಹ ಚಿಗುರೊಡೆಯುವಂತೆ ಮಾಡಿದ್ದಾರೆ.
ಇನ್ನು ಶ್ರೀರಾಮುಲು ಈಗಾಗಲೇ ಬಳ್ಳಾರಿಯಲ್ಲಿ ಶಕ್ತಿ ಪ್ರದರ್ಶನ ನಡೆಸುವ ಆಲೋಚನೆ ವ್ಯಕ್ತಪಡಿಸಿದ್ದು, ವರಿಷ್ಠರ ಒಪ್ಪಿಗೆ ಪಡೆದು ಮುನ್ನಡೆಯೋಣ ಎಂದು ರಮೇಶ್ ಜಾರಕಿಹೊಳಿ ಸಲಹೆ ನೀಡಿದ್ದಾರಂತೆ. , ವರಿಷ್ಠರ ಅನುಮತಿ ಇಲ್ಲದೆ ಇಂಥ ಸಮಾವೇಶ ಹಮ್ಮಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂಬ ಎಚ್ಚರಿಕೆಯ ಸಲಹೆಯನ್ನು ರಮೇಶ್ ಜಾರಕಿಹೊಳಿ ಅವರು ರಾಮುಲುಗೆ ನೀಡಿದರಂತೆ. ಹೀಗಾಗಿ ರಾಮುಲು ಸದ್ಯಕ್ಕೆ ಸೈಲೆಂಟ್ ಆಗಿದ್ದಾರೆ. ಆದರೆ ದೆಹಲಿಗೆ ಹೋದಾಗ ಅದಕ್ಕೆ ಅನುಮತಿ ಪಡೆದೇ ಬರುತ್ತಾರೆ ಎಂದು ಹೇಳಲಾಗುತ್ತಿದೆ.



