ಜಾಲಿ ಬಾಸ್ಟಿನ್. ಜೂನಿಯರ್ ರವಿಚಂದ್ರನ್ ಎಂದೇ ಹೆಸರುವಾಸಿಯಾಗಿದ್ದವರು. ರವಿಚಂದ್ರನ್ ಅವರ ವೃತ್ತಿ ಬದುಕಿನ ಸಾಹಸಗಳಿಗೆ ಡ್ಯೂಪ್ ಆಗಿದ್ದವರು. ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಶಾಂತಿ ಕ್ರಾಂತಿ.. ಹೀಗೆ ರವಿಚಂದ್ರನ್ ಅವರಿಗೆ ಕ್ರೇಜಿ ಸ್ಟಾರ್ ಪಟ್ಟ ತಂದುಕೊಟ್ಟ ಚಿತ್ರಗಳಲ್ಲೆಲ್ಲ ಜಾಲಿ ಬಾಸ್ಟಿನ್ ಕೊಡುಗೆ ಅಪಾರವಾದದ್ದು. ಪ್ರೇಮಲೋಕದ ಬೈಕ್ ಸ್ಟಂಟ್ಸ್ ಮೂಲಕವೇ ಬೆಳಕಿಗೆ ಬಂದಿದ್ದ ಸಾಹಸ ನಿರ್ದೇಶಕ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್ ಹಠಾತ್ ನಿಧನರಾಗಿದ್ಧಾರೆ. ಜಾಲಿ ಬಾಸ್ಟಿನ್ ಅವರು ಕೇವಲ 58 ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ಧಾರೆ.
ಕೇರಳದ ಅಲಪ್ಪೆಯವರಾದ ಜಾಲಿ ಬಾಸ್ಟಿನ್, ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದವರನ್ನು ಸ್ಟಂಟ್ ವೃತ್ತಿಗೆ ಕರೆತಂದವರು ವಿ.ರವಿಚಂದ್ರನ್. ಪ್ರೇಮಲೋಕ ಚಿತ್ರಕ್ಕೆ ಜಾಲಿ ಬಾಸ್ಟಿನ್ ಅವರು ರವಿಚಂದ್ರನ್ ಅವರ ಡ್ಯೂಪ್ ಆದರು. ಆಗ ಅವರಿಗೆ ಕೇವಲ 17 ವರ್ಷ ವಯಸ್ಸು.
ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು.
‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿ’ ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಲ್ಲಿ ಜಾಲಿ ಕೆಲಸ ಮಾಡಿದ್ದಾರೆ. ರಿಸ್ಕಿ ಸ್ಟಂಟ್ ಮಾಡೋ ವೇಳೆ ಸಾಕಷ್ಟು ಬಾರಿ ಜಾಲಿ ಬಾಸ್ಟಿನ್ ಪೆಟ್ಟು ಮಾಡಿಕೊಂಡಿದ್ದರು. ‘ಭಲೇ ಚತುರ’ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಜಾಲಿ ದೇಹಕ್ಕೆ ಸಾಕಷ್ಟು ಹಾನಿ ಆಗಿತ್ತು. ‘ಪುಟ್ನಂಜ’ ಸಿನಿಮಾ ಶೂಟ್ ವೇಳೆ ಬೈಕ್ನಿಂದ ಬಿದ್ದು ಅವರ ಮುಖ ಹಾಗೂ ಕಾಲಿಗೆ ಪೆಟ್ಟಾಗಿತ್ತು.



