ಶಿವಣ್ಣ ಎಲ್ಲೇ ಹೋಗ್ಲಿ.. ಅಭಿಮಾನಿಗಳು ಮುತ್ತಿಕೊಳ್ತಾರೆ. ಇತ್ತೀಚೆಗೆ ವೇದಿಕೆಗಳಲ್ಲಿ ಹಾಡುವುದನ್ನೂ ಅಭ್ಯಾಸ ಮಾಡಿಕೊಂಡಿರೋ ಕಾರಣಕ್ಕೆ ಶಿವಣ್ಣನಿಗೆ ಅಭಿಮಾನಿಗಳು ಹಾಡುವುದಕ್ಕೆ ಡೈಲಾಗ್ ಹೇಳುವುದಕ್ಕೆ.. ಅಷ್ಟೆಲ್ಲ ಯಾಕೆ ಡ್ಯಾನ್ಸ್ ಮಾಡುವುದಕ್ಕೂ ದುಂಬಾಲು ಬೀಳ್ತಾರೆ. ಇದರ ಜೊತೆಗೆ 125ಕ್ಕೂ ಹೆಚ್ಚು ಸಿನಿಮಾ ಮಾಡಿರೋ ಶಿವಣ್ಣನ ನೂರಾರು ಡೈಲಾಗುಗಳು ಫೇಮಸ್ ಆಗಿವೆ. ಅಂಥಹವುಗಳಲ್ಲೊಂದು ಯೋ.. ಬರ್ಕಯ್ಯ.. ಬೆಂಗ್ಳೂರು ನಂದು ಅನ್ನೋ ಜೋಗಯ್ಯ ಚಿತ್ರದ ಡೈಲಾಗ್.. ಈಗ ಅದೇ ಡೈಲಾಗ್ʻನ ಶಿವಣ್ಣ ಲೋಕಸಭೆ ಅಖಾಡದಲ್ಲಿ ಹೊಡೆದಿದ್ದಾರೆ.
ಶಿವಮೊಗ್ಗದಲ್ಲಿ ಗೀತಾ ಶಿವ ರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿಯಾಗಿದ್ಧಾರೆ. ಗೀತಾ ಅವರ ಪರ ಪ್ರಚಾರ ಮಾಡುತ್ತಿರೋ ಶಿವಣ್ಣ ಅವರನ್ನು ಹಾಡು ಹಾಡುವಂತೆ, ಡೈಲಾಗ್ ಹೊಡೆಯುವಂತೆ ದುಂಬಾಲು ಬಿದ್ದಿದ್ದಾರೆ.ಇದು ಹಾಡು ಹಾಡುವಂತಹ ಪ್ರೋಗ್ರಾಂ ಅಲ್ಲ ಕಣಮ್ಮ. ಮೊದಲು ಗೆಲ್ಲಿಸಿ, ಆಮೇಲೆ ಎಷ್ಟು ಹಾಡುಗಳು ಬೇಕು. 24 ಗಂಟೆನೂ ಹಾಡುತ್ತೇನೆ, ಬೇಕಿದ್ರೆ 24 ಗಂಟೆ ಕುಣೀತೆನೆ. ಯಾಕಂದ್ರೆ, ಬೇರೆ ಸಮಾರಂಭಕ್ಕೆ ಬಂದಾಗ ಹಾಡುತ್ತೇನೆ. ಆದರೆ, ಇಂತಹ ಸಮಾರಂಭದಲ್ಲಿ ಬೇಡ ಎಂದ ಶಿವಣ್ಣ ಅವರನ್ನು ಅಭಿಮಾನಿಗಳು ಡೈಲಾಗ್ ಹೇಳುವಂತೆ ಒತ್ತಾಯಿಸಿದಾಗ.. ಯೋ.. ಬರ್ಕಯ್ಯ.. ಮುಂದಾಗೋದು ಪೇಪರ್‌ನಲ್ಲಿ ಬರ್ಕೋ.. ಶಿವಮೊಗ್ಗ ನಂದು. ಇಲ್ಲಿ ಇರೋರೆಲ್ಲ ಶಿವಮೊಗ್ಗ ಹುಲಿಗಳು.. ನ್ಯಾಪಕ ಇರಲಿ ಎಂದು ಡೈಲಾಗ್ ಹೊಡೆದಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರ ಈ ಬಾರಿ ಎಲ್ಲರ ಗಮನ ಸೆಳೆದಿದೆ. ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕೆ. ಎಸ್. ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ಇಂಟ್ರೆಸ್ಟಿಂಗ್ ಅನಿಸುತ್ತಿದೆ.
ಶಿವಣ್ಣ ಎಲ್ಲೇ ಹೋಗ್ಲಿ ಅಭಿಮಾನಿಗಳು ಸೇರುತ್ತಿದ್ಧಾರೆ. ಆದರೆ.. ಜನ ಬಂದ್ರೆ ಥಿಯೇಟರು ತುಂಬುತ್ತೆ ಅಂತಾ ಖುಷಿ ಪಡೋಕೆ ಇದು ಸಿನಿಮಾ ಅಲ್ಲ, ಪಾಲಿಟಿಕ್ಸ್. ಬಂಗಾರಪ್ಪನವರ ಮಗಳನ್ನೂ ಈಗಾಗಲೇ ಸೋಲಿಸಿರೋ ಖ್ಯಾತಿ ಶಿವಮೊಗ್ಗದವರಿಗೆ ಇದೆ. ಸ್ವತಃ ಬಂಗಾರಪ್ಪನವರೇ ಸೋತಿದ್ದಾರೆ. ಇದೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡೇ ಅಖಾಡಕ್ಕಿಳಿದಿದ್ದಾರೆ ಶಿವಣ್ಣ.
ಏಕೆಂದರೆ ಈ ಬಾರಿ ಶಿವಣ್ಣ ಅವರಿಗೆ ತಮ್ಮ ಹೆಸರಿನ ಬಲ ಅಷ್ಟೇ ಅಲ್ಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಹೆಸರಿನ ಬಲವೂ ಇದೆ. ಎಲ್ಲವೂ ವರ್ಕೌಟ್‌ಆದರೆ.. ಗೀತಾ ಗೆಲ್ಲುವುದು ಕಷ್ಟವೇನಲ್ಲ. ಜೊತೆಗೆ ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧೆ ಮಾಡೋದ್ರಿಂದ, ರಾಘವೇಂದ್ರ ಯಡಿಯೂರಪ್ಪ ಅವರ ವೋಟುಗಳು ಡಿವೈಡ್ ಆಗುತ್ತವೆ. ಹಾಗಾದರೆ.. ಅದರ ಲಾಭವಾಗುವುದು ಗೀತ ಶಿವರಾಜ್ ಕುಮಾರ್ ಅವರಿಗೆ.
ಅಲ್ಲದೆ ಈ ಬಾರಿ ಈಡಿಗ ಮತಗಳನ್ನು ಒಗ್ಗೂಡಿಸುವುದಕ್ಕೆ ಮಧು ಬಂಗಾರಪ್ಪ ಕೆಲಸ ಮಾಡಿದ್ದಾರೆ. ಖುದ್ದು ಶಿವಣ್ಣ ಕೂಡಾ ಈಡಿಗ ಮತದಾರರ ಸಂಘಟನೆಯ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಲಾಭವಾದರೆ.. ಗೀತಾ ಸಂಸದೆಯಾದರೆ ಆಶ್ಚರ್ಯವಿಲ್ಲ. ಹಾಗೇನಾದರೂ ಆದರೆ.. ಶಿವಮೊಗ್ಗದಿಂದ ಗೆದ್ದ ಮೊದಲ ಮಹಿಳಾ ಸಂಸದೆಯಾಗಲಿದ್ದಾರೆ ಗೀತ ಶಿವರಾಜ್ ಕುಮಾರ್.



