ಬಿಜೆಪಿ ಮತ್ತು ಜೆಡಿಎಸ್, ಲೋಕಸಭೆ ಚುನಾವಣೆಯಲ್ಲಿ ಒಟ್ಟೊಟ್ಟಿಗೇ ಹೆಜ್ಜೆ ಹಾಕಲಿವೆಯಾ..? ಚುನಾವಣೆ ಪೂರ್ವ ಮೈತ್ರಿ ಆಗಲಿದೆಯಾ..? ಈ ಪ್ರಶ್ನೆಗೆ ಇದ್ದಕ್ಕಿದ್ದಂತೆ ಜೀವ ಬಂದಿದೆ. ಕಳೆದ ಎರಡು ದಿನಗಳಿಂದ ಲೋಕಸಭೆ ಲ್ಲಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎಂದು ವರದಿಯಾಗ್ತಿದೆ. ಅದಕ್ಕೆ ತಕ್ಕಂತೆ ಒಡಿಶಾ ರೈಲ್ವೇ ದುರಂತದ ಬಗ್ಗೆ ದೇವೇಗೌಡರು ಕೇಂದ್ರದ ಸಮರ್ಥನೆಗೆ ಬಂದಿದ್ದಾರೆ. ಕಾಂಗ್ರೆಸ್, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳೂ ಬಿಜೆಪಿಯನ್ನು ಟೀಕಿಸುತ್ತಿರುವಾಗ ದೇವೇಗೌಡರು ಕೇಂದ್ರ ರೈಲ್ವೆ ಸಚಿವರನ್ನು ಹೊಗಳಿದ್ದಾರೆ. ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿಯ ಕಥೆ ಹೇಳುತ್ತಿದ್ದವರಿಗೆ ಇದು ಪುಷ್ಠಿ ಕೊಟ್ಟಂತಾಗಿದೆ.
2019ರ ಚುನಾವಣೆಯಲ್ಲಿ ಬಿಜೆಪಿ 28ರಲ್ಲಿ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಈ ಹಿನ್ನೆಲೆ ಬಿಜೆಪಿಗೆ ಮೈತ್ರಿ ಅನಿವಾರ್ಯ ಎನ್ನಲಾಗ್ತಿದೆ. ಇನ್ನು ಮೈತ್ರಿ ಆಫರ್ ಬರುತ್ತಿದ್ದಂತೆ ಜೆಡಿಎಸ್ ಐದು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆಯಂತೆ. ಹಾಸನ, ತುಮಕೂರು, ಮಂಡ್ಯ, ರಾಯಚೂರು, ಕೋಲಾರ ಕ್ಷೇತ್ರಗಳನ್ನು ನಮಗೆ ಕೊಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ಇರಿಸಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಅಭೂತಪೂರ್ವ ಗೆಲುವು, 135 ಸ್ಥಾನಗಳಲ್ಲಿ ಭರ್ಜರಿಯಾಗಿ ಗೆದ್ದಿರುವ ಕಾರಣ ಈ ನಿಲುವು ತೆಗೆದುಕೊಳ್ಳಲಾಗಿದೆ ಎನ್ನುವುದನ್ನೂ ಬಿಡಿಸಿಹೇಳಬೇಕಿಲ್ಲ. ಈ ಹಿನ್ನೆಲೆಯಲ್ಲಿಯೇ ಜೆಪಿ ನಡ್ಡಾ ಭೇಟಿ ಕುತೂಹಲ ಕೆರಳಿಸಿದೆ.
ಜೆಪಿ ನಡ್ಡಾ ಅವರು ವಿಶಾಖಪಟ್ಟಣಂನಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಅತ್ತ ಚಂದ್ರಬಾಬು ನಾಯ್ಡು ಜೊತೆಯಲ್ಲಿಯೂ ಮಾತುಕತೆ ನಡೆಯುತ್ತಿದೆ. ಇತ್ತ ಕರ್ನಾಟಕದಲ್ಲಿಯೂ ಮಾತುಕತೆ ನಡೆಯುತ್ತಿದೆ.



