ಜನಾರ್ದನ ರೆಡ್ಡಿ, ಗಣಿ ಧಣಿ ಎಂದೇ ಫೇಮಸ್ ಆಗಿರುವ ರೆಡ್ಡಿಗಾರು. ನರಾ ಭರತ್ ರೆಡ್ಡಿ ಅವರೂ ಬಳ್ಳಾರಿಯವರೇ. ಬಳ್ಳಾರಿಯ ಕುರುಗೋಡು ಕ್ಷೇತ್ರದ ಮಾಜಿ ಶಾಸಕರಾದ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನರಾ ಭರತ್ ರೆಡ್ಡಿ. ಇಷ್ಟಕ್ಕೂ ಇವರಿಬ್ಬರ ನಡುವಣ ಶತ್ರುತ್ವದ ಇತಿಹಾಸಕ್ಕೆ ಒಂದು ಜೀವ ಬಲಿಯಾಗಿದೆ. ಆದರೆ, ಇದು ಹೊಸದೇನಲ್ಲ. ರೆಡ್ಡಿ ವರ್ಸಸ್ ರೆಡ್ಡಿ ಕುಟುಂಬದ ಶತ್ರುತ್ವಕ್ಕೆ ದೊಡ್ಡ ಚರಿತ್ರೆಯೇ ಇದೆ. ಇದು ತೆಲುಗಿನ ರಾಯಲಸೀಮ ಕಥೆಗಳಷ್ಟೇ ರೋಚಕವಾಗಿಯೂ ಇದೆ.
ಬಳ್ಳಾರಿಯ ಕುರುಗೋಡಿನವರಾದ ನಾರಾ ಸೂರ್ಯನಾರಾಯಣ ರೆಡ್ಡಿ, ಸಚಿವರಾಗಲಿಲ್ಲ. ಆದರೆ ಇಡೀ ಬಳ್ಳಾರಿಯ ಕಂಟ್ರೋಲ್ ಅವರ ಕೈಲಿತ್ತು. ಜನಾರ್ದನ ರೆಡ್ಡಿ ಕುಟುಂಬ ಪ್ರಾಬಲ್ಯಕ್ಕೆ ಬರುತ್ತಿದ್ದ ವೇಳೆ ಅದಕ್ಕೆ ಅಡ್ಡಿಯಾಗುತ್ತಿದ್ದವರು ಸೂರ್ಯನಾರಾಯಣ ರೆಡ್ಡಿ. ಯಾವುದೋ ಕೆಲಸಕ್ಕೆ ಎಂದು ಸರಕಾರಿ ಕಚೇರಿಗೆ ಹೋಗಿದ್ದಾಗ, ಅಲ್ಲಿಗೆ ಬಂದ ಸೂರ್ಯನಾರಾಯಣ ರೆಡ್ಡಿ ಅವರಿಗೆ ಅಧಿಕಾರಿಗಳು ನಮಸ್ಕರಿಸಿ ಬರಮಾಡಿಕೊಂಡರಂತೆ. ಇದು ಜನಾರ್ದನ ರೆಡ್ಡಿಯ ಈಗೋಕೆ ಪೆಟ್ಟು ಕೊಟ್ಟಿತು. ಆನಂತರವೇ ಅವರು ಶ್ರೀರಾಮುಲು ಮೂಲಕ ರಾಜಕೀಯ ಬೆಳವಣಿಗೆಗೆ ಶ್ರೀಕಾರ ಹಾಕಿದ್ದು. ಅದಾದ ನಂತರ 1990ರ ದಶಕದಲ್ಲಿ ಬಳ್ಳಾರಿ ಪ್ರದೇಶದಲ್ಲಿ ಗಣಿಗಾರಿಕೆಯಲ್ಲಷ್ಟೇ ಇದ್ದ ಜನಾರ್ದನ ರೆಡ್ಡಿ ಬ್ರದರ್ಸ್, 2000ರ ಆರಂಭದಲ್ಲಿ ಬಿಜೆಪಿ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಜನಾರ್ದನ ರೆಡ್ಡಿ 2004ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಬೆಲ್ಲಾರಿ ಕ್ಷೇತ್ರದಿಂದ ಗೆದ್ದರು.
ಜನಾರ್ದನ ರೆಡ್ಡಿ ಅವರು ಕೆಡಿಪಿ ಮೀಟಿಂಗ್‌ಗೆ ಹೋದಾಗ ಅಲ್ಲಿಗೆ ಪ್ರವೇಶ ಇರಲಿಲ್ಲ. ಅದಾದ ನಂತರ ವಿಧಾನಪರಿಷತ್ ಸದಸ್ಯರಾಗಿ ಕೆಡಿಪಿ ಸಭೆ ಪ್ರವೇಶ ಮಾಡಿದ್ದರು ಜನಾರ್ದನ ರೆಡ್ಡಿ. ಸೂರ್ಯನಾರಾಯಣ ರೆಡ್ಡಿ ಶಾಸಕರಾಗಿದ್ದಾಗ ಉದ್ಯಮಿಗಳಾಗಿದ್ದ ನಮಗೆ ಗೌರವ ಕೊಡಲಿಲ್ಲ ಎಂಬ ಹಠಕ್ಕೆ ಬಿದ್ದ ಜನಾರ್ದನ ರೆಡ್ಡಿ, ಅವರನ್ನು ಸೋಲಿಸಿ, ಕಾಂಗ್ರೆಸ್ಸನ್ನೂ ಸೋಲಿಸಿದರು. ಇದರ ಮಧ್ಯೆ ಅವರಿಗೆ ಇವರು ಚಾಲೆಂಜ್ ಹಾಕುವುದು, ಇವರಿಗೆ ಅವರು ಚಾಲೆಂಜ್ ಹಾಕವುದು ನಡೆದೇ ಇದ್ದವು. ಅವುಗಳನ್ನು ಜನ ಮರೆಯಬಹುದು, ರೆಡ್ಡಿಗಳು ಮರೆತಿರಲಿಲ್ಲ.
ಈಗ ಅಪ್ಪನ ಸೋಲಿನ ಸೇಡನ್ನು ಮಗ ನಾರಾ ಭರತ್ ರೆಡ್ಡಿ ತೀರಿಸಿಕೊಂಡರು. ನಾರಾ ಭರತ್ ರೆಡ್ಡಿ ಬಳ್ಳಾರಿ ನಗರದ ಪ್ರಸ್ತುತ ಕಾಂಗ್ರೆಸ್ ಶಾಸಕ. 2023ರ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಗಾಲಿ ಲಕ್ಷ್ಮಿ ಅರುಣಾ ವಿರುದ್ಧ ಸ್ಪರ್ಧಿಸಿ ಜಯಗಳಿಸಿದ್ದ ಭರತ್ ರೆಡ್ಡಿ, ಜನಾರ್ದನ ರೆಡ್ಡಿ ಅವರ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ಜನವರಿ 1, 2026 ರಂದು ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಉಭಯ ಬೆಂಬಲಿಗರ ನಡುವೆ ತೀವ್ರ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಘಟನೆಯ ನಂತರ ಜನಾರ್ದನ ರೆಡ್ಡಿ ಅವರು, “ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ಅವರ ಪುತ್ರ ಭರತ್ ರೆಡ್ಡಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ” ಎಂದು ನೇರವಾಗಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಜನಾರ್ದನ ರೆಡ್ಡಿ ಅವರೇ ಬಳ್ಳಾರಿಯಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ನಾರಾ ಕುಟುಂಬವು ಹೇಳಿದೆ.



