ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷ ತುಂಬಿರುವ ಈ ಸಂಭ್ರಮದಲ್ಲಿ ಒಂದು ವಿವಾದ ಹುಟ್ಟುಹಾಕಿದ್ದಾರೆ. ರಾಷ್ಟ್ರಗೀತೆ ಜನಗಣಮನವನ್ನು ರವೀಂದ್ರ ನಾಥ್ ಠಾಗೋರರು ಬರೆದಿದ್ದು ಹಾಗೂ ಹಾಡಿದ್ದು ದೇಶಕ್ಕಾಗಿ, ಬ್ರಿಟಿಷ್ ದೊರೆಯನ್ನು ಸ್ವಾಗತಿಸುವುದಕ್ಕಾಗಿ ಎಂದು. ಇದಕ್ಕೆ ದಾಖಲೆಗಳಿವೆಯೇ.. ಸಾಕ್ಷಿ ಇದೆಯೇ.. ಎಂದು ಹುಡುಕಾಡಿದಾಗ ಒಂದಿಷ್ಟು ಮಾಹಿತಿಗಳಂತೂ ಸಿಗುತ್ತವೆ. ದಾಖಲೆಗಳೂ ಇವೆ.
ಐತಿಹಾಸಿದ ದಾಖಲೆಗಳು :
ರಾಷ್ಟ್ರಗೀತೆ ಜನಗಣಮನ ಗೀತೆಯನ್ನು ಬರೆದಿದ್ದು ರವೀಂದ್ರ ನಾಥ ಠಾಗೂರ್. ಅದರಲ್ಲಿ ಅನುಮಾನ ಇಲ್ಲ. ಈ ಗೀತೆಯನ್ನು 1911ರ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಯಿತು.
1911ರ ಡಿಸೆಂಬರ್ 27 ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಜನಗಣ ಮನವನ್ನು ಮೊದಲ ಬಾರಿಗೆ ಹಾಡಲಾಯಿತು. ಈ ಅಧಿವೇಶನಕ್ಕೆ ಬ್ರಿಟಿಷರ ದೊರೆ ಐದನೇ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ್ದು ಸತ್ಯ. ಅವರನ್ನು ದೆಹಲಿ ದರ್ಬಾರ್‌ನಲ್ಲಿ ಗೌರವಿಸಿದ್ದೂ ಸತ್ಯ. ಅದೇ ವೇದಿಕೆಯಲ್ಲಿ ಠಾಗೋರರ ಜನಗಣಮನ ಹಾಡಿದ್ದೂ ಸತ್ಯ. ಅದು ಆಗಿನ ಇಂಗ್ಲಿಷ್ ಪತ್ರಿಕೆ The Englishman ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದ್ದೂ ಸತ್ಯ. ಜನಗಣಮನ ಎಂಬ ಗೀತೆಯನ್ನು ಜಾರ್ಜ್ ಅವರನ್ನು ಸ್ವಾಗತಿಸಲೆಂದೇ ಹಾಡಲಾಯಿತು ಎಂದು ಪತ್ರಿಕೆಗಳಲ್ಲಿ ವರದಿ ಆದ ಬಗ್ಗೆ ದಾಖಲೆಗಳಿವೆ.
ಆದರೆ.. ಅದು ಐದನೇ ಜಾರ್ಜ್ ಅವರನ್ನು ಹೊಗಳಿ ಬರೆದ ಗೀತೆಯಲ್ಲ. ಅದೇ ದಿನ ರಾಮ ಭುಜ್ ಚೌಧರಿ ಎಂಬುವವರು ಹಿಂದಿಯಲ್ಲಿ ಬರೆದಿದ್ದ ಹಾಡೊಂದನ್ನು ಜಾರ್ಜ್ ಅವರಿಗಾಗಿಯೇ ಬರೆಸಿ ಹಾಡಿಸಲಾಯಿತು ಎನ್ನುತ್ತದೆ ಇನ್ನೊಂದು ಮೂಲ. ಆದರೆ.. ಅದು ಸುಳ್ಳು ಎಂದು ರವೀಂದ್ರ ನಾಥ್ ಠಾಗೂರರೇ ಬರೆದಿರುವುದಕ್ಕೆ ದಾಖಲೆಗಳಿವೆ.
ಠಾಗೂರ್ ಅವರಿಗೆ ಆನಂತರ ಆಕ್ರೋಶ ಎದುರಾಯಿತು. ಠಾಗೂರ್ ಅವರನ್ನು ದೇಶದ್ರೋಹಿ, ಬ್ರಿಟಿಷರ ಸೇವಕ ಎಂದು ಟೀಕಿಸಲಾಯ್ತು. ವಿಶೇಷ ಎಂದರೆ ಹಾಗೆ ವಿವಾದ ಆದಾಗ ಠಾಗೂರ್ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಅದು ಸತ್ಯ. ಆದರೆ ಠಾಗೋರ್ ಮೇಲಿನ ಆಕ್ರೋಶ ಬೆಳೆಯುತ್ತಲೇ ಹೋದಾಗ.. ಒಂದು ಘಟನೆ ನಡೀತು. 1919ರಲ್ಲಿ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೀತು. ಆಗ ಬ್ರಿಟಿಷ್ ಸರ್ಕಾರ ತಮಗೆ ನೀಡಿದ್ದ ʻನೈಟ್ ಹುಡ್ʼ ಪದವಿಯನ್ನು ಠಾಗೂರ್ ವಾಪಸ್ ಮಾಡಿ ಪ್ರತಿಭಟನೆ ಸಲ್ಲಿಸಿದರು. ಅಂದಹಾಗೆ ನೈಟ್ ಹುಡ್ ಪದವಿ ನೀಡುವುದು ಬ್ರಿಟಿಷರ ಚಕ್ರಾಧಿಪತ್ಯವನ್ನು ಒಪ್ಪಿಕೊಂಡವರಿಗೆ ಮಾತ್ರ. ಠಾಗೂರ್ ಅವರು ನೈಟ್ ಹುಡ್ ಪದವಿಯನ್ನು ಸ್ವೀಕಾರ ಮಾಡಿದ್ದರು, ಬ್ರಿಟಿಷರೇ ಚಕ್ರವರ್ತಿ ಎಂದು ಒಪ್ಪಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಂದಹಾಗೆ ಠಾಗೂರ್ ಅವರಿಗೆ ನೈಟ್ ಹುಡ್ ಗೌರವ ಸಿಕ್ಕಿದ್ದು 1915ರಲ್ಲಿ. ನೈಟ್ ಹುಡ್ ಗೌರವ ನೀಡಿದವರು ಅದೇ ಐದನೇ ಜಾರ್ಜ್.
ಕೊನೆಗೆ ತಮ್ಮ ಗೆಳೆಯ ಪುಲಿನ್ ಬಿಹಾರಿ ಸೇನ್ ಎಂಬುವವರಿಗೆ ಬರೆದಿರೋ ಪತ್ರದಲ್ಲಿ ʻತಾವು ಈ ಹಾಡು ಬರೆದಿದ್ದು ಬ್ರಿಟಿಷ್ ದೊರೆಯ ಸ್ವಾಗತಕ್ಕಾಗಿ ಅಲ್ಲ. ಜಾರ್ಜ್ ದೇವರಲ್ಲ. ನಾನು ಬರೆದಿರುವ ಭಾರತ ಭಾಗ್ಯವಿಧಾತ ಎಂದರೆ..ದೇವರು. ಭಾರತವನ್ನು ಯುಗ ಯುಗಳಿಂದ ಮುನ್ನಡೆಸುವವನು ʼʼ ಎಂಬ ಅರ್ಥದಲ್ಲಿ ಬರೆದ ಗೀತೆ ಎಂದು ಹೇಳಿದ್ದಾರೆ. ಅದಕ್ಕೆ ದಾಖಲೆಗಳಿವೆ.



