ಒಂದು ಫೋಟೋ.. ಹತ್ತಾರು ಅವಾಂತರಗಳನ್ನು ಸೃಷ್ಟಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಹನಿಮೂನ್ ಪೀರಿಯಡ್ ಎಂಬುದು ಸಿಕ್ಕಿಲ್ಲ. ಅದಕ್ಕೆ ಅವರೂ ಕಾರಣಕರ್ತರೇ. ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಜಾರಿ ಎನ್ನುತ್ತಲೇ ಅಧಿಕಾರಕ್ಕೆ ಬಂದವರು ಈಡೇರಿಸಲೇಬೇಕಿತ್ತು. ಹೀಗಾಗಿ 5 ಗ್ಯಾರಂಟಿಗಳನ್ನೇನೋ ಈಡೇರಿಸಲು ಹಂತ ಹಂತವಾಗಿ ಹೆಜ್ಜೆಯಿಡುತ್ತಿದ್ದಾರೆ. ಆದರೆ ಈ ಹಾದಿಯಲ್ಲಿ ಎದುರಾದ ಟೀಕೆ, ವಿಡಂಬನೆ, ರಾಜಕೀಯ ಆಟಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡಿಗೆ ಜಮೀರ್ ಅಹ್ಮದ್ ಮೊದಲ ಸಮಸ್ಯೆ ತಂದಿಟ್ಟಿದ್ದಾರೆ. ಅದಕ್ಕೆಲ್ಲ ಕಾರಣವಾಗಿರೋದು ಒಂದು ಫೋಟೋ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ಸಭೆ ವಿವಾದದ ಕೇಂದ್ರ ಬಿಂದು. ಈ ಸಭೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯಸ್ಥರು ಭಾಗಿಯಾಗಿದ್ದು ವಿವಾದಕ್ಕೀಡಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿಯೂ ಆಗಿರುವ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗವಹಿಸಿರುವುದು ವಿವಾದವನ್ನು ಸೃಷ್ಟಿಸಿದೆ. ಈ ಫೋಟೋ ಹೊರಬಂದಿದ್ದು ಜಮೀರ್ ಅಹ್ಮದ್ ಕಡೆಯಿಂದ. ಅವರೇನೋ ಹೆಮ್ಮೆಯಿಂದ ಸುರ್ಜೇವಾಲಾ ಸಭೆಯಲ್ಲಿದ್ದರು ಎಂದು ಟ್ವೀಟ್ ಮಾಡಿಬಿಟ್ಟರು. ಆದರೆ ಆಗಿದ್ದೇ ಬೇರೆ.
ಈ ಬಗ್ಗೆ ಸಭೆಯ ಫೋಟೋ ಲಗತ್ತಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಬೆಂಗಳೂರಿನ ಶಾಂಘ್ರಿಲಾ ಹೋಟೆಲ್ನಲ್ಲಿ ಎಟಿಎಂ ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ರಾಜ್ಯ ಸರ್ಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಬಿಬಿಎಂಪಿ ಅಧಿಕಾರಿಗಳೊಟ್ಟಿಗೆ ಏನು ಕೆಲಸ? ಇದು ಶೇ.85 ಡೀಲ್ ಫಿಕ್ಸಿಂಗ್ ಸಭೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರೇ ಉತ್ತರಿಸಿ’ ಎಂದು ಒತ್ತಾಯಿಸಿದೆ.
ಅಲ್ಲದೆ, ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್.ಸುರೇಶ್ಕುಮಾರ್ ಅವರೂ ಸಭೆಯ ಫೋಟೋ ಲಗತ್ತಿಸಿ ಟ್ವೀಟ್ ಮಾಡಿದ್ದು, ‘ಸಭೆಯಲ್ಲಿ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ವಿಶೇಷ ಆಯುಕ್ತ ದೀಪಕ್ ಇರುವುದನ್ನು ಗಮನಿಸಬಹುದು. ಸಭೆಯ ಅಧ್ಯಕ್ಷತೆಯನ್ನು ಸುರ್ಜೇವಾಲಾ ತೆಗೆದುಕೊಂಡಿರುವಂತೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಕದಲ್ಲಿ ಕೂಡಿಸಿಕೊಳ್ಳುವ ಸೌಜನ್ಯ ತೋರಿರುವಂತೆ ಸ್ಪಷ್ಟವಾಗಿ ಕಾಣುತ್ತದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಸಭೆಯ ಫೋಟೋ ಜತೆಗೆ ಟ್ವೀಟ್ ಮಾಡಿ, ರಾಜ್ಯದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೋ ಅಥವಾ ದೆಹಲಿಯ ಜನಪಥರಸ್ತೆಯ 10ನೇ ನಂಬರಿನ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕಾಂಗ್ರೆಸ್ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ? ಪಾಪ.. ಜನರ ಮತ ಹಂಗಿನ ಸರ್ಕಾರದ ಪಾಲಾಗಿದೆ. ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಫೋಟೋ ಹೊರಬಂದಿದ್ದು ಜಮೀರ್ ಅಹ್ಮದ್ ಖಾನ್ ಅವರ ಟ್ವೀಟ್`ನಿಂದ. ಹೀಗಾಗಿ ಸುರ್ಜೇವಾಲಾ ಅವರು ಇರಲಿಲ್ಲ ಎಂದು ನಿರಾಕರಿಸಲು ಸಾಧ್ಯವಾಗದ ಪರಿಸ್ಥಿತಿಗೆ ಜಮೀರ್ ತಂದಿಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳು ಪಕ್ಷದ ಮುಖಂಡರ ಸಭೆಯಲ್ಲಿ ಭಾಗವಹಿಸುವುದು ತಪ್ಪಾಗಲಿದೆ. ಈ ಹಿಂದೆ ಇಂಥಹ ನಿಲುವುಗಳ ವಿರುದ್ಧವೇ ಕಾಂಗ್ರೆಸ್ ಹೋರಾಟ ನಡೆಸಿತ್ತು. ಇದು ಆಡಳಿತ ವ್ಯವಸ್ಥೆಯ ಲೋಪ ಎಂದೇ ಪರಿಗಣಿತವಾಗಲಿದೆ. ಹೀಗಾಗಿಯೇ ಇದನ್ನು ರಾಜ್ಯಪಾಲರವರೆಗೂ ಕೊಂಡೊಯ್ಯಲು ಬಿಜೆಪಿ ನಿರ್ಧರಿಸಿದೆ. ಯಾಕೆ ಹೀಗೆ ಮಾಡಿದೆ, ತಲೆಯಲ್ಲಿ ಬುದ್ದಿ ಇರಲಿಲ್ವಾ ಎಂದು ಸುರ್ಜೇವಾಲಾ ಅವರೂ ಜಮೀರ್‍ಗೆ ಕ್ಲಾಸ್ ತೆಗೆದುಕೊಂಡಿದ್ದಾರಂತೆ.



