ಗುರುಪ್ರಸಾದ್. ಮಠ ಗುರು ಎಂದೇ ಖ್ಯಾತರಾಗಿದ್ದವರು. ನವರಸ ನಾಯಕ ಜಗ್ಗೇಶ್ ಅವರ ವೃತ್ತಿ ಜೀವನದ ಬೆಸ್ಟ್ ಚಿತ್ರಗಳಾದ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳನ್ನು ಕೊಟ್ಟವರು ಇದೇ ಗುರುಪ್ರಸಾದ್. ಅತ್ಯಂತ ಕಳಪೆ ಚಿತ್ರ ಎಂದೇ ಕರೆಸಿಕೊಂಡ ರಂಗನಾಯಕ ಚಿತ್ರದ ನಿರ್ದೇಶಕರೂ ಅದೇ ಗುರುಪ್ರಸಾದ್. ಆದರೆ ಗುರುಪ್ರಸಾದ್ ಸಾವಿನ ನಂತರ ಜಗ್ಗೇಶ್ ಏನೇನೋ ಮಾತನಾಡಿ ವಿಲನ್ ಆದರೆ, ಏನನ್ನೂ ಮಾತನಾಡದೆ, ಅವರ ಜೊತೆ ಯಾವ ಚಿತ್ರಗಳಲ್ಲೂ ಕೆಲಸ ಮಾಡದೇ ಇದ್ದ ದುನಿಯಾ ವಿಜಯ್ ಹೀರೋ ಆದರು.
ಮೊದಲಿಗೆ ವಿಜಯ್ ಅವರು ಮಾಡಿದ್ದೇನು ಅನ್ನೋದನ್ನ ನೋಡೋದಾದ್ರೆ, ಅಂತ್ಯಕ್ರಿಯೆ ನೆರವೇರುವ ವೇಳೆ ಗೊಂದಲ, ಸಮಸ್ಯೆ, ಅಡೆತಡೆಗಳ್ನನ್ನೆಲ್ಲ ನಿವಾರಿಸಿ ಅಂತ್ಯಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡಿದ್ದು ದುನಿಯಾ ವಿಜಯ್ ಎಂಬ ಮಾಹಿತಿ ಬಂದಿದೆ. ಗುರುಪ್ರಸಾದ್ ಅವರ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿತ್ತು. ಮೊದಲ ಪತ್ನಿ ಆರತಿ, ಮಗಳು ಹಾಗೂ ಎರಡನೇ ಪತ್ನಿ ಸುಮಿತ್ರಾ ಮತ್ತು ಪುಟ್ಟ ಮಗು ಆಸ್ಪತ್ರೆಯ ಹೊರಗೆ ಕಾಯುತ್ತಿದ್ದರು. ಗುರುಪ್ರಸಾದ್ ಅವರು ಮೃತಪಟ್ಟು ತುಂಬಾ ದಿನಗಳಾಗಿದ್ದ ಕಾರಣ ದೇಹ ಊದಿಕೊಂಡಿತ್ತು. ಮುಖವನ್ನೂ ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಪೋಸ್ಟ್ ಮಾರ್ಟಂ ಆದ ನಂತರವಂತೂ ಮುಖ ಮುಚ್ಚಲಾಗಿತ್ತು. ಈ ಮಧ್ಯೆ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ಯಾವ ಸಂಪ್ರದಾಯದಲ್ಲಿ ನಡೆಯಬೇಕು ಎಂಬ ಚರ್ಚೆಯಾಯ್ತು.
ಮೊದಲ ಪತ್ನಿ ಆರತಿಯವರಿಗೆ ಬ್ರಾಹ್ಮಣ ಸಂಪ್ರದಾಯಂತೆ ಅಂತ್ಯ ಸಂಸ್ಕಾರ ಆಗಬೇಕು ಅಂತ ಮನಸ್ಸಿತ್ತು. ಎರಡನೇ ಪತ್ನಿ ಸುಮಿತ್ರಾ ಗೌಡರ ಸಂಪ್ರದಾಯದಂತೆ ವಿಧಿ ವಿಧಾನಗಳು ನಡೆಯಬೇಕು ಎಂದುಕೊಂಡಿದ್ದರು. ಆದರೆ ದುನಿಯಾ ವಿಜಯ್ ಇಬ್ಬರಿಗೂ ಪರಿಸ್ಥಿತಿ ಅರ್ಥ ಮಾಡಿಸಿ, ಸಮಯ ಮೀರಿದೆ. ಬೇಗ ಸಂಸ್ಕಾರ ಮುಗಿಸೋಣ ಎಂದು ಒಪ್ಪಿಸಿದರಂತೆ.
ಅಲ್ಲದೆ ಚಿತಾಗಾರಕ್ಕೆ ತಮ್ಮ ಆಪ್ತರನ್ನೇ ಕಳಿಸಿ ಅಂತ್ಯಸಂಸ್ಕಾರಕ್ಕೆ ಬೇಕಿದ್ದ ತಯಾರಿಗಳನ್ನೆಲ್ಲ ಮಾಡಿಕೊಳ್ಳೋದಕ್ಕೆ ಸಹಾಯ ಮಾಡಿದ್ರಂತೆ. ಡಾಲಿ ಧನಂಜಯ, ನೀನಾಸಂ ಸತೀಶ್ ಸೇರಿದಂತೆ ಕೆಲವೇ ಕೆಲವರು ದುನಿಯಾ ವಿಜಯ್ ಅವರೊಂದಿಗೆ ಕೊನೆಯ ಕ್ಷಣದವರೆಗೂ ಜೊತೆಗಿದ್ದು, ಅಂತ್ಯ ಸಂಸ್ಕಾರ ಪೂರೈಸಿಕೊಟ್ಟಿದ್ದಾರೆ. ಈ ಮೂಲಕ ದುನಿಯಾ ವಿಜಯ್ ಗುರುಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಸರಾಗವಾಗಿ ನಡೆಯುವಂತೆ ಮಾಡಿ ಹೀರೋ ಆಗಿದ್ದಾರೆ.
ಆದರೆ, ಅವರದ್ದೇ ಚಿತ್ರಗಳಲ್ಲಿ ಹೀರೋ ಆಗಿದ್ದ ಜಗ್ಗೇಶ್ ವಿಲನ್ ಆಗಿದ್ದು ಸಾವಿನ ನಂತರ ಗುರುಪ್ರಸಾದ್ ಅವರ ಬಗ್ಗೆ ಆಡಿದ ಮಾತುಗಳಿಗೆ. ಗುರುಪ್ರಸಾದ್ ಅವರ ಸಾವಿನ ನಂತರ ಜಗ್ಗೇಶ್ ಮಾಧ್ಯಮಗಳಲ್ಲಿ ಗುರು ಅವರ ವ್ಯಕ್ತಿತ್ವದ ಬಗ್ಗೆ ಆಡಿದ ಮಾತುಗಳ ಪರಿಣಾಮ, ಲಾಯರ್ ಜಗದೀಶ್, ಹುಚ್ಚ ವೆಂಕಟ್ ತರದವರೂ ಜಗ್ಗೇಶ್ʻಗೆ ಬುದ್ದಿ ಹೇಳೋ ಹಾಗೆ ಆಗಿದೆ.
ಲಾಯರ್ ಜಗದೀಶ್ ಅವರಂತೂ ಇದೇನಾ ನಿನ್ನ ಸಂಸ್ಕೃತಿ, ನಿನ್ನ ಮನಸ್ಥಿತಿ ಇಷ್ಟೊಂದು ವಿಕೃತವಾ.. ನೀನೊಬ್ಬ ಮನುಷ್ಯನೇ ಅಲ್ಲ. ನಿನ್ನನ್ನು ನೀನು ರಾಘವೇಂದ್ರ ಸ್ವಾಮಿಗಳ ಭಕ್ತ ಅಂತ ಹೇಳ್ಕೊಳ್ತೀಯ, ನಾಚ್ಕೆ ಆಗಲ್ವಾ.. ಎಂದೆಲ್ಲ ಬೈದಿದ್ದಾರೆ. ಅಷ್ಟೇ ಅಲ್ಲ, ಜಗ್ಗೇಶ್ ಅವರ 25 ವರ್ಷದ ಹಿಂದಿನ ಕಥೆ, ಜಗ್ಗೇಶ್ ಅವರ ವ್ಯಕ್ತಿತ್ವವನ್ನೂ ಕುರಿತು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಇನ್ನು ಹುಚ್ಚ ವೆಂಕಟ್ ಕೂಡಾ ಜಗ್ಗೇಶ್ʻಗೆ ಬುದ್ದಿವಾದ ಹೇಳಿದ್ದಾರೆ. ದಯವಿಟ್ಟು ಈ ರೀತಿ ಮಾತನಾಡ್ಬೇಡಿ ಸರ್ ಅಂತಾ ಹುಚ್ಚ ವೆಂಕಟ್ ಕೂಡಾ ಹೇಳಿದ್ದಾರೆ.
ಇನ್ನು ಜಗ್ಗೇಶ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರರಂಗದ ಪ್ರೇಕ್ಷಕ ಅಭಿಮಾನಿಗಳು ಕೂಡಾ ಸಿಡಿಮಿಡಿಗೊಂಡಿದ್ದಾರ. ಜಗ್ಗೇಶ್ ಅವರಿಂದ ಇಂಥಾದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಸಿಟ್ಟು, ಕೋಪ ಇದ್ದರೆ ಬದುಕಿದ್ದಾಗ ಮಾತನಾಡಬೇಕಿತ್ತು. ಆಗ ಗುರುಪ್ರಸಾದ್ ಅವರೇ ಉತ್ತರ ಕೊಡ್ತಿದ್ರು. ಸತ್ತ ಮೇಲೆ ಅವರ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಜಗ್ಗೇಶ್ ಅವರನ್ನು ಟೀಕಿಸಿದ್ದಾರೆ.
ಅಂದಹಾಗೆ ಜಗ್ಗೇಶ್ ಕೇವಲ ನಟ, ನಿರ್ಮಾಪಕ ಅಲ್ಲ. ಗಾಂಧಿನಗರದ ಆಚೆಗೆ ಬೆಳೆದಿದ್ದಾರೆ. ಜಗ್ಗೇಶ್ ಸಂಸತ್ತಿನ ಗೌರವಾನ್ವಿತ ಸದಸ್ಯ. ಪ್ರಸ್ತುತ ರಾಜ್ಯಸಭೆಯಲ್ಲಿ ಸಂಸದ.



