ಕೊಲೆಯಾದ ರೇಣುಕಾಸ್ವಾಮಿ, ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೇ ಕೊಲೆಯಾದ ಎನ್ನುವುದು ಈವರೆಗಿನ ಮಾಹಿತಿ. ದರ್ಶನ್ & ಗ್ಯಾಂಗ್ ಜೈಲು ಸೇರಿಯಾಗಿದೆ. ೧೩ ಮಂದಿ ಪರಪ್ಪನ ಅಗ್ರಹಾರದಲ್ಲಿದ್ದರೆ, ನಾಲ್ವರು ತುಮಕೂರು ಜೈಲಲ್ಲಿದ್ದಾರೆ. ಇಷ್ಟೆಲ್ಲದರ ನಡುವೆಯೂ ಕೊಲೆಯಾದ ರೇಣುಕಾಸ್ವಾಮಿಯ ಮೊಬೈಲ್ ಸಿಕ್ಕಿಲ್ಲ. ಹೀಗಾಗಿ ನಕಲಿ ಸಿಮ್ ಕಾರ್ಡ್ ಪಡೆದು ಮೇಯ್ಲ್ ಐಡಿ ಸೇರಿದಂತೆ ಸೋಷಿಯಲ್ ಮೀಡಿಯಾ ಅಕೌಂಟುಗಳನ್ನು ಪುನರ್ ಸ್ಥಾಪಿಸುವ, ರೀ-ಎಸ್ಟಾಬ್ಲಿಷ್ ಮಾಡುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ ರೇಣುಕಾಸ್ವಾಮಿ ಫೇಕ್ ಅಕೌಂಟಿನಲ್ಲಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆಯೇ ಇಲ್ಲವೇ ಎಂದು ಇನ್ಸ್‌ಟಾಗ್ರಾಂಗೆ ಮಾಹಿತಿ ಕೇಳಲಾಗಿದೆ. ಇದರ ನಡುವೆ ದರ್ಶನ್ʻಗೆ ಕಂಟಕವಾಗುತ್ತಿರುವುದು ಅಭಿಮಾನಿಗಳು. ಹೇಗೆ ಅಂತೀರಾ..
ಮೊದಲು ಇನ್‌ಸ್ಟಾಗ್ರಾಂ ಕಥೆ ನೋಡೋಣ. ಅಲ್ಲಿ ಗೌತಮ್ ಹೆಸರಿನ ನಕಲಿ ಖಾತೆ ತೆರೆದು ನಟ ದರ್ಶನ್ ಪ್ರಿಯತಮೆ ಪವಿತ್ರಾ ಗೌಡಳಿಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪವಿದೆ. ಇದೇ ಕಾರಣಕ್ಕೆ ಚಿತ್ರದುರ್ಗದಿಂದ ಆತನನ್ನು ಅಪಹರಿಸಿ ಬಳಿಕ ಪಟ್ಟಣಗೆರೆ ಶೆಡ್‌ಗೆ ಕರೆತಂದು ಹಲ್ಲೆ ನಡೆಸಿ ದರ್ಶನ್ ಗ್ಯಾಂಗ್ ಹತ್ಯೆಗೈದ ಆರೋಪ ಬಂದಿದೆ. ಈ ಹತ್ಯೆ ಬಳಿಕ ಮೃತನ ಮೊಬೈಲ್ ಅನ್ನು ಸುಮನಹಳ್ಳಿ ಸಮೀಪದ ಮೋರಿಗೆ ಆರೋಪಿಗಳು ಎಸೆದಿದ್ದರು. ಹೀಗಾಗಿ ಮೊಬೈಲ್ ಸಿಗದ ಕಾರಣಕ್ಕೆ ಇನ್‌ಸ್ಟಾಗ್ರಾಂನಲ್ಲಿ ಮೃತನ ಸೃಷ್ಟಿಸಿದ್ದ ನಕಲಿ ಖಾತೆ ಗಳ ಸಂದೇಶ ಕುರಿತು ಮಾಹಿತಿ ಕೋರಿ ಪೊಲೀಸರು ಪತ್ರ ಬರೆದಿದ್ದಾರೆ.
ವಿಚಿತ್ರವೆಂದರೆ.. ಇನ್ಸ್‌ಟಾಗ್ರಾಂನವರು ಆ ದಾಖಲೆ ಕೊಟ್ಟರೆ, ಮಾಹಿತಿಯನ್ನು ಅಧಿಕೃತಗೊಳಿಸಿದರೆ, ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ಎನ್ನುವುದು ನಿಜವಾದರೆ ಮಾತ್ರ, ದರ್ಶನ್ ಗ್ಯಾಂಗ್ ವಿರುದ್ಧದ ಕೇಸಿಗೆ ಮಹತ್ವ ಬರಲಿದೆ. ಆಂದರೆ ಕೊಲೆಯ ಉದ್ದೇಶ ಬಹಿರಂಗವಾಗಲಿದೆ. ಉದ್ದೇಶವನ್ನೇ ಕೋರ್ಟಿನ ಎದುರು ಸಾಬೀತು ಮಾಡದಿದ್ದರೆ, ದರ್ಶನ್ ಆಗಲೀ, ಪವಿತ್ರಾ ಗೌಡ ಅವರಾಗಲೀ ಸುಲಭವಾಗಿ ತಪ್ಪಿಸಿಕೊಳ್ಳುವ ಅವಕಾಶಗಳಿರುತ್ತವೆ. ಕೇಸ್ ವೀಕ್ ಆಗುವ ಸಂಭವವೂ ಇರುತ್ತದೆ. ಆದರೆ ಪೊಲೀಸರ ಮನವಿಗೆ ಇನ್ಸ್‌ಟಾಗ್ರಾಂನವರು ಉತ್ತರ ಕೊಟ್ಟಿದ್ದಾರೆಯೇ.. ಇಲ್ಲವೇ ಎನ್ನುವುದು ಖಚಿತವಾಗಿಲ್ಲ.
ಈ ಹಿಂದೆ ಇದ್ದ ಕಾನೂನುಗಳ ಪ್ರಕಾರ ಭಾರತದಲ್ಲಿ ಆಕ್ಟಿವ್ ಇರುವ ಯಾವುದೇ ಸೋಷಿಯಲ್ ಮೀಡಿಯಾಗಳೂ, ಭಾರತದ ಕಾನೂನು ಪಾಲಿಸುತ್ತಿರಲಿಲ್ಲ. ಆದರೆ, ಈಗ ಹಾಗಿಲ್ಲ. ಕಾನೂನಿನ ಹಿಡಿತಕ್ಕೆ ಬಂದಿವೆ. ಆದರೂ.. ಇನ್ನೂ ಕೊಂಕು ಮುಂದುವರೆಯುತ್ತಲೇ ಇದೆ. ಈ ಹಂತದಲ್ಲಿ ಏನಾದರೂ ಕೇಸ್ ವೀಕ್ ಆದರೆ, ದರ್ಶನ್ & ಗ್ಯಾಂಗ್ ನಿರಾಳತೆ ಅನುಭವಿಸುವುದು ಖಂಡಿತಾ.
ದರ್ಶನ್ ಅಭಿಮಾನಿಗಳೇ ದರ್ಶನ್ʻಗೆ ಆಪತ್ತು..!
ಆದರೆ ಇಲ್ಲಿ ಆಪತ್ತು ಅನುಭವಿಸುತ್ತಿರುವುದು ತನ್ನದೇ ಅಭಿಮಾನಿಗಳಿಂದ. ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ. ಅಲ್ಲದೆ ಆರೋಪಿಗಳಾಗಿರುವವರೆಲ್ಲ ದರ್ಶನ್ ಅಭಿಮಾನಿಗಳೇ. ಆಪ್ತರೇ. ಪೊಲೀಸರು ಈಗಾಗಲೇ ಕೋರ್ಟಿನಲ್ಲಿ ರಿಮ್ಯಾಂಡ್ ಕಾಪಿಯಲ್ಲಿ ದರ್ಶನ್ ತನ್ನ ಅಭಿಮಾನಿಗಳಿಂದ ಪೊಲೀಸ್ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಕೊಲೆ ಆರೋಪ ಹೊತ್ತಿರುವವರೆಲ್ಲ ದರ್ಶನ್ ಮೇಲಿನ ಪ್ರೀತಿಗಾಗಿ, ದುಡ್ಡಿಗಾಗಿ ಕೇಸು ತಲೆ ಮೇಲೆ ಹಾಕ್ಕೊಂಡಿದ್ದಾರೆ ಎನ್ನುವುದು ಎಸ್ಟಾಬ್ಲಿಷ್ ಆಗಿದೆ.
ಇದರ ನಡುವೆ ದರ್ಶನ್ ವಿರೋಧಿಗಳನ್ನು ಹಣಿಯುವ ಭರದಲ್ಲಿ ದರ್ಶನ್ ಅಭಿಮಾನಿಗಳು ಅತ್ಯುತ್ಸಾಹದಿಂದ ಹಾಕುವ ಒಂದೊಂದು ಪೋಸ್ಟ್ ಕೂಡಾ ದರ್ಶನ್ ಬಿಡುಗಡೆಗೆ, ಜಾಮೀನು ಪಡೆಯುವುದಕ್ಕೆ ಅಡ್ಡಿಯಾದರೂ ಆಶ್ಚರ್ಯವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಹೊರಗಡೆ ದರ್ಶನ್ ಅಭಿಮಾನಿಗಳಿಂದ ಈ ರೀತಿಯ ವರ್ತನೆ ಇದೆ. ಜಾಮೀನು ಕೊಡಬೇಡಿ, ನಮ್ಮ ತನಿಖೆಗೆ ಅಡ್ಡಿಯಾಗುತ್ತೆ ಎಂದು ಕೋರ್ಟ್ ಎದುರು ಹೇಳಿದರೆ, ಅದು ಮನ್ನಣೆ ನೀಡುವ ಸಂಭವ ಜಾಸ್ತಿ ಇದೆ. ಅಭಿಮಾನಿಗಳೇ ಆತಂಕವಾಗಿ ಕಾಡುವ ವಿಚಿತ್ರ ಪರಿಸ್ಥಿತಿ ಇದು.



