ಬಿಜೆಪಿ, ನರೇಂದ್ರ ಮೋದಿ ವಿರುದ್ಧ ವೋಟ್ ಚೋರಿ, ಮತಗಳ್ಳತನ ಆರೋಪ ಮಾಡಿ, ಅದನ್ನೇ ದೇಶವ್ಯಾಪಿ ಆಂದೋಲನ ಮಾಡಿದ್ದ ಕಾಂಗ್ರೆಸ್ಸಿಗೆ ಈಗ ಮುಜುಗರ, ನಾಚಿಕೆಯ ಸಮಯ. ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರ ಅವರು ಆಯ್ಕೆಯೇ ಅಸಿಂಧು ಎಂದು ಹೇಳಿದೆ ಹೈಕೋರ್ಟ್. ನಂಜೇಗೌಡರು ಗೆದ್ದಿದ್ದು ತಪ್ಪು ಲೆಕ್ಕದಿಂದ ಎಂದು ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಅರ್ಜಿ ಸಲ್ಲಿಸಿದ್ದರು. ವಿಧಾನಸಭೆ ಚುನಾವಣೆ ಮತ ಎಣಿಕೆ ವೇಳೆ ಲೋಪವಾಗಿದೆ. ಹೀಗಾಗಿ ಶಾಸಕರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿದ್ದರು. ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಆಯ್ಕೆಯೇ ಅಸಿಂಧು ಎಂದು ಹೇಳಿದೆ.
ಕಾರಣ ಇಷ್ಟೇ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರ ವಿರುದ್ಧ ಕೇವಲ 248 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಮತ ಎಣಿಕೆ ವೇಳೆ ಫಾರಂ-17ಸಿ ಭಾಗ 02ರ ದಾಖಲೆಗಳಲ್ಲಿ, ಏಜೆಂಟರ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಜೊತೆಗೆ ಮತ ಎಣಿಕೆ ವೇಳೆ ಹಿನ್ನಡೆ, ಮುನ್ನಡೆ ತೂಗುಯ್ಯಾಲೆಯಂತೆ ಓಡಾಡುತ್ತಿತ್ತು. ಅರ್ಜಿದಾರರ ಎಣಿಕೆ ಏಜೆಂಟ್ ಎಂದು ಪಡೆದಿರುವ ಇಬ್ಬರು ಕಾಲ್ಪನಿಕ ವ್ಯಕ್ತಿಗಳು ಅಂದರೆ, ಅಸ್ಥಿತ್ವದಲ್ಲೇ ಇಲ್ಲ ಎಂಬ ಅನುಮಾನ ಬಂದಿತ್ತು. ಒಂದು ಕೋಣೆಯಲ್ಲಿ ನಡೆಯಬೇಕಿದ್ದ ಮತ ಎಣಿಕೆ, ಎರಡು ಕೊಠಡಿಗಳಲ್ಲಿ ನಡೆದಿತ್ತು ಈ ಎಲ್ಲವನ್ನೂ ಪ್ರಶ್ನೆ ಮಾಡಿ ಮಂಜುನಾಥ್ ಗೌಡ ಕೋರ್ಟ್ ಮೆಟ್ಟಿಲೇರಿದ್ದರು.
ಅದರ ಪ್ರಕಾರ ಚುನಾವಣೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ಎಲೆಕ್ಟ್ರಾನಿಕ್ ಡೇಟಾ, ಇವಿಎಂ ಹಾಗೂ ಪೋಸ್ಟಲ್ ವೋಟಿಂಗ್ ದಾಖಲೆಗಳು, ಸಿಸಿಟಿವಿ ದೃಶ್ಯಗಳನ್ನೆಲ್ಲ ಕೋರ್ಟ್ ಸುಪರ್ದಿಗೆ ಒಪ್ಪಿಸಲು ಮನವಿ ಮಾಡಿದ್ದರು. ಆದರೆ, ಚುನಾವಣಾಧಿಕಾರಿ ಸಿಸಿಟಿವಿ ದೃಶ್ಯಗಳನ್ನು ನೀಡುವಲ್ಲಿ ವಿಫಲವಾಗಿದ್ದಾರೆ.
ಹೀಗಾಗಿ ಹೊಸದಾಗಿ ಮರು ಮತ ಎಣಿಕೆ ನಡೆಸಲು ಆದೇಶ ನೀಡಿರುವ ಹೈಕೋರ್ಟ್, ಶಾಸಕ ಕೆ.ವೈ ನಂಜೇಗೌಡ ಆಯ್ಕೆ ಅಸಿಂಧು ಎಂದು ಘೋಷಿಸಿದೆ. 4 ವಾರಗಳಲ್ಲಿ ಹೈಕೋರ್ಟ್ ಮರು ಮತ ಎಣಿಕೆ ನಡೆಸಲು ಆದೇಶ ನೀಡಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ, ಹಾಗಾಗಿ ಅವರ ವಿರುದ್ಧ ಸಹ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಮತ ಎಣಿಕೆ ವೇಳೆ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಆರೋಪಿಸಿದ್ದರು.
ಹೈಕೋರ್ಟ್ ವಿರುದ್ಧ ನಂಜೇಗೌಡ ಅಸಮಾಧಾನ :
ಹೈಕೋರ್ಟ್ ಆದೇಶ ಸಮಾಧಾನ ತಂದಿಲ್ಲ. ಮರು ಮತ ಎಣಿಕೆ ಮಾಡಿಸಿ ಎಂದರೆ ನಾನು ಸಿದ್ಧ. ಅದು ಕಾನೂನು ಬದ್ಧ. ಆದರೆ, ಆಯ್ಕೆಯೇ ಅಸಿಂಧು ಎಂದು ಘೋಷಿಸಿರುವ ಸರಿಯಲ್ಲ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವವರೆಗೆ 30 ದಿನಗಳ ವರೆಗೆ ತಡೆ ನೀಡಲು ನಂಜೇಗೌಡ ಪರ ವಕೀಲರು ಮನವಿ ಮಾಡಿದ್ದಾರೆ. ಇದರಿಂದ ಶಾಸಕ ನಂಜೇಗೌಡಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ತನ್ನದೇ ತೀರ್ಪಿಗೆ ತಡೆ 30 ದಿನ ತಡೆ ನೀಡಿದ್ದು, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.
ಚುನಾವಣಾಧಿಕಾರಿಗಳು, ಆಯೋಗದ ವಿರುದ್ಧವೇ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ, ತಮ್ಮದೇ ಪಕ್ಷದ ಒಬ್ಬ ಶಾಸಕರೊಬ್ಬರು ರಿಸಲ್ಟ್ ತಿರುಚಿದ ಆರೋಪದಲ್ಲಿ ಶಾಸಕ ಸ್ಥಾನ ಕಳೆದುಕೊಂಡಿರುವುದು ಮುಜುಗರದ ವಿಷಯವೇ. ಸುಪ್ರೀಂಕೋರ್ಟಿನ ಮೊರೆ ಹೋದರೆ, ಮತ್ತೆ ವಿಚಾರಣೆ ಶುರುವಾದರೆ ಶಾಸಕ ಸ್ಥಾನ ಮತ್ತೆ ಸಿಂಧುತ್ವ ಪಡೆದುಕೊಳ್ಳಬಹುದು. ಆದರೆ ಒಮ್ಮೆ ಹೋದ ಗೌರವ.. ಹೋದಂತೆಯೇ ಎನ್ನುತ್ತಿದ್ದಾರೆ ಬಿಜೆಪಿ ಲೀಡರ್ಸ್.



