ಡಿಕೆ ಶಿವಕುಮಾರ್ ಅವರ ದೊಡ್ಡ ಮಗಳು ಐಶ್ವರ್ಯ. ಅವರೀಗ ಐಶ್ವರ್ಯಾ ಶಿವಕುಮಾರ್ ಅಲ್ಲ, ಐಶ್ವರ್ಯ ಹೆಗಡೆ. ಶಿಕ್ಷಣೋದ್ಯಮಿ. ಅಪ್ಪ ಡಿಸಿಎಂ. ಚಿಕ್ಕಪ್ಪ ಮಾಜಿ ಸಂಸದ. ಪತಿಯ ತಾತ ಎಸ್ ಎಂ ಕೃಷ್ಣ, ಕರ್ನಾಟಕದ ಯಶಸ್ವಿ ಮುಖ್ಯಮಂತ್ರಿಯಾಗಿದ್ದವರು. ಹೀಗಿರುವಾಗ ಐಶ್ವರ್ಯಾ ಹೆಗಡೆ ಅವರಿಗೆ ರಾಜಕೀಯಕ್ಕೆ ಬರೋ ಆಸೆ ಇದೆಯಾ.. ಇಂಥಾದ್ದೊಂದು ಪ್ರಶ್ನೆ ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಪ್ರಸ್ತಾಪವಾಯ್ತು. ಅದಕ್ಕೆ ಉತ್ತರ ನೀಡಿರುವ ಐಶ್ವರ್ಯಾ ʻಇಲ್ಲʼ ಎಂದು ಸ್ಪಷ್ಟವಾಗಿ ಹೇಳಿದ್ಧಾರೆ.
ನನಗೆ ರಾಜಕೀಯಕ್ಕೆ ಬರುವ ಉದ್ದೇಶ ಇಲ್ಲ. ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ದೇಶಕ್ಕೆ ಅದು ಈಗ ಅಗತ್ಯವಿದೆ, ನನಗೆ ರಾಜಕೀಯ ಸೇರುವ ಉದ್ದೇಶ ಇಲ್ಲ. ನಾನು ಶಿಕ್ಷಣೋದ್ಯಮಿಯಾಗಿದ್ದೇನೆ. ನನಗೆ ಅದರಲ್ಲಿಯೇ ಖುಷಿ ಸಿಗುತ್ತಿದೆ. ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಈಗ ಅಗತ್ಯವಿರುವ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಅಪ್ಪ ಯಾವತ್ತಿಗೂ ರಾಜಕೀಯದ ಬಗ್ಗೆ ಮಾತನಾಡಿಲ್ಲ. ನಾವು ಮೂವರು ಮಕ್ಕಳು. ಮೂರು ಜನ ಮಕ್ಕಳಿಗೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನೀವು ಬೆಳೆಯಿರಿ ಎಂದಿದ್ದಾರೆ. ನಮ್ಮ ಅಪ್ಪ ಇರಬಹುದು, ನಮ್ಮ ಚಿಕ್ಕಪ್ಪ ಇರಬಹುದು.. ಇಬ್ಬರೂ ಕೂಡಾ ರಾಜಕೀಯದ ಬಗ್ಗೆ ಹೇಳಿಲ್ಲ ಎಂದಿರೋ ಐಶ್ವರ್ಯಾ ಹೆಗಡೆ ಇಷ್ಟಕ್ಕೂ ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬಂದ್ರೆ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ.
ನಮಗೆ ಯಾವತ್ತೂ ರಾಜಕೀಯಕ್ಕೆ ಬರ್ಬೇಕು ಅಂತ ಅನ್ಸಿಲ್ಲ. ನನಗೆ ರಾಜಕೀಯದ ಬಗ್ಗೆ ಗೊತ್ತಾಗಿದ್ದೆ ನಮ್ಮ ಅಪ್ಪ ಜೈಲಿಗೆ ಹೋದಾಗ. ನಾನು ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇವತ್ತು ನಾವು ದೇಶದ ಬಗ್ಗೆ ಯೋಚನೆ ಮಾಡಬೇಕು. ದೇಶ ಅಭಿವೃದ್ಧಿಯಾದರೆ ನಾನು ಅಥವಾ ಯಾರಾದರೂ ಕೂಡ ಅಭಿವೃದ್ಧಿ ಹೊಂದಬಹುದು. ನನ್ನ ಮುಖ್ಯ ಉದ್ದೇಶ ಈಗೀನ ಯುವ ಜನತೆಗೆ ಶಿಕ್ಷಣವನ್ನ ಕೊಡುವುದು. ಶಿಕ್ಷಣ ತುಂಬಾ ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ತಮ್ಮ ತಂದೆ ಸಿಎಂ ಆಗಬೇಕು. ಅದು ಅವರ ಜನರ ಕನಸು ಎಂದಿದ್ದಾರೆ. ನಮ್ಮ ಅಪ್ಪ ಜೈಲಿಂದ ವಾಪಸ್ ಬಂದಾಗ ಅವರು ಮೊದಲು ನೋಡಿದ್ದು ನಮ್ಮನ್ನಲ್ಲ. ಅಮ್ಮ, ಮಕ್ಕಳನ್ನು ನೋಡುವ ಮೊದಲು ಧನ್ಯವಾದ ಹೇಳಿದ್ದು ಅವರ ಬೆನ್ನಿಗೆ ನಿಂತಿದ್ದ ಜನರಿಗೆ. ನಮ್ಮ ಅಪ್ಪ ಜೈಲಿನಿಂದ ಬಿಡುಗಡೆ ಆದ ಬಳಿಕ ಕುಟುಂಬದಲ್ಲಿ ಯಾರೊಬ್ಬರಿಗೂ ಕರೆ ಮಾಡಲಿಲ್ಲ. ಎರಡು ದಿನ ನಾವು ನಮ್ಮ ತಂದೆಯೊಂದಿಗೆ ಮಾತನಾಡಲು ಆಗಲಿಲ್ಲ. ಇದು ಬೇಜಾರಾಯ್ತು. ಆದರೆ ಅವರು ʻʻಮಗಳೇ ನಾನು ಜೈಲಲ್ಲಿದ್ದಾಗ ಊಟ- ನೀರು ಬಿಟ್ಟು ಜೈಲಿನ ಮುಂದೆ ಜನ ನನಗಾಗಿ ಕಾಯುತ್ತಾ ನಿಂತಿದ್ದರು. ಕಾಲಿಗೆ ಚಪ್ಪಲಿ ಇಲ್ಲದೇ ವಿಮಾನ ಏರಿ ಬಂದಿದ್ದಾರೆ. ಅವರಿಗಾಗಿ ನಾನು ಇರದೇ ಕುಟುಂಬಕ್ಕಾಗಿ ಹೇಗೆ ಓಡೋಡಿ ಬರಲಿʼʼ ಎಂದು ನನ್ನ ಬಳಿ ಹೇಳಿಕೊಂಡರು ಎಂದು ಐಶ್ವರ್ಯ ತಿಳಿಸಿದ್ದಾರೆ.
ಒಟ್ಟಾರೆ ಸಾರಾಂಶ ಎಂದರೆ.. ಐಶ್ವರ್ಯ ಅವರಿಗೆ ರಾಜಕೀಯಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲ. ಬಂದರೂ ಬರಬಹುದು. ಇನ್ನೊಂದು ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು ಅನ್ನೋದು ಐಶ್ವರ್ಯ ಅವರ ಆಸೆ.



