ಕೆಲವೇ ದಿನಗಳ ಹಿಂದೆ ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದ 13 ಮಂದಿ ಸಾವನ್ನಪ್ಪಿದ್ದರು. ಜೂನ್ 28ರಂದು ಸಂಭವಿಸಿದ ರಣಭೀಕರ ಅಪಘಾತ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಹೊಸ ಟಿಟಿ ತೆಗೆದುಕೊಂಡಿದ್ದ ಸಂಭ್ರಮದಲ್ಲಿ ಕುಟುಂಬದವರನ್ನೆಲ್ಲ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ವಾಪಸ್ ಬರುತ್ತಿದ್ದಾಗ ಸಂಭವಿಸಿದ್ದ ದುರಂತ ಅದು. ಆ ಕುಟುಂಬದವರ ನೋವು ವರ್ಣಿಸಲು ಸಾಧ್ಯವಿಲ್ಲ.
ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಸಂತ್ರಸ್ತರ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. 13 ಜನರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿದ್ದಾರೆ.
ದುರ್ಘಟನೆ ನಡೆದಾಗಿನಿಂದ ಇಲ್ಲಿಗೆ ಬರುವ ಧೈರ್ಯ ಮಾಡಲು ನನಗೆ ತುಂಬ ಕಷ್ಟ ಆಯಿತು. 13 ಜನರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರೇ ನೀಡಬೇಕು. ಅವರಿಗೆ ಆಗಿರುವ ನಷ್ಟವನ್ನು ನಾವು ಯಾರೂ ಕೂಡ ತುಂಬಲು ಸಾಧ್ಯವಿಲ್ಲ. ಅವರ ನೆರವಿಗೆ ಬರಲು ನಮಗೆ ಅವಕಾಶ ಇದೆ ಅಷ್ಟೇ. ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದಿದ್ದಾರೆ ಗೀತಾ.
ಇದೇ ವೇಳೆ ಎಮ್ಮೆಹಟ್ಟಿ ಗ್ರಾಮದ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೀತಾ ಮಾನಸಾ ಎಂಬ ಹುಡುಗಿ ಈ ಅಪಘಾತದಲ್ಲಿ ಮೃತಳಾದಳು. ಆಕೆ ಅಥ್ಲೀಟ್ ಆಗಿದ್ದಳು. ಐಎಎಸ್ಗೆ ಓದುತ್ತಿದ್ದಳು. ಆಕೆ ಹೋಗಿದ್ದು ದೊಡ್ಡ ನಷ್ಟ. ತಾಯಿಯನ್ನು ಕಳೆದುಕೊಂಡ ಮಕ್ಕಳು ಇದ್ದಾರೆ. ತಂದೆ ಸ್ಥಿತಿ ಗಂಭೀರವಾಗಿದೆ. ಈ ಊರಿನ ಗ್ರಾಮಸ್ಥರು ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಕಷ್ಟದಲ್ಲಿ ಒಬ್ಬರಿಗೆ ಮತ್ತೊಬ್ಬರು ನೆರವಾಗಬೇಕು ಎಂಬುದಕ್ಕೆ ಎಮ್ಮೆಹಟ್ಟಿ ಗ್ರಾಮದವರು ಮಾದರಿ ಆಗಿದ್ದಾರೆ. ಯಾವಾಗಲೂ ನಾವು ಅವರ ಜೊತೆಗೆ ನಿಲ್ಲುತ್ತೇವೆ ಎಂದಿದ್ದಾರೆ.
ಶಿವಣ್ಣ ಕೂಡಾ ಎಮ್ಮೆಹಟ್ಟಿ ಗ್ರಾಮಸ್ಥರ ಒಗ್ಗಟ್ಟನ್ನು ಪ್ರಶಂಸೆ ಮಾಡಿದ್ದಾರೆ. ಮೃತರ ಕುಟುಂಬದವರಿಗೆ ಹಣ ಕೊಡುವುದು ಸುಲಭ. ಆದರೆ ನೋವು ಸಹಿಸುವ, ಹೊಸ ಬದುಕಿನ ಧೈರ್ಯ ಕೊಡುವುದು ಕಷ್ಟ. ಎಮ್ಮೆಹಟ್ಟಿ ಗ್ರಾಮಸ್ಥರು ಆ ಕೆಲಸ ಮಾಡ್ತಿದ್ಧಾರೆ ಎಂದಿದ್ದಾರೆ ಶಿವ ರಾಜ್ ಕುಮಾರ್.
ಹೌದು, ಹಣವಿದ್ದವರು ನೆರವು ನೀಡುತ್ತಾರೆ. ಅಮ್ಮಮ್ಮಾ ಎಂದರೆ ಒಂದು ಗಂಟೆ ಕುಳಿತು ಧೈರ್ಯ ಹೇಳುತ್ತಾರೆ. ಆದರೆ, ನಿಜವಾಗಿಯೂ ಧೈರ್ಯ ತುಂಬುವವರು ನೆರೆ ಹೊರೆಯವರು. ಕುಟುಂಬದ ಆಪ್ತಮಿತ್ರರು. ಆ ಕೆಲಸ ಮಾಡುತ್ತಿರುವುದು ಎಮ್ಮೆಹಟ್ಟಿ ಗ್ರಾಮಸ್ಥರು. ಶಿವಣ್ಣ ಮತ್ತು ಗೀತಾ ಶಿವಣ್ಣ ಹೊಗಳಿರುವುದು ಅವರನ್ನೇ.



