ದೊಡ್ಮನೆಯಲ್ಲಿ ಎದ್ದು ಕಾಣುವುದು ಒಗ್ಗಟ್ಟು. ಅಣ್ಣ ತಮ್ಮಂದಿರ ಮಧ್ಯೆ ಇರುವ ಪ್ರೀತಿ ಮತ್ತು ಬಾಂಧವ್ಯ. ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ಅವರ ನಡುವೆ ಇದ್ದ ಬಾಂಡಿಂಗ್, ಅವರ ಮಕ್ಕಳಿಗೂ ಬಂದಿದೆ. ಇದೇ ವಾರ ರಿಲೀಸ್ ಆಗ್ತಾ ಇರೋ ಒಂದು ಸರಳ ಪ್ರೇಮಕಥೆ ಪ್ರೀರಿಲೀಸ್ ಈವೆಂಟ್ʻನಲ್ಲಿ ಅದು ಎದ್ದು ಕಂಡಿತು.
ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ದೊಡ್ಮನೆಯ ಹಲವು ಅತಿಥಿಗಳು ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಪತ್ನಿ. ವಿನಯ್ ರಾಜ್ಕುಮಾರ್ ಸಹೋದರ ಯುವ ರಾಜ್ಕುಮಾರ್, ಶ್ರೀಮುರಳಿ ಇನ್ನೂ ಅನೇಕರು ಆಗಮಿಸಿದ್ದರು. ಇನ್ನೂ ಮೊದಲ ಸಿನಿಮಾದ ಚಿತ್ರೀಕರಣದಲ್ಲಿರುವ ಯುವ ರಾಜ್ಕುಮಾರ್ ಅಣ್ಣನ ಸಿನಿಮಾಕ್ಕೆ ಹೃದಯ ತುಂಬಿ ಶುಭ ಹಾರೈಕೆಗಳನ್ನು ನೀಡಿದರು. ಯುವ ರಾಜ್ಕುಮಾರ್ ಮಾತುಗಳು ಸಭೆಯ ಗಮನ ಸೆಳೆದವು.
ನನಗೆ ಸಿಂಪಲ್ ಸುನಿ ಕಥೆ ಹೇಳೋ ಶೈಲಿ ಇಷ್ಟ. ಅವರು ಕಥೆ ನರೇಟ್ ಮಾಡುವಾಗಲೂ ಸಿನಿಮಾ ನೋಡುತ್ತಿದ್ದೇವೇನೋ ಎಂಬಂತೆ ಕಥೆ ಹೇಳ್ತಾರೆ. ಈ ಚಿತ್ರದಲ್ಲೂ ಚೆಂದದ ಕಥೆ ಹೇಳಿದ್ಧಾರೆ. ಒಳ್ಳೆಯ ಹಾಸ್ಯ ಇದೆ. ಎಲ್ಲರೂ ಚಿತ್ರವನ್ನ ಚಿತ್ರಮಂದಿರದಲ್ಲೇ ನೋಡಿ ಎಂದ ಯುವ ರಾಜ್ʻಕುಮಾರ್ ಅಣ್ಣ ವಿನಯ್ʻಗೆ ಶುಭ ಹಾರೈಸಿದರು.
ನನ್ನ ಅತಿ ದೊಡ್ಡ ಸ್ಟ್ರೆಂಗ್ತ್ ವಿನು. ನನ್ನ ಪ್ರತಿ ಹೆಜ್ಜೆಯಲ್ಲೂ ಅವನು ನನ್ನ ಜೊತೆಗಿದ್ಧಾನೆ. ಅವನು ಈ ಚಿತ್ರದ ಮೂಲಕ ಗೆಲ್ಲಲಿ ಎಂದ ಯುವ, ವಿನಯ್ ರಾಜ್ʻಕುಮಾರ್ ಅವರಿಗೆ ಶುಭ ಕೋರಿದರು.
ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಸಂಗೀತ ರೊಮ್ಯಾಂಟಿಕ್ ಡ್ರಾಮಾ ಚಿತ್ರ. ಚಿತ್ರಕ್ಕಾಗಿ 8 ಹಾಡುಗಳು ಮತ್ತು ಮೂರು ಬಿಟ್ಸ್ ಗಳಿದ್ದು, ಸಂಗೀತ ಸಂಯೋಜಕ ವೀರ ಸಮರ್ಥ ಅವರದ್ದು. ಇಬ್ಬರು ನಾಯಕಿಯರು. ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಮಧುರಾ ಅನ್ನೋ ಹೆಸರಿನ ಸಿಂಗರ್ ಆಗಿದ್ದರೆ, ಇನ್ನೊಬ್ಬ ನಾಯಕಿ ಸ್ವಾತಿಷ್ಠ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ವಿನಯ್ ಅವರದ್ದು ಮಹತ್ವಾಕಾಂಕ್ಷಿ ಸಂಗೀತ ಸಂಯೋಜಕ ಅತಿಶಯ್‌ನ ಪಾತ್ರ. ರಮೇಶ್ ನಿರ್ಮಾಣದ ಈ ಚಿತ್ರದಲ್ಲಿ ಸಾಧು ಕೋಕಿಲಾ ಮತ್ತು ಅರುಣಾ ಬಾಲರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಚಿತ್ರದ ಪ್ರೀ ರಿಲೀಸ್ ಈವೆಂಟಿನಲ್ಲಿ ಶಿವಣ್ಣ ಮತ್ತು ಗೀತಾ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಹಾಗೆಂದು ಅವರು ದೂರ ಇದ್ದಾರೆ ಎಂದರ್ಥವಲ್ಲ. ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಶಿವಣ್ಣ, ಗೀತಾ ಹಲವು ಬಾರಿ ಭೇಟಿ ಕೊಟ್ಟಿದ್ದಾರೆ. ಶಿವಣ್ಣ ಅವರ ಮಗಳು ಕೂಡಾ ಕೂಡಾ ಶೂಟಿಂಗ್ ಸೆಟ್ಟಿಗೆ ಹಲವು ಬಾರಿ ಹೋಗಿ ಅಣ್ಣನ ಜೊತೆ ನಿಂತಿದ್ಧಾರೆ. ವೇದಿಕೆಯಲ್ಲಿ ಬಂದಷ್ಟೇ ಒಗ್ಗಟ್ಟು ತೋರಿಸಬೇಕು ಎಂದಲ್ಲ ಎನ್ನುವುದು ದೊಡ್ಮನೆಯನ್ನು ಹತ್ತಿರದಿಂದ ನೋಡಿದವರ ಮಾತು.



