ಸಿಪಿಯೋಗೇಶ್ವರ್ ಅವರೀಗ ಕಾಂಗ್ರೆಸ್ ಶಾಸಕ. 15 ದಿನಗಳಲ್ಲಿ ಪಕ್ಷ ಬದಲಾಯಿಸಿ, 25 ಸಾವಿರ ಮತಗಳ ಲೀಡ್ ಪಡೆದು ಗೆದ್ದ ನಾಯಕ. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ಚನ್ನಪಟ್ಟಣ ಎನ್ನುವ ಕ್ಷೇತ್ರ ನಿಲುಕದ ನಕ್ಷತ್ರವಾಗಿತ್ತು. ಸಿಪಿ ಯೋಗೇಶ್ವರ್ ಹೊರತುಪಡಿಸಿ, ಕಾಂಗ್ರೆಸ್ ಪಕ್ಷದಿಂದ ನಿಂತಿದ್ದ ಅಭ್ಯರ್ಥಿಗಳು ಸೋತು ಸೋತು ಸೊರಗಿದ್ದರು. ಇತ್ತೀಚೆಗೆ ಅಲ್ಲಿ ಕಾಂಗ್ರೆಸ್ಸಿಗರು ಗೆದ್ದ ಉದಾಹರಣೆಯೇ ಇರಲಿಲ್ಲ.
ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ಸಿಗೆ ಬಂದು, ಮ್ಯಾಜಿಕ್ ಮಾಡಿಬಿಟ್ಟರು ಯೋಗೇಶ್ವರ್. ಇದು ಡಿಕೆ ಬ್ರದರ್ಸ್‌ಗೆ ಶಕ್ತಿ ತುಂಬಿರುವುದಂತೂ ನಿಜ. ಬೆಂಗಳೂರು ಗ್ರಾಮಾಂತರ ಲೋಕಸಭೆ ಸೋತ ನಂತರ ನಡೆದ ಅದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉಪಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಅವರು ಗೆದ್ದಿದ್ದಾರೆ. ಆದರೆ ಯೋಗೇಶ್ವರ್ ಈಗಲೂ ಹಾರುವ ಹಕ್ಕಿಯೇ. ಏಕೆಂದರೆ ಯೋಗೇಶ್ವರ್ ಇದುವರೆಗೆ ಜೆಡಿಎಸ್ ಬಿಟ್ಟು ಎಲ್ಲ ಪಕ್ಷಗಳಿಗೆ ಹೋಗಿ ಬಂದಿದ್ದಾರೆ. ಈಗಲಾದರೂ ಯೋಗೇಶ್ವರ್ ಕಾಂಗ್ರೆಸ್ಸಿನಲ್ಲಿ ಪರ್ಮನೆಂಟ್ ಆಗಿರುತ್ತಾರಾ ಎಂದರೆ ನೋ ಅಂತಾರೆ ಯೋಗೇಶ್ವರ್.
ನನ್ನ ರಾಜಕೀಯ ಶುರುವಾಗಿದ್ದು ಕಾಂಗ್ರೆಸ್ಸಿನಲ್ಲೇ. ಆದರೆ ಅದಾದ ಮೇಲೆ ನಾನು ನನ್ನ ವೈಯಕ್ತಿಕ ವರ್ಚಸ್ಸು, ಲಾಭಕ್ಕಾಗಿ ಪಕ್ಷಾಂತರ ಮಾಡಿದ್ದೇನೆ. ಈಗಲೂ ಅಷ್ಟೇ, ಡಿಕೆ ಸುರೇಶ್, ಡಿಕೆ ಶಿವಕುಮಾರ್ ಇನ್ನೆಲ್ಲೂ ಹೋಗಬೇಡ, ಇಲ್ಲೇ ಇದ್ದು ಬಿಡು ಎಂದರು. ನಾನು ನೋಡೋಣ, ನಾನು ಎಲ್ಲಿಯೂ ನೆಲೆ ನಿಲ್ಲಲ್ಲ. ನಾನು ಕೇವಲ ನನ್ನ ವೈಯಕ್ತಿಕ ರಾಜಕಾರಣ ಮಾಡ್ತೇನೆ ಎಂದಿದ್ದೇನೆ. ನನ್ನ ಬೆಳವಣಿಗೆ ಇರುವವರೆಗೂ ನಾನು ಈ ಪಕ್ಷದಲ್ಲಿರುತ್ತೇನೆ ಎನ್ನುತ್ತಾರೆ ಯೋಗೇಶ್ವರ್.
ಅಲ್ಲಿಗೆ ಕಾಂಗ್ರೆಸ್ ಕೊನೆಯ ನಿಲ್ದಾಣ ಅಲ್ಲ ಎನ್ನುವ ಯೋಗೇಶ್ವರ್ ಅವರು ಈಗಲೂ ಓಪನ್ ಆಗಿಯೇ ಇದ್ದಾರೆ. ಯೋಗೇಶ್ವರ್ ಅವರು ಪಕ್ಷೇತರರಾಗಿ ಎರಡು ಬಾರಿ, ಕಾಂಗ್ರೆಸ್ಸಿಂದ ಎರಡು ಬಾರಿ, ಬಿಜೆಪಿಯಿಂದ ಒಮ್ಮೆ ಹಾಗೂ ಸಮಾಜವಾದಿ ಪಕ್ಷದಿಂದ ಒಮ್ಮೆ ಗೆದ್ದಿದ್ದಾರೆ.ಆದರೆ ಯೋಗೇಶ್ವರ್ ಯಾವ ಪಕ್ಷದಲ್ಲಿಯೂ ನೆಲೆ ನಿಂತವರಲ್ಲ.
ನನಗೆ ಸಿಎಂ ಆಗಬೇಕು, ದೊಡ್ಡ ನಾಯಕನಾಗಬೇಕು ಎಂಬ ಆಸೆಯೇನೂ ಇಲ್ಲ ಎನ್ನುವ ಯೋಗೇಶ್ವರ್, ಚನ್ನಪಟ್ಟಣಕ್ಕೆ ಹೀರೋ. ಬಿಜೆಪಿಯಲ್ಲಿದ್ದಾಗ ಒಕ್ಕಲಿಗರ ನಾಯಕನಾಗಿ ಬೆಳೆಯುವ ಅವಕಾಶಗಳಿದ್ದರೂ, ಕೊನೆಗೆ ಅವರು ತಮ್ಮನ್ನು ಚನ್ನಪಟ್ಟಣಕ್ಕೆ ಸೀಮಿತ ಮಾಡಿಕೊಂಡಿದ್ದಾರೆ.
ಇನ್ನು ಚನ್ನಪಟ್ಟಣದಲ್ಲಿ ಗೆಲುವಿನ ಲೆಕ್ಕಾಚಾರಗಳೇನೇ ಇರಲಿ, ಸಿಪಿ ಯೋಗೇಶ್ವರ್ ಸಚಿವರಾಗಬಹುದೇ ಎಂಬ ಕುತೂಹಲ ಮೂಡಿದೆ. ಸದ್ಯಕ್ಕೆ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವುದು ನಾಗೇಂದ್ರ ರಾಜೀನಾಮೆ ಕೊಟ್ಟ ನಂತರ ಉಳಿದಿರುವ ಸಚಿವ ಸ್ಥಾನ ಮಾತ್ರ. ನಾಗೇಂದ್ರ ಅವರ ಸ್ಥಾನಕ್ಕೆ ಅವರದ್ದೇ ಸಮುದಾಯದವರೊಬ್ಬರನ್ನು ಮಂತ್ರಿ ಮಾಡುವ ಲೆಕ್ಕಾಚಾರವೂ ಇದೆ. ಜೊತೆಯಲ್ಲೇ ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್ ಸರ್ಜರಿಯಾಗಲಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಸಿಪಿ ಯೋಗೇಶ್ವರ್ ಅವರು ಸಚಿವರಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.



