ಪುನೀತ್, ಶಿವರಾಜ್ ಕುಮಾರ್ ಪಾಲಿಗೆ ಕೇವಲ ತಮ್ಮನಾಗಿರಲಿಲ್ಲ. ಅವರಿಬ್ಬರ ಮಧ್ಯೆ 13 ವರ್ಷಗಳ ಗ್ಯಾಪ್ ಇದ್ದ ಕಾರಣಕ್ಕೋ ಏನೋ.. ಮಗನಂತೆಯೇ ಇದ್ದರು. ಅಪ್ಪು ಚಿತ್ರದ ಕಥೆ ಕೇಳಿದ್ದು, ಪುರಿ ಜಗನ್ನಾಥ್ ಅವರನ್ನು ಒಪ್ಪಿಸಿದ್ದು, ಅಪ್ಪು ಎಂದು ಟೈಟಲ್ ಕೊಟ್ಟಿದ್ದು, ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ದು.. ಎಲ್ಲವೂ ಶಿವಣ್ಣ ಅವರೇ. ಈಗ ಪುನೀತ್ ರಾಜ್ ಕುಮಾರ್ ಅಗಲಿ 4 ವರ್ಷಗಳಾಗಿವೆ. ಅಕ್ಟೋಬರ್ 29ರಂದು ಅಗಲಿದ ಪುನೀತ್ ಅವರನ್ನು ಕನ್ನಡಿಗರು ಇವತ್ತಿಗೂ ಹೃದಯಲ್ಲಿಟ್ಟುಕೊಂಡು ಪೂಜಿಸುತ್ತಿದ್ದಾರೆ.
ರಾಜ್ಯದಾದ್ಯಂತ ಪುನೀತ್ ಪುಣ್ಯ ಸ್ಮರಣೆ ಮಾಡಿದ್ದಾರೆ. ರಾಜ್ ಕುಟುಂಬದವರಷ್ಟೇ ಅಲ್ಲ, ರಾಜ್ಯದ ಸಾವಿರಾರು ಕುಟುಂಬಗಳಲ್ಲಿ ಪುನೀತ್ ಅವರ ಪುಣ್ಯತಿಥಿ ಕಾರ್ಯ ನಡೆದಿದೆ. ಏಕೆಂದರೆ ಅಕ್ಟೋಬರ್ 29, ಪುನೀತ್ ಅಗಲಿದ ದಿನ. ಪುನೀತ್ ಪುಣ್ಯಸ್ಮರಣೆ ಇರುವ ಕಾರಣಕ್ಕೆ ಕಂಠೀರವ ಸ್ಟುಡಿಯೋಗೆ ಬಂದಿದ್ದ ಶಿವರಾಜ್ ಕುಮಾರ್
ʻʻಎಷ್ಟು ವರ್ಷಗಳಾದ್ರೂ ಪುನೀತ್ನ ಮರೆಯೋಕೆ ಆಗೋದಿಲ್ಲ. ಅಪ್ಪು ಇಲ್ಲ ಅಂತಾ ಅಂದುಕೊಂಡ್ರೆ ಕಷ್ಟ. ಆಗ ಅವನನ್ನು ನಾವೇ ಅವಮನ್ನು ದೂರ ಇಟ್ಟಂತೆ. ಅದು ಆಗಲ್ಲ. ಅವನ ನೆನಪಿನಲ್ಲಿ ಬಾಳಬೇಕು. ಅವನ ನೆನಪುಗಳನ್ನು ಇಟ್ಟುಕೊಳ್ಳಬೇಕು. ಎಷ್ಟು ಸಾಧ್ಯ ಆಗುತ್ತೋ ಅಷ್ಟು ಅಪ್ಪು ನಮ್ಮ ಜೊತೆ ಇದ್ದಾನೆ ಅಂತಾ ನಾವು ನಡೆದುಕೊಳ್ಳಬೇಕುʼʼ ಎಂದು ಹೇಳಿಕೊಂಡಿದ್ದಾರೆ. ಅವನ ಹಳೆ ವಿಡಿಯೋಗಳನ್ನು ನೋಡುತ್ತಿದ್ರೆ ಇವತ್ತಿಗೂ ಕಾಡುತ್ತೆ. ಅವನು ಎಲ್ಲವೂ ಗೊತ್ತಿದ್ದು ಗೊತ್ತಿದ್ದೇ ಮಾತನಾಡಿದ್ದಾನಾ ಅಂತಾ ಅನಿಸುತ್ತದೆ. ಅಪ್ಪಾಜಿ ಹಾಗೂ ಅಪ್ಪು ಬಗ್ಗೆ ನಾವು ಪ್ರತಿದಿನ ಮಾತನಾಡುತ್ತಿರುತ್ತೇವೆ. ಅವನನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ ಎಂದು ತಮ್ಮನನ್ನು ಸ್ಮರಿಸಿಕೊಂಡಿದ್ದಾರೆ.
ಪುನೀತ್ ಯಾವುದಾದರೂ ಹೊಸ ಕಾರು ಖರೀದಿಸಿದರೆ.. ಅದನ್ನು ಅಣ್ಣನ ಬಳಿ ತಂದು ಡ್ರೈವ್ ಮಾಡಿಸುತ್ತಿದ್ದರು. ಶಿವಣ್ಣನ ಹುಟ್ಟುಹಬ್ಬಕ್ಕೆ ಖಾಯಂ ಆಗಿ ಗಿಫ್ಟ್ ಕೊಡುತ್ತಿದ್ದರು. ಶಿವಣ್ಣನಿಗೆ ಸೂಟ್ ಆಗುವ ಡ್ರೆಸ್, ಶೂ ತಂದುಕೊಡುತ್ತಿದ್ದರು. ಶಿವಣ್ಣ ಚಿತ್ರಗಳ ರಿಲೀಸ್ ವೇಳೆ ತಮ್ಮ ಅಂಗರಕ್ಷಕರನ್ನೂ ಶಿವಣ್ಣನ ಬಾಡಿಗಾರ್ಡ್ ಆಗಿ ಕಳಿಸುತ್ತಿದ್ದರು. ನಿಧನರಾದ ದಿನವೂ ಅಷ್ಟೇ, ಭಜರಂಗಿ 2 ಬಿಡುಗಡೆ ಇತ್ತು. ಅದಕ್ಕಾಗಿ ತಮ್ಮ ಗನ್ ಮ್ಯಾನ್ʻನ್ನೂ ಕಳಿಸಿಕೊಟ್ಟಿದ್ದರು. ಅವರು ಆವತ್ತು ಪುನೀತ್ ಜೊತೆಯಲ್ಲಿ ಇದ್ದಿದ್ದರೆ.. ಆದರೆ. ಇದ್ದರೆ.. ಎಂಬುದನ್ನೆಲ್ಲ ಕನವರಿಸಿಕೊಳ್ಳುವ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಇದ್ದಾರೆ.
ಇನ್ನು ಯುವ ರಾಜ್ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ಅಪ್ಪು ಜೊತೆ ವರ್ಕ್ ಔಟ್ ಮಾಡುವ ಹಳೇ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ-ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಅಪ್ಪು ಅವರ ಸವಿನೆನಪಿನಲ್ಲಿ 4 ವರ್ಷಗಳು ಎಂದು ಬರೆದುಕೊಂಡು ನಿಮ್ಮ ದೈನಂದಿನ ಕಾರ್ಯಗಳಲ್ಲಿ ಅಪ್ಪುವನ್ನು ಜೀವಂತವಾಗಿಟ್ಟಿರುವ ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು ಎಂದು ಹೇಳಿದ್ದಾರೆ. ಪುನೀತ್ ಸತ್ತಿಲ್ಲ ಎಂದು ನಂಬುವ ಸಾವಿರಾರು ಹೃದಯಗಳು ಇವತ್ತಿಗೂ ಕರ್ನಾಟಕದಲ್ಲಿವೆ.



