ದರ್ಶನ್ ಅವರು ಸಲೀಸಾಗಿ ಓಡಾಡೋಕೂ ಆಗ್ತಾ ಇಲ್ಲ ಅಷ್ಟರಮಟ್ಟಿಗೆ ದರ್ಶನ್ ಅವರ ಬೆನ್ನುಹುರಿ ಸಮಸ್ಯೆ ತೀವ್ರವಾಗಿದೆ. ನಿದ್ರೆ ಮಾಡೋಕೂ ಆಗ್ತಿಲ್ಲ. ಅಷ್ಟೊಂದು ನೋವು. ಕಳೆದೆರಡು ವಾರಗಳಿಂದ ದರ್ಶನ್‌ಗೆ ಬೆನ್ನು ನೋವು ತಡೆಯುವುದಕ್ಕೆ ಆಗದೇ, ಹೈ ಸೆಕ್ಯುರಿಟಿ ಸೆಲ್‌ನಲ್ಲೇ ಒಬ್ಬರೇ ಒದ್ದಾಡುತ್ತಿದ್ದದನ್ನು ನೋಡಿದ ಜೈಲಿನ ಅಧಿಕಾರಿಗಳು ಬಲವಂತವಾಗಿಯೇ ಚಿಕಿತ್ಸೆ ಕೊಡಿಸಿದ್ದರು. ಈಗ ವೈದ್ಯರು ಆಪರೇಷನ್ ಆಗದೇ ಇದ್ದರೆ ಕಷ್ಟ ಕಷ್ಟ ಎಂದು ರಿಪೋರ್ಟ್ ಕೊಟ್ಟಿದ್ದಾರಂತೆ.
ಜೈಲಿಗೆ ವಿಮ್ಸ್ ನ ಅರ್ಥೊಪೆಡಿಕ್ ಹಾಗೂ ನ್ಯೂರೋ ಸರ್ಜನ್ ಡಾ. ವಿಶ್ವನಾಥ ಭೇಟಿ ನೀಡಿ, ದರ್ಶನ್ ಆರೋಗ್ಯ ಪರಿಶೀಲನೆ ಮಾಡಿದ್ದರು. ತಕ್ಷಣ ಸ್ಕ್ಯಾನಿಂಗ್ ಮಾಡಿಸಬೇಕು ಅಂತ ಸೂಚನೆ ನೀಡಿದ್ದರಷ್ಟೇ ಅಲ್ಲ, ಪೇನ್ ಕಿಲ್ಲರ್ ಮಾತ್ರೆಗಳನ್ನು ಕೊಟ್ಟಿದ್ದರು. ಮೆಡಿಕಲ್ ಬೆಡ್, ದಿಂಬು ಹಾಗೂ ಚೇರ್ ನೀಡುವಂತೆ ಸೂಚಿಸಿದ್ದರು. ಈಗ ಪ್ರತಿದಿನ ಡಾ. ವೆಂಕಟ ಸುಬ್ಬಾರೆಡ್ಡಿಯಿಂದ ಫಿಸಿಯೋಥೆರಪಿ ನಡೆಯುತ್ತಿದೆ.
ಅದಾದ ಮೇಲೆಯೂ ಸರಿಹೋಗದ ಕಾರಣ ಅಕ್ಟೋಬರ್ 22ರಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಸ್ಕ್ಯಾನಿಂಗ್ ಮಾಡಿಸಿದ್ದರು. ರಿಪೋರ್ಟ್ ಈಗ ಜೈಲಿನ ಅಧಿಕಾರಿಗಳ ಕೈಸೇರಿದೆ. MRI ಸ್ಕ್ಯಾನ್ ಸಂದರ್ಭದಲ್ಲಿ L 5, S1ನಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ನಿರ್ಲಕ್ಷ್ಯ ಮಾಡದೇ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಒಂದು ವೇಳೆ ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಪ್ಪದೆ ಇದ್ದರೆ, ಮುಂದೆ ಸಮಸ್ಯೆಯನ್ನು ಎದುರಿಸಬೇಕಾಗುತ್ತೆ ಎಂದು ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ದರ್ಶನ್ ಬಳ್ಳಾರಿಯಲ್ಲಿ ಶಸ್ತ್ರ ಚಿಕಿತ್ಸೆ ಬೇಡ.
ಬೆಂಗಳೂರಿನಲ್ಲಿಯೇ ಮಾಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆಂದು ವರದಿ ಮಾಡಲಾಗಿದೆ. ಸದ್ಯ ಶಸ್ತ್ರ ಚಿಕಿತ್ಸೆ ಯಾವಾಗ? ಎಲ್ಲಿ ಮಾಡಿಸಿಕೊಳ್ಳುತ್ತಾರೆ? ಅನ್ನೋದು ಸದ್ಯ ಇನ್ನೂ ನಿರ್ಧಾರ ಆಗಬೇಕಿದೆ.
ಈ ಮಧ್ಯೆ ಜೈಲಿಂದ ಹೊರಗೆ ನವಗ್ರಹ ರೀ-ರಿಲೀಸ್ ಆಗುತ್ತಿದೆ. ದರ್ಶನ್ ಜೈಲು ಸೇರಿದಾಗಿನಿಂದ ದರ್ಶನ್ ಅಭಿನಯದ ಹಳೆಯ ಚಿತ್ರಗಳು ಮತ್ತೆ ಮತ್ತೆ ರಿಲೀಸ್ ಆಗುತ್ತಿವೆ. ಎಷ್ಟೋ ಹೊಸ ಚಿತ್ರಗಳಿಗಿಂತ ಹಳೆಯ ಚಿತ್ರಗಳೇ ಭರ್ಜರಿ ಲಾಭ ಮಾಡುತ್ತಿವೆ. ಆ ಹಾದಿಗೆ ಈಗ ನವಗ್ರಹ ಕೂಡಾ ಸೇರುತ್ತಿದೆ. ‘ನವಗ್ರಹ’ ಸಿನಿಮಾಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ೨ನೇ ಚಿತ್ರ. ಚಿತ್ರದಲ್ಲಿ ದರ್ಶನ್ ಹೀರೋ ಅಲ್ಲ, ವಿಲನ್. ದರ್ಶನ್ ಜೊತೆ ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. 2008ರ ನವೆಂಬರ್ 7ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ವರ್ಷ ನವೆಂಬರ್ 8ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ.
16 ವರ್ಷಗಳ ನಂತರ ಮತ್ತೊಮ್ಮೆ ಬಿಡುಗಡೆಯಾಗುತ್ತಿರೋ ಚಿತ್ರ ಸಹಜವಾಗಿಯೇ ದಿನಕರ್ ಅವರ ಸಂಭ್ರಮಕ್ಕೆ ಕಾರಣವಾಗಿದೆ. ಒಂಬತ್ತು ಕಳ್ಳರು ಮೈಸೂರಿನ ಚಿನ್ನದ ಅಂಬಾರಿಯನ್ನು ಕದಿಯಲು ಪ್ರಯತ್ನಿಸುವ ಥ್ರಿಲ್ಲರ್ ಕಥೆ ನವಗ್ರಹ ಚಿತ್ರದಲ್ಲಿದೆ.



