ಗುತ್ತಿಗೆದಾರರು ರಾಜ್ಯಪಾಲರಿಗಾದರೂ ದೂರು ಕೊಡಲಿ, ಪ್ರಧಾನಿಗಾದರೂ ಕೊಡಲಿ. ಬಿಲ್ ಪಾವತಿ ಬಾಕಿ ಕುರಿತಾಗಿ ಯಾವುದೇ ಬ್ಲ್ಯಾಕ್ ಮೇಲ್ ಅಥವಾ ಬೆದರಿಕೆಗೆ ನಾನು ಹೆದರುವುದಿಲ್ಲ. ‘ಅವರು ಏನು ಬೇಕಾದರು ಮಾಡಲಿ, ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಬ್ಲ್ಯಾಕ್ಮೇಲ್, ಬೆದರಿಕೆ, ರಾಜ್ಯಪಾಲರು, ಪ್ರಧಾನಿಗೆ ದೂರು ಕೊಡುವುದು ಏನು ಬೇಕಾದರೂ ಮಾಡಲಿ. ಒಂದೇ ತಿಂಗಳಲ್ಲಿ ಒಂದು ಸಾವಿರ ಕೋಟಿ ರು. ಮೊತ್ತದ ಕೆಲಸ ಆಗುತ್ತಾ? ಅದರ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದ್ದೇನೆ. ಕೆಲಸ ಮಾಡಲಾಗಿದೆಯಾ ಎಂಬ ಬಗ್ಗೆ ದೃಢೀಕರಿಸಿದರೆ ಬಿಲ್ ಪಾವತಿ ಮಾಡುತ್ತಾರೆ.
ಇದು ಗುತ್ತಿಗೆದಾರರ ಬಿಲ್ ಕೊಡುತ್ತಿಲ್ಲ ಎಂಬ ಆರೋಪಕ್ಕೆ ಡಿಕೆ ಶಿವಕುಮಾರ್ ಕೊಟ್ಟ ಉತ್ತರ.
ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ ಎಂದಿರುವ ಡಿಕೆ ಶಿವಕುಮಾರ್ ನಾವು ಇರೋದು ಪಾಲಿಸಿ ಮಾಡೋಕೆ, ಕಂಟ್ರಾಕ್ಟರ್ಗಳ ಬಗ್ಗೆ ತಲೆ ಹಾಕಲ್ಲ. ಗುತ್ತಿಗೆದಾರರು ನನ್ನ ಬಳಿಯೇ ಬಂದಿದ್ರು. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಆಗುತ್ತದೆ. ಹಿಂದಿನ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡಲು ನನ್ನ ತಕರಾರು ಇಲ್ಲ. ಆದರೆ ಕೆಲ ಕಾಮಗಾರಿಗಳ ಬಿಲ್ ಗಳು ಅನುಮಾನ ಮೂಡಿಸುವಂತಿವೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಬಿಲ್ಗಳನ್ನು ಬಿಡುಗಡೆ ಮಾಡಲ್ಲ. ಆದಷ್ಟು ಬೇಗ ತನಿಖೆ ಮುಗಿಸಿ, ವರದಿ ತರಿಸುತ್ತೇನೆ. ಯಾವ ಕಾಮಗಾರಿಗಳು ಸರಿಯಾಗಿ ನಡೆದಿವೆ. ಅಂತಹ ಬಿಲ್ ಗಳನ್ನು ಬಿಡುಗಡೆ ಮಾಡಿಸೋಣ. ಈಗ ರಾಜಕೀಯ ಒತ್ತಡ ಹಾಕಲು ಹೀಗೆ ಮಾಡುತ್ತಿದ್ದಾರೆ ಅಷ್ಟೇ . ಈ ಬ್ಲಾಕ್ಮೇಲ್ಗೆಲ್ಲಾ ಈ ಡಿಕೆ ಶಿವಕುಮಾರ್ ಹೆದರಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ.
ಇರೋದು 600 ಕೋಟಿ. ಬಿಲ್ 25 ಸಾವಿರ ಕೋಟಿ. ಏನ್ಮಾಡೋಣ?
ಜಲಸಂಪನ್ಮೂಲ ಇಲಾಖೆಯಲ್ಲಿ ಇರುವುದು 600 ಕೋಟಿ ರೂ. ಆದರೆ 25 ಸಾವಿರ ಕೋಟಿ ಬಿಲ್ ಇದೆ. ಎಲ್ಲಿಂದ ಕೊಡುವುದು? ಕೆಲಸ ಮಾಡದವರಿಗೆಲ್ಲ ದುಡ್ದು ಕೊಡಲು ಆಗುತ್ತದೆಯೇ? ಇವತ್ತು ಅರ್ಜಿ ಕೊಟ್ಟರು, ನಾಳೆ ಟೆಂಡರ್ ಆಯಿತು, ಒಂದು ತಿಂಗಳಲ್ಲಿ 1 ಸಾವಿರ ಕೋಟಿ ರೂ. ಕೆಲಸ ಮಾಡಲು ಆಗುತ್ತಾ ನೀವೇ ಹೇಳಿ. ಅಧಿಕಾರಿಗಳಿಗೆ ಹೇಳಿದ್ದೇವೆ, ಮೌಲ್ಯಮಾಪನ ಮಾಡಿ, ಕೆಲಸ ಆಗಿದ್ದರೆ ಬಿಲ್ ಮಾಡಿ ಎಂದು. ಅವರು ಆ ಕೆಲಸ ನೋಡಿಕೊಳ್ಳುತ್ತಾರೆ. ಸರ್ಕಾರ ಇರುವುದು ನೀತಿ ರೂಪಿಸಲು. ಹಾಗಾಗಿ ನಾವು ಬಿಲ್ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್.
ಪೂರ್ಣವಾಗಿರುವ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗುತ್ತಿಗೆದಾರರು ರಾಜ್ಯಪಾಲರ ಮೊರೆ ಹೋಗಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ ಟಿ ಮಂಜುನಾಥ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು.



