ಇಂಥಾದ್ದೊಂದು ಆರೋಪವನ್ನು ಮಾಡಿದ ಮೊದಲಿಗ ಹೆಚ್.ಡಿ.ಕುಮಾರಸ್ವಾಮಿ. ಬಿಬಿಎಂಪಿಯಲ್ಲಿ ತಡೆಹಿಡಿಯಲಾಗಿದ್ದ ಕೆಲವೊಂದಿಷ್ಟು ಕಾಮಗಾರಿಗಳ ಬಿಲ್ ರಿಲೀಸ್ ಆದಾಗ ಕಮಿಷನ್ ಪಡೆಯುವದಕ್ಕಾಗಿಯೇ ನಡೆಯುತ್ತಿರುವ ವ್ಯವಹಾರ ಎಂದು ಆರೋಪಿಸಿದ್ದರು ಹೆಚ್ಡಿಕೆ. ಆಗ ಇದನ್ನು ಕುಮಾರಸ್ವಾಮಿ ಸಿಕ್ಕಿದ್ದನ್ನೆಲ್ಲ ಸುಖಾಸುಮ್ಮನೆ ಹೈಲೈಟ್ ಮಾಡುತ್ತಾರೆ.. ಟಿವಿ ಚಾನೆಲ್ಲುಗಳಿಗೆ ಹೆಡ್ ಲೈನ್ ಕೊಡ್ತಾರೆ ಅಷ್ಟೇ ಎಂದು ಲೇವಡಿ ಮಾಡಿದ್ದವರಿಗೆ ಅವರು ಹೇಳಿದಂತೆಯೇ ಹಣ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಮಾಜಿ ಕಾರ್ಪೊರೇಟರ್ ಅವರ ಪತಿ, ಕಾಂಟ್ರಾಕ್ಟರ್ ಅಂಬಿಕಾಪತಿ ಮನೆಯ ಬೆಡ್ ರೂಮಿನಲ್ಲಿ ಸಿಕ್ಕಿದ್ದು ಕೇವಲ ಕ್ಯಾಷ್ ಮೊತ್ತವೇ 42 ಕೋಟಿ. ಅದೂ 22 ಬಾಕ್ಸುಗಳಲ್ಲಿ ಇಡಲಾಗಿದ್ದು 500-500 ನೋಟುಗಳ ಕಂತೆ ಕಂತೆ.
ಏಕೆಂದರೆ ಗುತ್ತಿಗೆದಾರನೂ ಆಗಿರುವ ಅಂಬಿಕಾಪತಿ, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ. ಬಿಬಿಎಂಪಿಯಲ್ಲಿ ಈಕೆಯ ಪತ್ನಿ ಅಶ್ವತ್ಥಮ್ಮ ಕಾರ್ಪೊರೇಟರ್ ಆಗಿದ್ದವರು. ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಅಶ್ವತ್ಥಮ್ಮ ತಂಗಿಯಾಗಬೇಕು. ಐಟಿ ರೇಡ್ ನಡೆದು, ಎಲ್ಲ 42 ಕೋಟಿ ಹಣ ಮತ್ತು ಚಿನ್ನ, ಆಭರಣಗಳನ್ನೆಲ್ಲ ಐಟಿ ವಶಕ್ಕೆ ತೆಗೆದುಕೊಂಡಿದೆ.
ಇದು ಎಲೆಕ್ಷನ್ ದುಡ್ಡು ಎಂದ ಕುಮಾರಸ್ವಾಮಿ
ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ! ಅದೂ ಮಂಚದ ಕೆಳಗೆ!! ಎಂದು ವ್ಯಂಗ್ಯವಾಡಿದ್ದಾರೆ ಕುಮಾರಸ್ವಾಮಿ. ಐಟಿದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು?” ಎಂದು ಪುಂಖಾನುಪುಂಖಾವಾಗಿ ಕಾಂಗ್ರೆಸ್ ನತ್ತ ಪ್ರಶ್ನೆಗಳ ಬಾಣಗಳನ್ನು ಎಸೆದಿರುವ ಅವರು, 23 ಬಾಕ್ಸ್ ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ ಎಂದಿದ್ದಾರೆ.
ಕುಮಾರಸ್ವಾಮಿ ಅವರ ಸುದ್ದಿ ಮೂಲದ ಬಗ್ಗೆ ಪ್ರಶ್ನಿಸುವಂತಿಲ್ಲ. ಮೂಲಗಳ ಪ್ರಕಾರ ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ ಹಣ ಎನ್ನುವ ಮಾಹಿತಿ ಇದೆ. ಕುಮಾರಸ್ವಾಮಿ ಅವರ ಪ್ರಕಾರ ಇದು ಬಿಡಿಎಯಿಂದ ಬಂದ ಕಮಿಷನ್. ಇದು ಆರೋಪ ಮಾತ್ರ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್ ಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ಕಾಂಗ್ರೆಸ್ ಸರಕಾರದಲ್ಲಿ ಪರ್ಸಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು? ಈಗ ಹೇಳಿ ಸನ್ಮಾನ್ಯ ಸಿದ್ದರಾಮಯ್ಯನವರೇ.. 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಈಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು..? ದಯಮಾಡಿ ಹೇಳಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಿಚಾಯಿಸಿದ್ದಾರೆ. ಕುಮಾರಸ್ವಾಮಿ ಅವರು ಬಳಸಿರುವ ಕನಕ, ಮಹಾಲಕ್ಷ್ಮಿ ಪದಗಳಲ್ಲಿಯೇ ಏನಾದರೂ ಕ್ಲೂ ಸಿಗಬಹುದೇ ಎಂಬ ಹುಡುಕಾಟ ಶುರುವಾಗಿರುವುದು ಸುಳ್ಳಲ್ಲ.
ಸಿದ್ದರಾಮಯ್ಯ ಅವರ ಪ್ರಕಾರ ಇದು ಎಲೆಕ್ಷನ್ ಹಣ ಅಲ್ಲ. ರಾಜ್ಯದ ಹಣ ಪಂಚರಾಜ್ಯಗಳ ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬ ಬಿಜೆಪಿ ಶಾಸಕರ ಆರೋಪ ಸಂಪೂರ್ಣ ಸುಳ್ಳು. ಅದನ್ನು ಅವರು ನೋಡಿದ್ದಾರಾ? ಅಥವಾ ನೀವು ನೋಡಿದ್ದೀರಾ? ಇಂತಹ ಸುಳ್ಳು ಆರೋಪಗಳಿಗೆ ನಾವು ಉತ್ತರ ಕೊಡಬೇಕಾಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರಂತೂ ಇದು ಪೊಲಿಟಿಕಲ್ ದಾಳಿ ಎಂದಷ್ಟೇ ಹೇಳಿದ್ದಾರೆ. ಯಾವ ರಾಜಕೀಯ ದಾಳಿಯಾದರೂ ಆಗಿರಲಿ, ಒಬ್ಬ ಗುತ್ತಿಗೆದಾರನ ಮನೆಯಲ್ಲಿ ಅಷ್ಟೊಂದು ನಗದು ಸಿಕ್ಕಿದ್ದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಬಂದಿಲ್ಲ. ಅಂದಹಾಗೆ ಅಂಬಿಕಾಪತಿ ಡಿಕೆಶಿಯವರ ಆಪ್ತ ಎನ್ನಲಾಗಿದೆ. ಅಲ್ಲದೆ ಬೆಂಗಳೂರಿನ ಪ್ರಭಾವಿ ಸಚಿವರಿಗೆ ತೀರಾ ಹತ್ತಿರವಾದವರು ಎನ್ನಲಾಗಿದೆ.
ಅಂಬಿಕಾಪತಿಗೆ ಕ್ಲೀನ್ ಚಿಟ್ ಕೊಟ್ಟ ಕೆಂಪಣ್ಣ
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರೂ ಆಗಿರುವ ಅಂಬಿಕಾಪತಿಗೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅವರ ಪ್ರಕಾರ ಅಂಬಿಕಾಪತಿ 8 ವರ್ಷಗಳಿಂದ ಗುತ್ತಿಗೆಯನ್ನೇ ಮಾಡುತ್ತಿಲ್ಲ. ಹೀಗಾಗಿ ಗುತ್ತಿಗೆ ಕಮಿಷನ್, ಇತ್ಯಾದಿ ಆರೋಪಗಳೆಲ್ಲ ಸುಳ್ಳು ಅನ್ನೋದು ಕೆಂಪಣ್ಣ ಅವರ ವಾದ.



