ಗಾಜಾ ಪಟ್ಟಿಯಲ್ಲಿ (Gaza strip) ಇಸ್ರೇಲ್ (Israel counter war) ನಡೆಸುತ್ತಿರುವ ಪ್ರತಿದಾಳಿ ಅಕ್ಷರಶಃ ಪ್ರದೇಶವನ್ನು ಸ್ಮಶಾನವನ್ನಾಗಿಸಿದೆ. ಸತತ 10 ದಿನಗಳಿಂದ ನಡೆಯುತ್ತಿರುವ ಪ್ರತಿದಾಳಿಯಲ್ಲಿ ಸತ್ತವರ ಸಂಖ್ಯೆ ಸಾವಿರಾರು. ಇಸ್ರೇಲ್ ಮೇಲೆ ಹಮಾಸ್ ಉಗ್ರರು (Hamas terrorists ) ನಡೆಸಿದ ಭೀಕರ ನರಮೇಧಕ್ಕೆ ಪ್ರತಿಯಾಗಿ ದಾಳಿ ನಡೆಯುತ್ತಿದೆ. ಗಾಜಾದಲ್ಲಿರುವ ಹಮಾಸ್ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಆದರೆ ಯಹೂದಿ ದೇಶವಾಗಿರುವ ಇಸ್ರೇಲ್ ಮುಸ್ಲಿಮರ ಮೇಲೆ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿ ಹಲವರು ಪ್ಯಾಲೆಸ್ತಿನ್ಗೆ ಬೆಂಬಲ ನೀಡುತ್ತಿದ್ದಾರೆ.
ವಿಶ್ವದ ಮುಸ್ಲಿಮರೆಲ್ಲ ಒಂದಾಗುತ್ತಾರೆ.. ಎಚ್ಚರ : ಇರಾನ್
ಗಾಜಾಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರ ನಿಲ್ಲಿಸದಿದ್ದರೆ ವಿಶ್ವದೆಲ್ಲೆಡೆ ಇರುವ ಮುಸ್ಲಿಮರನ್ನು (Muslim world) ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು (Iran president) ಇರಾನ್ ದೇಶದ ಮುಖ್ಯಸ್ಥ ಅಯತೊಲ್ಲಾ ಅಲಿ ಖಮೇನಿ (ayatollah Khomeini ) ಎಚ್ಚರಿಕೆ ನೀಡಿದ್ಧಾರೆ. ಇಸ್ರೇಲ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಇರಾನ್ ದೇಶದ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಹಲವು ಅತ್ಯುಗ್ರ ಹೇಳಿಕೆಗಳನ್ನು ನೀಡಿದ್ದು, ಗಾಜಾಪಟ್ಟಿಯಲ್ಲಿ ಇಸ್ರೇಲ್ನ ದೌರ್ಜನ್ಯ ನಿಲ್ಲಲೇ ಬೇಕು ಎಂದು ಆಗ್ರಹಿಸಿದ್ದಾರೆ.
ಇರಾನ್ ದೇಶದ ಸರ್ಕಾರಿ ವಾಹಿನಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರ ಹಲವು ನೇರಾನೇರ ಎಚ್ಚರಿಕೆ ಸಂದೇಶಗಳು ಪ್ರಕಟವಾಗಿವೆ. ವಿಶ್ವಾದ್ಯಂತ ಇರುವ ಮುಸ್ಲಿಮರು ಹಾಗೂ ಪ್ರತಿರೋಧ ಪಡೆಗಳು ಇಸ್ರೇಲ್ ವಿರುದ್ಧ ಮುಗಿಬೀಳುವ ಎಚ್ಚರಿಕೆಯನ್ನು ಅವರು ರವಾನಿಸಿದ್ದಾರೆ.
ನ್ಯೂಕ್ಲಿಯರ್ ಬಾಂಬ್ ಬಳಸೋಣ : ಪಾಕಿಸ್ತಾನದ ಸಂಸತ್ ಸದಸ್ಯೆ
ಪಾಕಿಸ್ತಾನ (Pakistan) ಕೂಡ ಹಿಂದೆ ಬಿದ್ದಿಲ್ಲ. ಇಂದು ಪಾಕಿಸ್ತಾನದ ಸಂಸತ್ತಿನಲ್ಲಿ ಎಚ್ಚರಿಕೆ ಗಂಟೆಗಳು ಮೊಳಗಿದೆ. ಪಾಕಿಸ್ತಾನದ ಮಹಿಳಾ ಸಂಸದೆ, ಮಾಜಿ ಪ್ರಧಾನಿ ನವಾಜ್ ಷರೀಫ್ ಸೊಸೆ (Nawaz Sharif) ಆಡಿದ ಮಾತುಗಳು ಭಾರಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿರುವ ನ್ಯೂಕ್ಲಿಯರ್ ಬಾಂಬ್ (nuclear bomb) ಸುಮ್ಮನೆ ನೋಡಲು ಇಟ್ಟಿಲ್ಲ. ಅದು ಪಾಕಿಸ್ತಾನ ಹಾಗೂ ಮುಸ್ಲಿಮರ ರಕ್ಷಣೆಗಾಗಿ ಇಡಲಾಗಿದೆ. ಇಸ್ರೇಲ್ ದಾಳಿ ಮುಂದುವರಿಸಿದರೆ ನ್ಯೂಕ್ಲಿಯರ್ ಬಾಂಬ್ ಬಳಸಿ ವಿಶ್ವ ಭೂಪಟದಿಂದ ಇಸ್ರೇಲ್ ಮಾಯ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಪಾಕಿಸ್ತಾನ ಹಲವು ಬಾರಿ ಭಾರತದ ವಿರುದ್ಧ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸುವ ಮಾತನಾಡಿದೆ. ಇದೀಗ ಇಸ್ರೇಲ್ಗೆ ಎಚ್ಚರಿಕೆ ನೀಡಿದೆ. ಇದು ಪಾಕಿಸ್ತಾನದ ಸಂಸತ್ತಿನಲ್ಲಿ ಪಾಕ್ ಮಹಿಳಾ ಸಂಸದರು ನೀಡಿದ ಎಚ್ಚರಿಕೆ. ಇದಕ್ಕೆ ಇತರ ಸಂಸದರು ಮೇಜು ತಟ್ಟಿ ಬೆಂಬಲಿಸಿದ್ದಾರೆ. ಮಾಜಿ ಪ್ರಧಾನಿ, ಪಾಕಿಸ್ತಾನದಿಂದ ಪಲಾಯನ ಮಾಡಿರುವ ನವಾಜ್ ಷರೀಫ್ ಸೊಸೆ ಈ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ.
ನಾವು ನ್ಯೂಕ್ಲಿಯರ್ ಬಾಂಬ್ ಹೊಂದಿದ ದೇಶ. ಈ ಬಾಂಬ್ಗಳನ್ನು ನೋಡಲು ತಯಾರಿಸಿಲ್ಲ. ಇದು ಪಾಕಿಸ್ತಾನ ಹಾಗೂ ಮುಸ್ಲಿಮರ ರಕ್ಷಣೆಗಾಗಿ ಮಾಡಲಾಗಿದೆ. ಪ್ಯಾಲೆಸ್ತಿನಿಯರ ಮೇಲೆ ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಈ ಬಾಂಬ್ ಬಳಸಿ ವಿಶ್ವಭೂಪಟದಿಂದ ಇಸ್ರೇಲ್ ಹೆಸರೇ ಅಳಿಸಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಬಲ ಕೊಡುತ್ತೇವೆ, ನಮ್ಮ ದೇಶಕ್ಕೆ ಮಾತ್ರ ಬರಬೇಡಿ : ಇದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಅಕ್ಕಪಕ್ಕ ಇರುವ ದೇಶಗಳ ವಾದ. ಇಸ್ರೇಲ್ ವಿರುದ್ಧ ಜಗತ್ತಿನ ಹಲವೆಡೆ ಪ್ರತಿಭಟನೆ ನಡೆಯುತ್ತಿವೆ. ಈ ಮಧ್ಯೆ 10 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಗರು ವಲಸೆ ಹೊರಟಿದ್ದಾರೆ. ಆದರೆ ನೆರೆಹೊರೆ ರಾಷ್ಟ್ರಗಳಾದ ಮುಸ್ಲಿಂ ರಾಷ್ಟ್ರಗಳೇ ಆಗಿರುವ ಜೋರ್ಡಾನ್, ಈಜಿಪ್ಟ್, ಇರಾನ್ ಸೇರಿದಂತೆ ಯಾವೊಂದು ದೇಶವೂ ಪ್ಯಾಲೆಸ್ತೀನಿಗೆ ಆಶ್ರಯ ಕೊಡುತ್ತಿಲ್ಲ. ಬದಲಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುತ್ತಿವೆ.
ಅತ್ತ ಬೆಲ್ಜಿಯಂ, ಫ್ರಾನ್ಸ್, ಇಟಲಿ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲೂ ಪ್ಯಾಲೆಸ್ತೀನ್ ಪರ ಮುಸ್ಲಿಮರು ಹೋರಾಟ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ಶ್ವೇತ ಭವನಕ್ಕೇ ನುಗ್ಗಲು ಯತ್ನಿಸಿದ್ಧಾರೆ.



